ಲೋಕಪಾಲ ನಾಗರಿಕ ಸಮಿತಿ ಸದಸ್ಯರು ಭ್ರಷ್ಟರಾಗಿದ್ದಾರೆ. ಅಣ್ಣಾ ಹಜಾರೆ ಆರ್‌ಎಸ್‌ಎಸ್ ಏಜೆಂಟ್‌ರಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ.ಒಂದು ವೇಳೆ ನನಗೆ ಆರ್‌ಎಸ್‌ಎಸ್ ಸಂಬಂಧವಿದ್ದಲ್ಲಿ ಸಾಬೀತುಪಡಿಸಲಿ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಹಜಾರೆ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ಪಕ್ಷದ ಜವಾಬ್ದಾರಿಯುತ ನಾಯಕರು ನಮ್ಮ ತೇಜೋವಧೆಯಲ್ಲಿ ತೊಡಗಿದ್ದಾರೆ. ಇಂತಹ ಹೀನ ಕೃತ್ಯಗಳಲ್ಲಿ ತೊಡಗದಂತೆ ನಿಮ್ಮ ಪಕ್ಷದ ಸದಸ್ಯರಿಗೆ ಕಿವಿಮಾತು ಹೇಳಿ ಎಂದು ಅಣ್ಣಾ ತಿಳಿಸಿದ್ದಾರೆ.
ಹಜಾರೆ ಮತ್ತು ರಾಮದೇವ್ ವಿರುದ್ಧ ಕಾಂಗ್ರೆಸ್ ಅಂದೋಲನವನ್ನೇ ಆರಂಭಿಸಿದ್ದು,ಸಂವಿಧಾನಬಾಹಿರ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಎಂದು ಸಚಿವ ಪ್ರಣಬ್ ಮುಖರ್ಜಿ ಆರೋಪಿಸಿದ್ದಾರೆ.
ನಾಗರಿಕ ಸಮಿತಿ ವಿರುದ್ಧ ನಿಮ್ಮ ಪಕ್ಷದ ನಾಯಕರು ನಿರಂತರವಾಗಿ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಆರೋಪಗಳನ್ನು ಸಾಬೀತುಪಡಿಸುವ ದಾಖಲೆಗಳು ನಿಮ್ಮ ಬಳಿಯಿದ್ದಲ್ಲಿ ಪತ್ರಿಕೆಗಳಿಗೆ ಬಿಡುಗಡೆ ಮಾಡಿ ಎಂದು ಹಜಾರೆ ಸವಾಲು ಹಾಕಿದ್ದಾರೆ.
73 ವರ್ಷಗಳ ಜೀವನದಲ್ಲಿ ನಾನು ಯಾವ ಪಕ್ಷದೊಂದಿಗೂ ಗುರುತಿಸಿಕೊಂಡಿಲ್ಲ ಎಂದು ಸೋನಿಯಾಗೆ ಬರೆದ ಪತ್ರದಲ್ಲಿ ಅಣ್ಣಾ ಹಜಾರೆ ಸ್ಪಷ್ಟಪಡಿಸಿದ್ದಾರೆ.
ಹಜಾರೆ ನೇತೃತ್ವದ ನಾಗರಿಕ ಸಮಿತಿ ಮತ್ತು ಬಾಬಾ ರಾಮದೇವ್ ಬಿಜೆಪಿ ಮುಖವಾಣಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಆರೋಪಿಸಿದ್ದಾರೆ.