ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬಾ ರಾಮದೇವ್ ಆಸ್ತಿ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳ ಕಣ್ಣು
(Baba Ramdev | Asset | Government Probe | Patanjali | UPA | IB | ED Probe)
ಬಾಬಾ ರಾಮದೇವ್ ಆಸ್ತಿ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳ ಕಣ್ಣು
ನವದೆಹಲಿ, ಗುರುವಾರ, 9 ಜೂನ್ 2011( 15:59 IST )
ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸುತ್ತಿರುವ ಮತ್ತು ಕೇಂದ್ರ ಸರಕಾರವನ್ನೇ ಎದುರು ಹಾಕಿಕೊಂಡಿರುವ ಯೋಗ ಗುರು ಬಾಬಾ ರಾಮದೇವ್ ಅವರ ಕೊರಳಿನ ಉರುಳು ಬಿಗಿಗೊಳಿಸಿರುವ ಕೇಂದ್ರ ಸರಕಾರವು, ಆದಾಯ ತೆರಿಗೆ ಇಲಾಖೆ, ಅನುಷ್ಠಾನ ನಿರ್ದೇಶನಾಲಯ, ಸಿಬಿಐ, ಆರೋಗ್ಯ ಇಲಾಖೆ, ಗೃಹ ಇಲಾಖೆ, ಗುಪ್ತಚರ ಇಲಾಖೆಗಳ ಸಹಿತ ಅರ್ಧ ಡಜನ್ ಸಚಿವಾಲಯಗಳು ಬಾಬಾ ರಾಮದೇವ್ ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಡಲು ಸೂಚಿಸಿದೆ.
ನೂರಾರು ಕೋಟಿ ರೂಪಾಯಿ ಮೊತ್ತ ಆಸ್ತಿಪಾಸ್ತಿಯನ್ನು ಬಾಬಾ ರಾಮದೇವ್ ಹೊಂದಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರವು ಈ ಎಲ್ಲ ಇಲಾಖೆಗಳನ್ನು ಬಾಬಾ ರಾಮದೇವ್ ಅವರ ಮೇಲೆ ಛೂ ಬಿಟ್ಟಿದ್ದು, ಸುಮಾರು 200 ಸಂಸ್ಥೆಗಳ ಕಾರ್ಯಚಟುವಟಿಕೆಗಳ ತನಿಖೆಯೂ ನಡೆಯಲಿದೆ.
ರಾಮದೇವ್ ಅವರ ಸಾಮಾಜಿಕ, ರಾಜಕೀಯ ಮತ್ತು ಕಾರ್ಪೊರೇಟ್ ಸಂಪರ್ಕಗಳ ಮೇಲೂ ಕಣ್ಣಿಡಲಾಗಿದೆ. ಅವರ ಆಪ್ತರ ಚಟುವಟಿಕೆಗಳನ್ನೂ ಗಮನಿಸಲಾಗುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.
ಅವರ ಟ್ರಸ್ಟ್‌ನ ದಾನಿಗಳೆಲ್ಲರ, ವಿಶೇಷವಾಗಿ ವಿದೇಶೀಯರು ಮತ್ತು ಎನ್ಆರ್ಐಗಳ ಪಟ್ಟಿಗಳನ್ನೆಲ್ಲಾ ಪರಿಶೀಲಿಸಲಾಗುತ್ತಿದ್ದು, ಕೇಂದ್ರ ವಿತ್ತ ಸಚಿವಾಲಯವು ಬಾಬಾ ಹಣಕಾಸು ವ್ಯವಹಾರಗಳಲ್ಲಿ ಏನಾದರೂ ಅಕ್ರಮಗಳು ನಡೆದಿರುವ ಪುರಾವೆಗಳು ಸಿಗುತ್ತವೆಯೇ ಎಂದು ತನಿಖೆ ನಡೆಸುವ ನೇತೃತ್ವ ವಹಿಸಿಕೊಂಡಿದೆ ಎನ್ನಲಾಗುತ್ತಿದೆ. ತೆರಿಗೆ ತಪ್ಪಿಸಿಕೊಂಡಿದ್ದಾರೆಯೇ, ಆಮದು-ರಫ್ತು ನೀತಿ ಉಲ್ಲಂಘಿಸಿದ್ದಾರೆಯೇ, ಮನಿ ಲಾಂಡರಿಂಗ್ ಮಾಡಿದ್ದಾರೆಯೇ ಎಂಬಿತ್ಯಾದಿಗಳ ಪರಿಶೀಲನೆ ನಡೆಯುತ್ತಿದ್ದು, ವಿದೇಶೀ ವ್ಯವಹಾರಗಳನ್ನು ಕೂಡ ಪರೀಕ್ಷಿಸಲಾಗುತ್ತದೆ. ಇಲಾಖೆಗಳಿಗೆ ಬಾಬಾ ಅಕ್ರಮದ ಸಣ್ಣ ಸುಳಿವು ಸಿಕ್ಕರೂ ಕೂಡ, ಕಾಳ ಧನದ ಹೋರಾಟ ಮಾಡುತ್ತಿರುವ ಅವರನ್ನು 'ಬಣ್ಣ ಬಯಲು' ಮಾಡಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ತನಿಖಾ ಏಜೆನ್ಸಿಗಳಿಗೆ ಲಭ್ಯವಿರುವ ಮಾಹಿತಿ ಪ್ರಕಾರ, ಯೋಗ ಗುರು ರಾಮದೇವ್ ಅವರಲ್ಲಿ ಎರಡು ಟ್ರಸ್ಟ್‌ಗಳಿವೆ. ಪತಂಜಲಿ ಟ್ರಸ್ಟ್ ಹಾಗೂ ದಿವ್ಯ ಜ್ಯೋತಿ ಮಂದಿರ ಟ್ರಸ್ಟ್. ಇವೆರಡಕ್ಕೂ ತೆರಿಗೆ ವಿನಾಯಿತಿ ಇದೆ. ಅಲ್ಲದೆ ಅವರಿಗೆ 34 ಸಂಸ್ಥೆಗಳಿವೆ. ಅವುಗಳಲ್ಲಿ ಕೆಲವು:
ಪತಂಜಲಿ ಫುಡ್ ಪ್ರೈ ಲಿ. ಆಯುರ್ವೇದ ಉತ್ಪನ್ನಗಳನ್ನು ತಯಾರಿಸುವ ದಿವ್ಯ ಫಾರ್ಮಸಿ ಆಸ್ಥಾ ಟಿವಿ ಚಾನೆಲ್ ನಡೆಸುವ ವೇದಿಕ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಆಯುರ್ವೇದ ಔಷಧಿ ಮತ್ತು ಆಹಾರ ತಯಾರಿಸುವ ಪತಂಜಲಿ ಆಯುರ್ವೇದ ಲಿ. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಿರತವಾಗಿರುವ ಡೈನಮಿಕ್ ಬಿಲ್ಡ್‌ಕನ್ ಪ್ರೈ. ಲಿ. ಸೌಂದರ್ಯಸಾಧನಗಳ ಉತ್ಪಾದನಾ ಸಂಸ್ಥೆ ಪತಂಜಲಿ ಅರೋಮಾಟಿಕ್ಸ್ ಪ್ರೈ.ಲಿ. ಪ್ಯಾಕೇಜಿಂಗ್ ವ್ಯವಹಾರ ಮಾಡುವ ಪತಂಜಲಿ ಫ್ಲೆಕ್ಸಿಪ್ಯಾಕ್ ಪ್ರೈ.ಲಿ. ಜವಳಿ ಕಾರ್ಖಾನೆ ಪತಂಜಲಿ ಟೆಕ್ಸ್‌ಟೈಲ್ಸ್ ಪ್ರೈ.ಲಿ. ಸಾರಿಗೆ ವ್ಯವಹಾರ ನಡೆಸುವ ಪತಂಜಲಿ ಪರಿವಹನ ಪ್ರೈ.ಲಿ. ಹಾಗೂ ಆಹಾರ ಪಾರ್ಕ್‌ಗಳ ತಯಾರಿಕೆಗಾಗಿರುವ ಜಾರ್ಖಂಡ್ ಮೆಗಾ ಫುಡ್ ಪಾರ್ಕ್ ಪ್ರೈ.ಲಿ. ಮುಂತಾದವು
ವಿದೇಶಗಳಲ್ಲಿ ವ್ಯವಹಾರ ನಡೆಸುವ ಪ್ರತ್ಯೇಕ ಕಂಪನಿಗಳಿದ್ದು, ದೇಶೀ ಕಂಪನಿಗಳು ತಯಾರಿಸಿದ ಉತ್ಪನ್ನಗಳ ರಫ್ತು ಕೂಡ ನಡೆಯುತ್ತದೆ. ಎಲ್ಲ ಕಂಪನಿಗಳ ಅಡಿಯಲ್ಲಿ ಸಣ್ಣಪುಟ್ಟ ಅಂಗ ಸಂಸ್ಥೆಗಳು ಕೂಡ ಇವೆ.
ಭಾರತದ ನಂತರ, ಬಾಬಾ ರಾಮದೇವ್ ಅವರ ವ್ಯವಹಾರ ಹೆಚ್ಚು ಇರುವುದು ನೇಪಾಳದಲ್ಲಿ. ಅಲ್ಲಿನ 75 ಜಿಲ್ಲೆಗಳಲ್ಲಿ ಯೋಗ ಕೇಂದ್ರಗಳಿವೆ. ಗಿಡಮೂಲಿಕೆ ಆಧಾರಿತ ಔಷಧಿ ಮಾರಾಟ ಮಾಡುವ 27 ಆಯುರ್ವೇದ ಕೇಂದ್ರಗಳಿವೆ. ಅಲ್ಲಿ ಕೂಡ ಬಾಬಾ ರಾಮದೇವ್ ಅವರಿಗೆ ಭಾರೀ ಬೆಂಬಲಿಗರಿದ್ದು, ಅವರಲ್ಲಿ ರಾಜಕಾರಣಿಗಳು, ನಟರು, ಉದ್ಯಮಿಗಳೆಲ್ಲಾ ಸೇರಿದ್ದಾರೆ.