ಪ್ರತಿಭಟನಾಕಾರರ ಮೇಲೆ ದೌರ್ಜನ್ಯ: ಕಾಂಗ್ರೆಸ್ ನಾಯಕಿ ರಾಜೀನಾಮೆ
ಇಟಾ (ಉತ್ತರ ಪ್ರದೇಶ), ಶನಿವಾರ, 11 ಜೂನ್ 2011( 11:30 IST )
ದೆಹಲಿಯ ರಾಮಲೀಲಾ ಮೈದಾನದಲ್ಲಿ ಶನಿವಾರ ಮಧ್ಯರಾತ್ರಿ ಯೋಗ ಗುರು ಬಾಬಾ ರಾಮದೇವ್ ಮತ್ತು ಅವರ ಬೆಂಬಲಿಗರ ಮೇಲೆ ನಡೆದ ಅಮಾನವೀಯ ಪೊಲೀಸ್ ದೌರ್ಜನ್ಯವನ್ನು ಖಂಡಿಸಿರುವ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕಿಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಅಮಾಯಕ ಮಹಿಳೆಯರು, ಮಕ್ಕಳ ಮೇಲೆ ಪೊಲೀಸರು ನಡೆಸಿದ್ದ ದೌರ್ಜನ್ಯವನ್ನು ಬಲವಾಗಿ ವಿರೋಧಿಸಿ ರಾಜಿನಾಮೆ ನೀಡುತ್ತಿರುವುದಾಗಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆಯಾಗಿರುವ ಪ್ರಮೀಳಾ ವಸಿಷ್ಠ ತಿಳಿಸಿದ್ದು, ಬಾಬಾ ರಾಮದೇವ್ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ಇದೇ ವೇಳೆ, ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯವು ಸಮಾಜದ ಎಲ್ಲ ವರ್ಗದ ಜನರ ಆಕ್ರೋಶಕ್ಕೂ ಕಾರಣವಾಗಿದೆ.
ಬಾಬಾ ರಾಮದೇವ್ ಮತ್ತವರ ಬೆಂಬಲಿಗರು ಮಧ್ಯರಾತ್ರಿ ನಿದ್ರಿಸುತ್ತಿದ್ದ ವೇಳೆ ಏಕಾಏಕಿ ಧಾವಿಸಿ ಲಾಠಿ ಚಾರ್ಜ್ ನಡೆಸಿ, ಅಶ್ರುವಾಯು ಸಿಡಿಸಿ ಮಹಿಳೆಯರು, ಮಕ್ಕಳು, ವೃದ್ಧರು ಎನ್ನದೆ ಹಿಂಸಾತ್ಮಕವಾಗಿ ವರ್ತಿಸಿದ ಪೊಲೀಸರ ಕ್ರಮವನ್ನು ಹಲವಾರು ಸಾಮಾಜಿಕ ನಾಯಕರು, ರಾಜಕೀಯ, ಧಾರ್ಮಿಕ ಸಂಘಟನೆಗಳು ಬಲವಾಗಿ ವಿರೋಧಿಸಿವೆ.
ಬಾಬಾ ಅವರ ಹೋರಾಟದ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಕೇಂದ್ರದ ಕ್ರಮವನ್ನು ಅಖಿಲ ಭಾರತ ತೀರ್ಥ ಪುರೋಹಿತ ಮಹಾಸಭಾ, ರಾಷ್ಟ್ರೀಯ ಮಹಿಳಾ ಸಂಸ್ಥಾನ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಖಂಡಿಸಿವೆ.
ಜನರ ಹೋರಾಟ ದಮನಿಸುವ ಕೇಂದ್ರದ ಕ್ರಮವನ್ನು ಖಂಡಿಸಿರುವ ಅಖಿಲ ಭಾರತ ತೀರ್ಥ ಮಹಾಸಭಾದ ಅಧ್ಯಕ್ಷ ಯೋಗೇಶ್ ಉಪಾಧ್ಯಾಯ, ಬಾಬಾ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ.