ಅಯೋಧ್ಯೆ ವಿವಾದದ ಕುರಿತು ತೀರ್ಪು ನೀಡಿದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರು ಹಾಗೂ ವಕೀಲರ ಹತ್ಯೆಗೆ ಇಂಡಿಯನ್ ಮುಜಾಹಿದೀನ್ ಹಾಗೂ ಸಿಮಿ ಉಗ್ರಗಾಮಿ ಸಂಘಟನೆಗಳು ಸಂಚು ರೂಪಿಸಿದ್ದವು ಎಂಬ ಅಂಶವು ಬಂಧಿತ ಶಂಕಿತ ಉಗ್ರಗಾಮಿಗಳ ವಿಚಾರಣೆಯ ವೇಳೆ ಬಯಲಾಗಿದೆ.
ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಸೇರಿದ 8 ಮಂದಿಯನ್ನು ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಬಂಧಿಸಿದ್ದು, ವಿಚಾರಣೆ ವೇಳೆ ಅವರು ಬಾಯಿ ಬಿಟ್ಟಿದ್ದಾರೆ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಗುರುವಾರ ತಿಳಿಸಿದೆ.
'ಬಂಧಿತ ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಉಗ್ರರು ಲಖ್ನೋ ಹೈಕೋರ್ಟ್ ಕಟ್ಟಡ, ನ್ಯಾಯಾಧೀಶರು ಹಾಗೂ ರಾಮ ಜನ್ಮ ಭೂಮಿ- ಬಾಬ್ರಿ ಮಸೀದಿ ಬಗ್ಗೆ ವಿಚಾರಣೆ ನಡೆಸುತ್ತಿರುವ, ಅದರಲ್ಲೂ ಮುಖ್ಯವಾಗಿ ಹಿಂದೂ ಸಂಘಟನೆಗಳ ಪರ ವಾದಿಸುತ್ತಿರುವ ವಕೀಲರ ಬಗ್ಗೆ ಅವರು ಮಾಹಿತಿ ಸಂಗ್ರಹಿಸಿದ್ದರು' ಎಂದು ಎಟಿಎಸ್ ಮಹಾನಿರ್ದೇಶಕ ವಿಪಿನ್ ಮಹೇಶ್ವರಿ ತಿಳಿಸಿದ್ದಾರೆ.
ನ್ಯಾಯಾಧೀಶರು ಹಾಗೂ ವಕೀಲರ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದು, ಇದಕ್ಕಾಗಿ ಲಖ್ನೋದಲ್ಲಿ ಕೊಠಡಿಯೊಂದನ್ನು ಬಾಡಿಗೆ ಪಡೆದಿದ್ದಾಗಿ ಬಂಧಿತರು ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ವಿಪಿನ್ ಸುದ್ದಿಗಾರರಿಗೆ ತಿಳಿಸಿದರು.
ಬಂಧಿತರ ಪೈಕಿ ಮುಜೀಬ್ ಹಾಗೂ ಅಸ್ಲಾಂ ಲಖ್ನೋದಲ್ಲಿ ವಾಸವಾಗಿದ್ದರು. ಅಬೂ ಫೈಜಲ್ ಕೂಡಾ ಆಗಾಗ್ಗೆ ಇಲ್ಲಿಗೆ ಭೇಟಿ ನೀಡುತ್ತಿದ್ದ.
ಬಂಧಿತರಿಂದ ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಹಾಗೂ ಸಂಬಂಧಿತ ವಕೀಲರ ಛಾಯಾ ಚಿತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಎಟಿಎಸ್ ತಿಳಿಸಿದೆ.
ಸಂಚುಕೋರರು ಲಖ್ನೋ ಸೇರಿದಂತೆ ಮಧ್ಯಪ್ರದೇಶದ ಭೋಪಾಲ್, ಇಂದೋರ್, ಜಬಲ್‌ಪುರ್, ಮಹಾರಾಷ್ಟ್ರದ ಅಮರಾವತಿ, ಅಕೋಲಾ ಮತ್ತು ಭೂಸ್ವಾಲ್ ಹಾಗೂ ಜಾರ್ಖಂಡ್‌ನ ಟಾಟಾನಗರದಲ್ಲೂ ಮನೆ ಬಾಡಿಗೆ ಪಡೆದು ಸಂಚು ರೂಪಿಸಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಜಬಲ್‌ಪುರದಲ್ಲಿ ಪೊಲೀಸ್ ಮಾಹಿತಿದಾರ ಎಂದು ತಾವು ಶಂಕಿಸಿದ್ದ ತಮ್ಮ ತಂಡದವನೊಬ್ಬನನ್ನು ಕೊಲ್ಲಲು ಯೋಜನೆ ರೂಪಿಸಿದ್ದಾಗಿ ಬಂಧಿತರು ಎಟಿಎಸ್‌ಗೆ ತಿಳಿಸಿದ್ದಾರೆ.
ಪ್ರವಾದಿ ಮಹಮದ್ ಅವರ ಬಗ್ಗೆ ಆಕ್ಷೇಪಾರ್ಹ ವ್ಯಂಗ್ಯ ಚಿತ್ರ ಪ್ರಕಟಿಸಿದ್ದ ದೆಹಲಿ ಮೂಲದ ಡೈಮಂಡ್ ಕಾಮಿಕ್ಸ್ ಮಾಲೀಕರೂ ಭಯೋತ್ಪಾದಕರ ಹಿಟ್ ಲಿಸ್ಟ್‌ನಲ್ಲಿದ್ದರು ಎಂದು ಎಟಿಎಸ್ ತಿಳಿಸಿದೆ. ಉಜ್ಜೈನಿ ಜಿಲ್ಲೆಯ ನಾಗ್ಡಾ ಪಟ್ಟಣದಲ್ಲಿ ವಿಎಚ್‌ಪಿ ಮುಖಂಡ ಭೆಹ್ರೂವಾಲ್ ಟಾಂಕ್ ಅವರ ಮೇಲೆ ನಡೆದ ದಾಳಿಯಲ್ಲೂ ಬಂಧಿತರು ಭಾಗಿಯಾಗಿದ್ದರು.