ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಐದಾರು ಸಾವಿರ ಮಂದಿ ಕೂಗಾಡಿದ್ರೆ ಶಾಸನ ಆಗಲ್ಲ: ಪ್ರಣಬ್
(Corruption | Congress | Anna Hazare | Baba Ramdev | Pranab Mukherjee)
ಐದಾರು ಸಾವಿರ ಮಂದಿ ಕೂಗಾಡಿದ್ರೆ ಶಾಸನ ಆಗಲ್ಲ: ಪ್ರಣಬ್
ಭ್ರಷ್ಟಾಚಾರ ವಿರೋಧೀ ಆಂದೋಲನಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ
ಕೋಲ್ಕತಾ, ಸೋಮವಾರ, 13 ಜೂನ್ 2011( 12:23 IST )
ಭ್ರಷ್ಟಾಚಾರ ಕುರಿತಾಗಿ ಎಲ್ಲೆಡೆಯಿಂದ ವಾಗ್ದಾಳಿಗೆ, ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಇದೀಗ, ಯೋಗ ಗುರು ಬಾಬಾ ರಾಮದೇವ್ ಮತ್ತು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಕೈಗೊಂಡಿರುವ ಭ್ರಷ್ಟಾಚಾರ-ವಿರೋಧೀ ಆಂದೋಲನಕ್ಕೆ ಪ್ರತಿಯಾಗಿ, ದೇಶಾದ್ಯಂತ ತಾನೂ ಆಂದೋಲನ ನಡೆಸಲು ನಿರ್ಧರಿಸಿದೆ. ಇದೇ ವೇಳೆ, ಶಾಸನ ಮಾಡುವವರು ನಾವು, ಸಂಸತ್ತಿನ ಹೊರಗೆ ಐದಾರು ಸಾವಿರ ಮಂದಿ ಕೂಗಾಡಿದರೆ ಅದು ಶಾಸನವಾಗುವುದಿಲ್ಲ ಎಂದು ಹಿರಿಯ ನಾಯಕ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಧಾರ್ಮಿಕ, ಆಧ್ಯಾತ್ಮಿಕ ಮುಖಂಡರು ಹಾಗೂ ಕಾಂಗ್ರೆಸ್ಸೇತರ ರಾಜಕೀಯ ನಾಯಕರ ಮನವಿಗೆ ಓಗೊಟ್ಟು ಬಾಬಾ ರಾಮದೇವ್ ಅವರು 9 ದಿನಗಳ ಉಪವಾಸ ಅಂತ್ಯಗೊಳಿಸಿದ ಕೆಲವೇ ಗಂಟೆಗಳಲ್ಲಿ ಈ ಕುರಿತು ಹೇಳಿಕೆ ನೀಡಿದ ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ, ಬಾಬಾ ಮತ್ತು ಅಣ್ಣಾ ಇಬ್ಬರ ಮೇಲೂ ವಾಗ್ದಾಳಿ ನಡೆಸುತ್ತಾ, ಅವರು ಪ್ರಜಾತಾಂತ್ರಿಕ ಸಂಸ್ಥೆಗಳನ್ನು ದುರ್ಬಲ ಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
"ಶಾಸನ ಮಾಡುವ ಹಕ್ಕನ್ನು ನಮ್ಮ ಸಂವಿಧಾನವು ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಿಗೆ ಮಾತ್ರವೇ ನೀಡಿದೆ. ಸಂಸತ್ತು ಏನು ಮಾಡಬೇಕೆಂದು ಹೊರಗೆ ನಿಂತುಕೊಂಡು ಐದಾರು ಸಾವಿರ ಮಂದಿ ಕೂಗಾಡಿದರೆ, ಇದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿದಂತೆ" ಎಂದು ಸುದ್ದಿಗೋಷ್ಠಿಯಲ್ಲಿ ಪ್ರಣಬ್ ಹೇಳಿದರು.
ಕಾಂಗ್ರೆಸ್ ಪಕ್ಷವು ಬಲಪಂಥೀಯ ಭಯೋತ್ಪಾದನೆ ಬಗ್ಗೆ ಧ್ವನಿಯೆತ್ತಿರುವುದರಿಂದಲೇ ಇವರ ಆಂದೋಲನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿಗಳು ತಾತ್ವಿಕ ಬೆಂಬಲ ನೀಡುತ್ತಾ 'ಸೇಡು ತೀರಿಸಿಕೊಳ್ಳಲು' ಕಾಂಗ್ರೆಸ್‌ಗೆ, ಸರಕಾರಕ್ಕೆ ಸಮಸ್ಯೆ ಉಂಟುಮಾಡಲು ಪ್ರಯತ್ನಿಸುತ್ತಿವೆ ಎಂದು ಮುಖರ್ಜಿ ಆರೋಪಿಸಿದರು.
ಕಾಂಗ್ರೆಸ್ ಪಕ್ಷವು ಈ ರೀತಿ ಚರ್ಚೆ, ಸಂವಾದ, ಸೆಮಿನಾರ್ ಇತ್ಯಾದಿಗಳ ಮೂಲಕ 'ಪ್ರತಿ-ಆಂದೋಲನ' ಆರಂಭಿಸಲು ಚಿಂತನೆ ನಡೆಸಿರುವಂತೆಯೇ, ಅಣ್ಣಾ ಹಜಾರೆಯವರು ನೇರವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದು, ಕಾಂಗ್ರೆಸ್ ನಾಯಕರು ತಾನು ಆರೆಸ್ಸೆಸ್ ಬಿಜೆಪಿಗಳ ಮುಖವಾಡ ಎನ್ನುತ್ತಿದ್ದಾರೆ, ತಾಕತ್ತಿದ್ದರೆ ಇದನ್ನು ಸಾಬೀತುಪಡಿಸಿ ಎಂದು ಸವಾಲೊಡ್ಡಿದ್ದಾರೆ.