ಕಪ್ಪುಹಣದ ವಿರುದ್ಧ ಹೋರಾಟ ಕೈಗೊಂಡಿರುವ ಬಾಬಾ ರಾಮದೇವ್ ಅವರನ್ನು 'ಠಕ್ಕ' ಎಂದು ನಿಂದಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ವಿರುದ್ಧ ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.
ಯೋಗ ಗುರುವನ್ನು 'ಠಕ್ಕ' ಎಂದು ನಿಂದಿಸಿರುವುದು 295ಎ ಅನುಸಾರ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ದುರುದ್ದೇಶಪೂರಿತ ಕೃತ್ಯ ಹಾಗೂ 500, 501ನೇ ಅನುಬಂಧದ ಪ್ರಕಾರ ಮಾನಹಾನಿಕರ ಕೃತ್ಯ ಎಂಬ ಅರ್ಜಿಯನ್ನು ಪರಿಶೀಲಿಸಿದ ಹೋಶಿಯಾರ್‌ಪುರದ ಹೆಚ್ಚುವರಿ ಮುಖ್ಯ ನ್ಯಾಯಾಧೀಶ ಜಸ್ವಿಂದರ್ ಶಿಮಾರ್, ಭಾರತೀಯ ದಂಡ ಸಂಹಿತೆಯ ಈ ಅನುಬಂಧಗಳ ಅಡಿಯಲ್ಲಿ ಅಡಿಯಲ್ಲಿ ದಿಗ್ವಿಜಯ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡರು.
ಬಾಬಾ ಅವರನ್ನು 'ಮಹಾ ಠಕ್ಕ' ಎಂದು ಆರೋಪಿಸುವ ಮೂಲಕ ಕೋಟ್ಯಂತರ ಹಿಂದೂಗಳ ಮತ್ತು ಸಾಮಾನ್ಯ ಜನರ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರಲಾಗಿದೆ ಎಂದು ಆರೋಪಿಸಿ, ಹೋಶಿಯಾರ್‌ಪುರದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಪಿ. ಧೀರ್ ಅವರ ಮುಖಾಂತರ ವಕೀಲ ಅಜಯ್ ಗುಪ್ತಾ ದೂರು ದಾಖಲಿಸಿದರು. ದಿಗ್ವಿಜಯ್ ಅವರು ಸಾರ್ವಜನಿಕರೆದುರು ಬಾಬಾ ರಾಮದೇವ್ ಅವರ ವರ್ಚಸ್ಸಿಗೂ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತ ವಿಚಾರಣೆಯನ್ನು ನ್ಯಾಯಾಲಯವು ಜೂ.15ಕ್ಕೆ ನಿಗದಿಪಡಿಸಿದ್ದು, ಅಂದು ಸಾಕ್ಷ್ಯಾಧಾರಗಳನ್ನು ದಾಖಲಿಸಿಕೊಳ್ಳಲಾಗುತ್ತದೆ.
ಇನ್ನೊಂದೆಡೆ, ಲಕ್ನೋದಲ್ಲಿ ವಿಶೇಷ ನ್ಯಾಯಿಕ ದಂಡಾಧಿಕಾರಿ ಪ್ರೀತಿ ಶ್ರೀವಾತ್ಸವ ಎಂಬವರು ಸಿಂಗ್ ವಿರುದ್ಧ ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ರಾಮ್ ಕಿಶೋರ್ ನೀಡಿರುವ ಇದೇ ರೀತಿಯ ದೂರುಗಳನ್ನು ಸ್ವೀಕರಿಸಿದ್ದು, ಜೂ.24ರಂದು ವಿಚಾರಣೆ ನಡೆಯಲಿದೆ.
ಮತ್ತೊಂದೆಡೆ, ಸ್ಥಳೀಯ ವಕೀಲರೊಬ್ಬರು ದಿಗ್ವಿಜಯ್ ಸಿಂಗ್ ಮತ್ತು ಕಾಂಗ್ರೆಸ್ ವಕ್ತಾರ ಜನಾರ್ದನ್ ದ್ವಿವೇದಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶಿಸಬೇಕೆಂದು ಕೋರಿ ಲಕ್ನೋದ ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯವನ್ನು ಕೋರಿದ್ದರು. ದ್ವಿವೇದಿಗೆ ಶೂ ತೋರಿಸಿದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಥಳಿಸಲಾಗಿರುವುದು ಮತ್ತು ದಿಗ್ವಿಜಯ್ ಅವರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿರುವುದರ ವಿರುದ್ಧ ಶಂಶೇರ್ ಯಾದವ್ ಜಾಗ್ರಾನಾ ಎಂಬವರು ಈ ದೂರು ನೀಡಿದ್ದರು.