ನಿರಶನದಿಂದಲ್ಲ, ತನಿಖೆ ಭೀತಿಯಿಂದ ರಾಮದೇವ್‌ಗೆ ನಿತ್ರಾಣ: ಲಾಲು
ನವದೆಹಲಿ, ಭಾನುವಾರ, 12 ಜೂನ್ 2011( 09:30 IST )
PTI
ಬಾಬಾ ರಾಮದೇವ್ ಅವರು ಉಪವಾಸ ಸತ್ಯಾಗ್ರಹದಿಂದ ನಿತ್ರಾಣರಾಗಿದ್ದಲ್ಲ, ಅವರ ಟ್ರಸ್ಟ್‌ನ ಹಣಕಾಸು ವ್ಯವಹಾರಗಳ ಕುರಿತು ತನಿಖೆ ಮತ್ತಿತರ ಕಾರಣಗಳಿಂದಾಗಿ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ವ್ಯಂಗ್ಯವಾಡಿದ್ದಾರೆ.
ಆರೆಸ್ಸೆಸ್ ಮತ್ತು ಬಿಜೆಪಿಯ ಕುತಂತ್ರಕ್ಕೆ ಬಲಿಯಾಗಬೇಡಿ ಎಂದು ರಾಮದೇವ್ ಅವರಿಗೆ ಎಚ್ಚರಿಕೆ ನೀಡಿದ ಲಾಲೂ, ರಾಜಕೀಯಕ್ಕೆ ಸೇರಲು ಇಚ್ಛೆಯಿದ್ದರೆ ನೀವೇ ಬನ್ನಿ, ಅವರ ಕುಮ್ಮಕ್ಕಿನಿಂದ ಬರಬೇಡಿ ಎಂದು ಹೇಳಿದರು.
'ರಾಮ್ ದೇವ್ ಅವರು ಯೋಗಿಯೂ ಅಲ್ಲ, ಬಾಬಾನೂ ಅಲ್ಲ. ಅವರೊಬ್ಬ ತರಬೇತಿದಾರರು. ಅವರು ಜನರ ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ಆರೆಸ್ಸೆಸ್ ಮತ್ತು ಸಂಘ ಪರಿವಾರದ ಸಂಚಿಗೆ ಅವರು ಬಲಿಯಾಗಿದ್ದು, ಅವುಗಳು ಬಹುತೇಕವಾಗಿ ಬಾಬಾರನ್ನು ನಾಶ ಮಾಡಿವೆ. ಬಡ ಕುಟುಂಬದಿಂದ ಬಂದ ಬಾಬಾ ಅವರ ಬಗ್ಗೆ ನನಗೆ ಅನುಕಂಪವಿದೆ' ಎಂದು ಲಾಲೂ ಹೇಳಿದ್ದಾರೆ.
'ಆರೆಸ್ಸೆಸ್ ಹಾಗೂ ಸಂಘಪರಿವಾರಗಳು ಬಾಬಾ ರಾಮ್‌ದೇವ್ ಅವರನ್ನು ಅಪಾಯದ ಅಂಚಿಗೆ ನೂಕಿವೆ. ಅವರು ಕೂಡಲೇ ಉಪವಾಸವನ್ನು ಸ್ಥಗಿತಗೊಳಿಸಿ ಬೇರೆಯವರಿಗೋಸ್ಕರ ಯೋಗಾಭ್ಯಾಸವನ್ನು ಮತ್ತೆ ಆರಂಭಿಸಬೇಕು' ಎಂದು ಲಾಲೂ ಹೇಳಿದರು.
ಅಣ್ಣಾ ಹಜಾರೆ ಹಾಗೂ ಬಾಬಾ ರಾಮದೇವ್ ಅವರ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಕೇಂದ್ರ ಸರಕಾರವು ವಿಫಲವಾಗಿದೆ ಎಂದು ಆಪಾದಿಸಿದ ಲಾಲೂ, 'ಕೇಂದ್ರ ಸರಕಾರವು ಲೋಕಪಾಲ್ ಮಸೂದೆ ಕರಡು ರಚನಾ ಸಮಿತಿಯಲ್ಲಿ ನಾಗರಿಕ ಸಮಿತಿಯ ಸದಸ್ಯರನ್ನು ಸೇರಿಸಿಕೊಳ್ಳುವ ಬೇಡಿಕೆಗೆ ಒಪ್ಪಿಗೆ ಸೂಚಿಸಿ ಹಾಗೂ ಬಾಬಾ ಅವರನ್ನು ಕರೆತರಲು ಕೇಂದ್ರ ಸಚಿವರನ್ನು ವಿಮಾನ ನಿಲ್ದಾಣಕ್ಕೆ ಕಳುಹಿಸಿ ತಪ್ಪು ಮಾಡಿದೆ' ಎಂದು ಲಾಲೂ ಹೇಳಿದ್ದಾರೆ.
ಮಸೂದೆ ಕರಡು ರಚಿಸುವುದು ಸಂಸತ್ತಿನ ಕೆಲಸವೇ ಹೊರತು ನಾಗರಿಕ ಸಮಿತಿಯದ್ದಲ್ಲ ಎಂದು ಹೇಳಿದ ಲಾಲೂ ಪ್ರಸಾದ್, ಹಾದಿ ಬೀದಿಯಲ್ಲಿ ಹೇಳುವವರ ಮಾತುಗಳನ್ನೇಕೆ ಕೇಳಬೇಕು? ಇದು ಸಂಸತ್ ಹಾಗೂ ವ್ಯವಸ್ಥೆಯ ವಿರುದ್ಧ ನಡೆಯುತ್ತಿರುವ ಪಿತೂರಿ. ಮನಸೋ ಇಚ್ಛೆ ವರ್ತಿಸುವವರೊಂದಿಗೆ ಸಂವಿಧಾನವನ್ನು ರಾಜಿ ಮಾಡಿಕೊಳ್ಳಲು ನಾವು ಬಿಡಬಾರದು ಎಂದು ಹೇಳಿದ್ದಾರೆ.
'ಅಣ್ಣಾ ಹಜಾರೆ ಮತ್ತು ಅವರ ಬೆಂಬಲಿಗರನ್ನು ಲೋಕಪಾಲ ಮಸೂದೆ ಕರಡು ರಚನಾ ಸಮಿತಿಯಲ್ಲಿ ಸರಕಾರ ಸೇರಿಸಿಕೊಂಡಿರುವುದು ಸರಿಯಲ್ಲ. ಅವರಿಗೆ ಇರುವ ಅಧಿಕಾರವೇನು? ಇದು ಕೆಟ್ಟ ಪ್ರವೃತ್ತಿ. ನಾವು ಚುನಾಯಿತ ಜನಪ್ರತಿನಿಧಿಗಳೇ ಈ ಬಗ್ಗೆ ನಿರ್ಧರಿಸುತ್ತೇವೆ. ಕರಡು ರಚನೆ ಹೇಗಿದ್ದರೂ ಸರಕಾರದ ಕೆಲಸ' ಎಂದು ಲಾಲೂ ಹೇಳಿದ್ದಾರೆ.
ಸರಕಾರವು ಅಣ್ಣಾ ಹಜಾರೆ ಅಥವಾ ಬಾಬಾ ರಾಮದೇವ್ ಅವರ ಬೆಂಬಲಿಗರೊಂದಿಗೆ ಮಾತುಕತೆ ನಡೆಸುವ ಬದಲು ಸಂಸದರೊಂದಿಗೆ ಮಾತುಕತೆ ನಡೆಸಬೇಕು ಎಂದು ಹೇಳಿದರು.