ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನೇನೂ ಉಗ್ರರನ್ನು ಸೃಷ್ಟಿಸ್ತಿಲ್ಲ, ದೇಶಭಕ್ತರನ್ನು: ಬಾಬಾ ಸ್ಪಷ್ಟನೆ
(Baba Ramdev | Nationalist | Corruption | Black Money)
ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ಸಶಸ್ತ್ರ ಪಡೆ ರಚಿಸುವ ಪ್ರಸ್ತಾಪಕ್ಕೆ ಎಲ್ಲೆಡೆಯಿಂದ ಟೀಕೆಗೆ ಗುರಿಯಾಗಿರುವ ಯೋಗ ಗುರು ಬಾಬಾ ರಾಮದೇವ್, ತಾವೇನೂ ಭಯೋತ್ಪಾದಕರನ್ನಾಗಲೀ, ಮಾವೋವಾದಿಗಳನ್ನಾಗಿ ಸೃಷ್ಟಿಸುವುದಿಲ್ಲ, ಬದಲಾಗಿ ರಾಷ್ಟ್ರೀಯವಾದಿ ಸೇನೆಯನ್ನು ಕಟ್ಟಲು ಮಾತ್ರ ಯೋಚಿಸಿದ್ದೆ ಎಂದಿದ್ದಾರೆ.
'ಉಗ್ರಗಾಮಿಗಳು, ನಕ್ಸಲರು ಅಥವಾ ಮಾವೋವಾದಿಗಳನ್ನೇನೂ ಸೃಷ್ಟಿಸುತ್ತೇನೆ ಎಂದು ನಾನು ಹೇಳಿರಲಿಲ್ಲ. ಇದು ಆತ್ಮರಕ್ಷಣೆಗಾಗಿ ಇರುವ ದೇಶ ಬಗ್ಗೆ ಭಕ್ತಿ ಇರುವ ರಾಷ್ಟ್ರೀಯವಾದಿಗಳ ಪಡೆ' ಎಂದು ಭ್ರಷ್ಟಾಚಾರದ ವಿರುದ್ಧ ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ ಉಪವಾಸ ಮುಂದುವರಿಸುತ್ತಿರುವ ಬಾಬಾ ರಾಮದೇವ್ ತಿಳಿಸಿದ್ದಾರೆ.
ಭ್ರಷ್ಟಾಚಾರ ವಿರೋಧಿ ಆಂದೋಲನ ತಡೆಯುವ ಶಕ್ತಿಗಳನ್ನು ಎದುರಿಸಲು 11 ಸಾವಿರ ಮಂದಿಯನ್ನು ಶಸ್ತ್ರ ಮತ್ತು ಶಾಸ್ತ್ರ ವಿದ್ಯೆಗಳಲ್ಲಿ ಪಾರಂಗತರನ್ನಾಗಿ ಮಾಡಲಾಗುತ್ತದೆ ಎಂಬ ಹೇಳಿಕೆಗೆ ಎಲ್ಲೆಡೆಯಿಂದ ಟೀಕೆ ಬಂದಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.
"ಬಾಬಾ ರಾಮದೇವ್ ಈ ರೀತಿ ಹೇಳುವ ಮೂಲಕ ತಮ್ಮ ನಿಜ ಬಣ್ಣ ಬಯಲು ಮಾಡಿದ್ದಾರೆ. ಅವರು ಹಾಗೆ ಮಾಡಲಿ, ಕಾನೂನು ನೋಡಿಕೊಳ್ಳುತ್ತದೆ" ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಎಚ್ಚರಿಸಿದ್ದರೆ, "ಇದು ರಾಷ್ಟ್ರವಿರೋಧಿ ಹೇಳಿಕೆ, ಈ ಬಗ್ಗೆ ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ" ಎಂದು ಪ್ರಧಾನಿ ಕಾರ್ಯಾಲಯದ ರಾಜ್ಯಖಾತೆ ಸಚಿವ ವಿ.ನಾರಾಯಣ ಸ್ವಾಮಿ ಹೇಳಿದ್ದರು.
ಗಾಯಾಳುಗಳ ಚಿಕಿತ್ಸಾ ವೆಚ್ಚ ಹೊಣೆ ಇದೇ ವೇಳೆ, ರಾಮಲೀಲಾ ಮೈದಾನದಲ್ಲಿ ಮಲಗಿದ್ದ ಅಮಾಯಕರ ಮೇಲೆ ಮಧ್ಯರಾತ್ರಿಯಲ್ಲಿ ಪೊಲೀಸರು ದಾಳಿ ನಡೆಸಿದ ಪರಿಣಾಮವಾಗಿ ಗಾಯಗೊಂಡಿರುವ ಎಲ್ಲ ಸತ್ಯಾಗ್ರಹಿಗಳ ಚಿಕಿತ್ಸಾ ವೆಚ್ಚವನ್ನು ತಾವು ಭರಿಸುವುದಾಗಿ ಹೇಳಿರುವ ಬಾಬಾ ರಾಮದೇವ್, ವಿಶೇಷವಾಗಿ ರಾಜ ಬಾಲಾ ಎಂಬ ಮಹಿಳೆಯ ಶಸ್ತ್ರಕ್ರಿಯೆ ಸಹಿತ ಎಲ್ಲದಕ್ಕೂ ಪೂರ್ಣ ನೆರವು ನೀಡುವುದಾಗಿ ಹೇಳಿದ್ದಾರೆ.