ಯೋಗ ಗುರು ಬಾಬಾ ರಾಮದೇವ್, ಆರೆಸ್ಸೆಸ್, ಬಿಜೆಪಿ ವಿರುದ್ಧ ಮನಬಂದಂತೆ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ಸಭ್ಯತೆಯ ಎಲ್ಲ ಎಲ್ಲೆಗಳನ್ನೂ ಮೀರಿದ್ದಾರೆ ಎಂದು ಬಿಜೆಪಿ ಶನಿವಾರ ಆಪಾದಿಸಿದೆ.
ದಿಗ್ವಿಜಯ್ ಸಿಂಗ್ ಅವರ ಇತ್ತೀಚಿನ ಹೇಳಿಕೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್, 'ದಿಗ್ವಿಜಯ್ ಸಿಂಗ್ ಹಾಗೂ ಕಪಿಲ್ ಸಿಬಾಲ್ ಅವರು ಬಾಯಿ ತೆರೆದಷ್ಟೂ ನಮಗೆ (ಬಿಜೆಪಿ) ಒಳ್ಳೆಯದೇ ಆಗುತ್ತಿದೆ. ಆದರೆ ದಿಗ್ವಿಜಯ್ ಸಿಂಗ್ ಅವರು ಸಭ್ಯತೆಯ ಎಲ್ಲ ಎಲ್ಲೆಗಳನ್ನೂ ಮೀರಿದ್ದಾರೆ' ಎಂದು ಹೇಳಿದರು.
'ದಿಗ್ವಿಜಯ್ ಸಿಂಗ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ 10 ವರ್ಷ ಕಾರ್ಯನಿರ್ವಹಿಸಿದ್ದರು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಅವರಿಗೆ ರಾಹುಲ್ ಗಾಂಧಿ ಅವರ ಬೆಂಬಲವೂ ಇದೆ' ಎಂದು ಪ್ರಸಾದ್ ಹೇಳಿದ್ದಾರೆ.
'ಲಷ್ಕರ್ ಎ ತೊಯ್ಬಾ ಉಗ್ರ ಒಸಾಮಾ ಬಿನ್ ಲಾಡೆನ್‌ನನ್ನು ಒಸಾಮಾಜೀ ಎಂದು ಕರೆದಿರುವುದು, ಬಾಬಾ ರಾಮದೇವ್ ಅವರನ್ನು ಠಕ್ಕ ಎಂದು ಕರೆದಿರುವುದು ಹಾಗೂ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರ ಬಗ್ಗೆ ಅವರು ಮಾಡಿರುವ ಟೀಕೆಗಳು ಸಭ್ಯತೆಯ ಎಲ್ಲೆ ಮೀರಿವೆ' ಎಂದು ಪ್ರಸಾದ್ ಹೇಳಿದರು.
'ಒಬ್ಬ ವ್ಯಕ್ತಿ ಅಥವಾ ವಿಷಯದ ಕುರಿತು ಟೀಕೆ ಮಾಡುವಾಗ ಒಂದಿಷ್ಟಾದರೂ ಸಭ್ಯತೆ ಇರಬೇಕು' ಎಂದು ಅವರು ಕಿವಿಮಾತು ಹೇಳಿದರು.