ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಖವಾಣಿ ತನ್ನ ಅಭಿಪ್ರಾಯವಲ್ಲ ಎಂದಿತು ಕಾಂಗ್ರೆಸ್!
(Congress Mouth Piece | Congress Sandesh | Baba Ramdev | Anil Shastri)
ಮುಖವಾಣಿ ತನ್ನ ಅಭಿಪ್ರಾಯವಲ್ಲ ಎಂದಿತು ಕಾಂಗ್ರೆಸ್!
ನವದೆಹಲಿ, ಸೋಮವಾರ, 13 ಜೂನ್ 2011( 11:03 IST )
ತನ್ನ ಮುಖವಾಣಿಯನ್ನೇ ಕಾಂಗ್ರೆಸ್ ಪಕ್ಷವು ರದ್ದಿಗೆ ಹಾಕಬೇಕಾಗಿ ಬಂದಿದೆ. ಭ್ರಷ್ಟಾಚಾರ ವಿರೋಧಿಸಿ, ಕಾಳಧನ ವಿದೇಶದಿಂದ ವಾಪಸ್ ತರುವಂತೆ ಒತ್ತಾಯಿಸಿ ದೆಹಲಿಯಲ್ಲಿ ಉಪವಾಸ ಮಾಡಲೆಂದು ಆಗಮಿಸಿದ ಯೋಗ ಗುರು ಬಾಬಾ ರಾಮದೇವ್ ಅವರನ್ನು ಸ್ವಾಗತಿಸಲು ನಾಲ್ಕು ಮಂದಿ ಮಂತ್ರಿಗಳು ವಿಮಾನ ನಿಲ್ದಾಣಕ್ಕೆ ಓಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಮುಖವಾಣಿ 'ಸಂದೇಶ್'ದಲ್ಲಿ ಸಂಪಾದಕೀಯ ಪ್ರಕಟವಾಗಿತ್ತು. ಈ ಸಂಚಿಕೆಯ ಪ್ರಸರಣೆಯನ್ನೇ ಕಾಂಗ್ರೆಸ್ ಈಗ ತಡೆಹಿಡಿಯುವ ಪರಿಸ್ಥಿತಿ ಬಂದಿದೆ.
"ನಾಲ್ವರು ಕೇಂದ್ರ ಸಂಪುಟ ಮಂತ್ರಿಗಳು ವಿಮಾನ ನಿಲ್ದಾಣಕ್ಕೆ ಹೋಗುವ ಅಗತ್ಯವಿತ್ತೇ? ನಾಗರಿಕ ಸಮಾಜದ ಬೇಡಿಕೆಗಳಿಗೆ ಧನಾತ್ಮಕ ವರ್ತನೆ ಪ್ರಕಟಿಸುವುದು ಸರಕಾರದ ಕರ್ತವ್ಯ. ಆದರೆ ಚುನಾಯಿತ ಸರಕಾರವೊಂದರ ಪ್ರತಿಷ್ಠೆ ಮತ್ತು ಹಕ್ಕುಗಳ ಉಲ್ಲಂಘನೆಯಾಗದಂತೆಯೂ ನೋಡಿಕೊಳ್ಳಬೇಕಾಗಿದೆ" ಎಂದು ಕಾಂಗ್ರೆಸ್ ಸಂದೇಶ್ ಸಂಪಾದಕೀಯದಲ್ಲಿ ಹೇಳಿತ್ತು.
ಈ ವಿಷಯವು ಪಕ್ಷದ ಹಿರಿಯ ನಾಯಕರ ಗಮನಕ್ಕೆ ಬಂದಿದ್ದೇ ತಡ, ಅವರು ಸಂಚಿಕೆಯನ್ನೇ ತಡೆಹಿಡಿಯಲು ನಿರ್ಧರಿಸಿ, ಸಂಪಾದಕ, ಲಾಲ್ ಬಹಾದೂರ್ ಶಾಸ್ತ್ರಿಯವರ ಪುತ್ರ ಅನಿಲ್ ಶಾಸ್ತ್ರಿಯೊಂದಿಗೆ ಸಭೆ ನಡೆಸಿದರು. ಮೊದಲು, ಸಂಚಿಕೆಯ ಪ್ರಸಾರವನ್ನೇ ರದ್ದುಪಡಿಸಲು ತೀರ್ಮಾನಿಸಲಾಗಿತ್ತಾದರೂ, ಅದು ಪಕ್ಷದ ಅಭಿಪ್ರಾಯವಲ್ಲ ಎಂಬ ಟಿಪ್ಪಣಿಯೊಡನೆ ಬಿಡುಗಡೆಗೊಳಿಸಲು ತೀರ್ಮಾನಿಸಲಾಯಿತು ಎಂದು ಮೂಲಗಳು ಹೇಳಿವೆ.
ಇದರಿಂದ ವಿಚಲಿತರಾಗಿರುವ ಅನಿಲ್ ಶಾಸ್ತ್ರಿ, ಮುಂದೆ ಸ್ವಂತ ಅಭಿಪ್ರಾಯಗಳನ್ನು ಸಂಪಾದಕೀಯದಲ್ಲಿ ಬರೆಯದಿರಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಲ್ಲದೆ, ಪಕ್ಷದ ಮುಖವಾಣಿಯಲ್ಲಿ ಪ್ರಕಟವಾಗುವ ಯಾವುದೇ ವಿಷಯವು ಪಕ್ಷದ್ದೇ ಅಭಿಪ್ರಾಯ ಎಂಬುದು ಸಾಮಾನ್ಯ. ಹೀಗಾಗಿ ಕಾಂಗ್ರೆಸ್ ಸಂದೇಶ್ ಸಂಪಾದಕರು ಇನ್ನು ಮುಂದೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಸಂಪಾದಕೀಯದಲ್ಲಿ ಬರೆಯದಂತೆ ಸೂಚಿಸಲಾಗಿದೆ ಎಂದು ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ, ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ತಿಳಿಸಿದ್ದಾರೆ.
ವಿಶೇಷವೆಂದರೆ, ಶಾಸ್ತ್ರಿ ಅವರು ಜೂನ್ 4ರಂದು ತಮ್ಮ ಟ್ವಿಟರ್‌ನಲ್ಲಿ "ಇಂದಿರಾಜೀ ಅಥವಾ ರಾಜೀವ್‌ಜೀ ಖಾಸಗಿ ವಿಮಾನದಲ್ಲಿ ಬಂದ 'ಬಾಬಾ' ಮನವೊಲಿಕೆಗೆ ತಮ್ಮ ಮಂತ್ರಿಗಳನ್ನು ವಿಮಾನ ನಿಲ್ದಾಣಕ್ಕೆ ಕಳುಹಿಸುತ್ತಿರಲಿಲ್ಲ" ಎಂದಿದ್ದರು.
ಮರುದಿನ ಟ್ವಿಟರ್‌ನಲ್ಲಿ ಇದೇ ಶಾಸ್ತ್ರಿ ಅವರು, ರಾಮಲೀಲಾ ಮೈದಾನದಲ್ಲಿ ಮಲಗಿ ನಿದ್ರಿಸುತ್ತಿದ್ದ ಅಮಾಯಕ ಸತ್ಯಾಗ್ರಹಿಗಳ ಮೇಲೆ ನಡೆಸಲಾದ ಪೊಲೀಸ್ ದೌರ್ಜನ್ಯವನ್ನೂ ಖಂಡಿಸಿದ್ದರು. ಇದು 'ದುರದೃಷ್ಟಕರ ಮತ್ತು ತಪ್ಪಿಸಲು ಸಾಧ್ಯವಿತ್ತು' ಎಂದಿದ್ದರಲ್ಲದೆ, ಇದು ಸರಕಾರದ ನಿರ್ಧಾರವಾಗಿದ್ದು, ಪಕ್ಷದ್ದು ಅಲ್ಲ ಎಂದೂ ಹೇಳಿದ್ದರು.
ದಶಕದ ಇತಿಹಾಸವಿರುವ ಕಾಂಗ್ರೆಸ್ ಮುಖವಾಣಿಯಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಇಂಥದ್ದೊಂದು ವಿವಾದ ಸೃಷ್ಟಿಯಾಗಿದೆ. ಇದಲ್ಲದೆ, ಶಾಸ್ತ್ರಿಯವರು ಭ್ರಷ್ಟಾಚಾರ ವಿರುದ್ಧ ಕಠಿಣ ಲೋಕಪಾಲ ಕಾಯ್ದೆಗೆ ಆಗ್ರಹಿಸಿ ಅಣ್ಣಾ ಹಜಾರೆ ಮಾಡಿದ ಉಪವಾಸವೂ ಸರಿಯಲ್ಲ ಎಂದಿದ್ದಾರೆ. ಸಂವಿಧಾನಾತ್ಮಕ ವಿಷಗಳ ಕುರಿತು ಬೀದಿಗಳಲ್ಲಿ ನಿರ್ದಿಷ್ಟ ಗುಂಪುಗಳು ನಿರ್ಧಾರ ತೆಗೆದುಕೊಳ್ಳುವಂತಾಗಬಾರದು ಎಂದವರು ಬರೆದಿದ್ದಾರೆ.
ಈಗ ಕಾಂಗ್ರೆಸ್ ಮತ್ತು ಸರಕಾರಗಳು ಬಾಬಾ ರಾಮದೇವ್ ವಿರುದ್ಧದ ತಮ್ಮ ಕ್ರಮವನ್ನು ಒಗ್ಗಟ್ಟಿನಿಂದ ಸಮರ್ಥಿಸಿಕೊಳ್ಳುತ್ತಿದ್ದರೂ, ಅವುಗಳ ನಡುವಿನ ಭಿನ್ನಾಭಿಪ್ರಾಯವಿರುವುದು ಬಯಲಿಗೆ ಬಂದಿದ್ದಂತೂ ನಿಜ. ಅದರ ನಡುವೆಯೇ, ಬಾಬಾ ರಾಮದೇವ್ ಅವರನ್ನು ಹೀನಾಮಾನವಾಗಿ ಜರೆದಿರುವ ಕಾಂಗ್ರೆಸ್ ವಿರುದ್ಧದ ತನ್ನ ಆಕ್ರೋಶವನ್ನು ಜನ ಸಾಮಾನ್ಯನೊಬ್ಬ ಪತ್ರಕರ್ತನ ಸೋಗಿನಲ್ಲಿ ಬಂದು, ಶೂ ತೋರಿಸಿ ವ್ಯಕ್ತಪಡಿಸಿರುವುದು ಕೂಡ ಪಕ್ಷದ ಕೆಲವು ಮುಖಂಡರಲ್ಲಿ ಆತ್ಮವಿಮರ್ಶೆಗೂ ಕಾರಣವಾಗಿದೆ.