ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಮತ್ತು ಹಲವು ಊಹಾಪೋಹಗಳಿಗೆ ಕಾರಣವಾಗಿದ್ದ ಯೋಗ ಗುರು ಬಾಬಾ ರಾಮದೇವ್ ಅವರ ಆಸ್ತಿಪಾಸ್ತಿಯ ವಿವರವನ್ನು ಗುರುವಾರ ಪ್ರಕಟಿಸಲಾಗಿದೆ. ಬಾಬಾ ಜತೆಗೆ ಅವರ ನಂಬಿಕಸ್ಥ ಬಂಟ ಆಚಾರ್ಯ ಬಾಲಕೃಷ್ಣ ಅವರು ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಬಾಬಾ ಅವರ ಒಟ್ಟು ಆಸ್ತಿ 1110 ಕೋಟಿ ರೂಪಾಯಿ ಎಂದು ಪ್ರಕಟಿಸಿದರು.
ಇವುಗಳಲ್ಲಿ ಯಾವುದೇ ಶಂಕೆಗಳಿಗೆ ಆಸ್ಪದ ಇಲ್ಲ. ಕಾಲ ಕಾಲಕ್ಕೆ ಆಡಿಟ್ ಮಾಡಲಾಗುತ್ತದೆ, ಸರಕಾರಕ್ಕೆ ಸಲ್ಲಬೇಕಾದ ತೆರಿಗೆಯೂ ಸಂದಾಯವಾಗುತ್ತದೆ ಎಂದು ಆಚಾರ್ಯ ಬಾಲಕೃಷ್ಣ ಹೇಳಿದರು. ಭ್ರಷ್ಟಾಚಾರ ಮತ್ತು ಕಾಳ ಧನದ ವಿರುದ್ಧ ಕಳೆದ ಆರು ದಿನಗಳಿಂದ ನಡೆಸುತ್ತಿರುವ ಉಪವಾಸದಿಂದಾಗಿ ನಿತ್ರಾಣಗೊಂಡಿದ್ದ ರಾಮದೇವ್ ಅವರು ಪಕ್ಕದಲ್ಲಿ ನಿಶ್ಶಕ್ತಿಯಿಂದ ಕುಳಿತಿದ್ದರು.
ಅವರು ನೀಡಿರುವ ವಿವರ ಪ್ರಕಾರ, ರಾಮದೇವ್ ಅವರ ಜತೆ ಸಂಬಂಧವಿರುವ ನಾಲ್ಕು ಟ್ರಸ್ಟ್‌ಗಳ ಒಟ್ಟು ಬಂಡವಾಳವು 426.19 ಕೋಟಿ ರೂ. ಅತ್ಯಂತ ಹಳೆಯ ಟ್ರಸ್ಟ್ ಆಗಿರುವ ದಿವ್ಯ ಯೋಗ ಮಂದಿರದ ಬಂಡವಾಳ 249.63 ಕೋಟಿ, ಪತಂಜಲಿ ಯೋಗ ಪೀಠವು 164.80 ಕೋಟಿ, ಭಾರತ ಸ್ವಾಭಿಮಾನ ಟ್ರಸ್ಟ್ 9.97 ಕೋಟಿ, ಆಚಾರ್ಯ ಕುಲಂ ಶಿಕ್ಷಣ ಸಂಸ್ಥಾನವು 1.69 ಕೋಟಿ ಬಂಡವಾಳ ಹೊಂದಿದೆ.
ಈ ಟ್ರಸ್ಟುಗಳಲ್ಲಿ ಸಮಾಜಸೇವಾ ಕಾರ್ಯಗಳು, ಅಭಿವೃದ್ಧಿ ಇತ್ಯಾದಿಗಳಿಗಾಗಿ ಇದುವರೆಗೆ ಒಟ್ಟು 751.02 ಕೋಟಿ ರೂ. ವ್ಯಯಿಸಲಾಗಿದೆ. ಈ ವಿವರಗಳೆಲ್ಲವನ್ನೂ ಸಂಸ್ಥೆಯ ವೆಬ್‌ಸೈಟ್ ದಿವ್ಯಯೋಗ ಡಾಟ್ ಕಾಂನಲ್ಲಿ ಪ್ರಕಟಿಸಲಾಗಿದೆ ಎಂದೂ ಆಚಾರ್ಯ ಬಾಲಕೃಷ್ಣ ಹೇಳಿದರು.
ದಾನಿಗಳಿಂದ ದೊರೆತ ದೇಣಿಗೆಯಿಂದಲೇ ಇಷ್ಟು ಆಸ್ತಿ ಸಂಗ್ರಹವಾಗಿದೆ. ಆಸ್ಥಾ ಟಿವಿಯಿಂದ ಹಿಡಿದು ಆಹಾರ, ಗಿಡಮೂಲಿಕೆ ಔಷಧಿ ಪಾರ್ಕುಗಳು ಕೂಡ ಟ್ರಸ್ಟ್‌ನಿಂದ ನಡೆಯುತ್ತಿವೆ. ಕಾನೂನಿನ ಪ್ರಕಾರ, ಲೆಕ್ಕಪತ್ರಗಳು ಸರಿಯಾಗಿದ್ದರೆ ಮಾತ್ರವೇ ಪ್ರತಿ ಎರಡು ವರ್ಷಗಳಿಗೊಮ್ಮೆ ಸರಕಾರವು ಟ್ರಸ್ಟ್ ಅನ್ನು ನವೀಕರಿಸುತ್ತದೆ.
ಬಾಬಾ ರಾಮದೇವ್ ಅವರು ಕಳೆದ ಐದು ವರ್ಷಗಳಿಂದ ಒಟ್ಟುಗೂಡಿಸಿದ ಆಸ್ತಿಪಾಸ್ತಿಯ ಕುರಿತು ತನಿಖೆಯಾಗಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತಿತರರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಬಾಬಾ ರಾಮದೇವ್ ಆಸ್ತಿ ಘೋಷಣೆ ಮಾಡಿದ್ದಾರೆ. ಆದರೆ, ಬಾಬಾ ರಾಮದೇವ್ ಅವರ ಜತೆ ಸಂಬಂಧವಿರುವ ಹಲವಾರು ಕಂಪನಿಗಳ ಲೆಕ್ಕಪತ್ರಗಳನ್ನು ಆರ್‌ಟಿಐ (ಮಾಹಿತಿ ಹಕ್ಕು ಕಾಯ್ದೆ) ಅನುಸಾರ ಕಂಪನಿಗಳ ರಿಜಿಸ್ಟ್ರಾರ್ ಅವರಿಂದ ಪಡೆಯಬಹುದಾಗಿದೆ ಎಂದು ಆಚಾರ್ಯ ಬಾಲಕೃಷ್ಣ ಹೇಳಿದರು.