ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಲ ಕಾರ್ಮಿಕತೆ: ವರ್ಷಕ್ಕೆ 1.20 ಲಕ್ಷ ಕೋಟಿ ಕಾಳ ಧನ ಸೃಷ್ಟಿ (Child labour | Generates | Rs.1.2-lakh cr | Black money)
ವಿದೇಶದಲ್ಲಿ ಭಾರತೀಯರು ಕೂಡಿಟ್ಟ ಲೆಕ್ಕಕ್ಕೆ ಸಿಗದ ಕಪ್ಪುಹಣವನ್ನು ವಾಪಸ್‌ ತರುವ ವಿಚಾರದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿರುವಾಗಲೇ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವ ಮೂಲಕ ಭಾರತದಲ್ಲಿ ಪ್ರತಿವರ್ಷ 1.2 ಲಕ್ಷ ಕೋಟಿ ರೂ. ಕಪ್ಪುಹಣ ಉತ್ಪಾದನೆಯಾಗುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು ಮಕ್ಕಳ ಹಕ್ಕುಗಳ ಸಂಘಟನೆಯೊಂದು ಬಹಿರಂಗಪಡಿಸಿದೆ.

ಬಚ್‌ಪನ್‌ ಬಚಾವೋ ಆಂದೋಲನ್‌ (ಬಿಬಿಎ) ಸಂಸ್ಥೆ ಬಿಡುಗಡೆ ಮಾಡಿದ 'ಕ್ಯಾಪಿಟಲ್‌ ಕರಪ್ಷನ್‌: ಚೈಲ್ಡ್‌ ಲೇಬರ್ ಇನ್‌ ಇಂಡಿಯಾ' ವರದಿಯಲ್ಲಿ, ಬಾಲ ಕಾರ್ಮಿಕರ ಸಂಖ್ಯೆ, ಅವರು ದುಡಿಯುವ ಆದಾಯ ಮತ್ತು ವಯಸ್ಕ ಕಾರ್ಮಿಕರ ಬದಲು ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವ ಮೂಲಕ ಅಕ್ರಮವಾಗಿ ಹಣ ಗಳಿಸುತ್ತಿರುವ ಬಗ್ಗೆ ಅಂಕಿ ಅಂಶಗಳನ್ನು ನೀಡಲಾಗಿದೆ.

ಬಾಲ ಕಾರ್ಮಿಕರು ಇತರೆ ಕಾರ್ಮಿಕರಿಗಿಂತಾ ಕಡಿಮೆ ಸಂಬಳಕ್ಕೆ ಕೆಲಸ ಮಾಡುವುದರಿಂದಾಗಿ, ಹೆಚ್ಚು ಲಾಭ ಮಾಡುವ ದುರಾಸೆಯಿಂದಾಗಿ ಬಾಲ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಬಾಲ ಕಾರ್ಮಿಕತೆ, ಭ್ರಷ್ಟಾಚಾರ ಮತ್ತು ಕಾಳಧನದ ಹರಿವು ಮಧ್ಯವರ್ತಿಗಳು ಹಾಗೂ ಉದ್ಯೋಗದಾತರಿಗೆ ಮಾತ್ರವೇ ಭರ್ಜರಿ ಲಾಭ ತಂದುಕೊಡುತ್ತಿದ್ದು, ಅವರಿಬ್ಬರ ನಡುವಣ ಈ ಅಕ್ರಮ ಸಂಬಂಧವನ್ನು ಬಲಪಡಿಸುತ್ತಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ದೇಶದಲ್ಲಿ ಸುಮಾರು 6 ಕೋಟಿ ಬಾಲ ಕಾರ್ಮಿಕರು ವರ್ಷದಲ್ಲಿ ಸರಾಸರಿ ಇನ್ನೂರು ದಿನಗಳ ಕಾಲ ಪ್ರತಿದಿನ 15 ರೂ.ಗೆ ದುಡಿಯುತ್ತಿದ್ದಾರೆ ಎಂದು ಅಧ್ಯಯನ ವರದಿ ತಿಳಿಸಿದೆ.

'ಬಾಲಕಾರ್ಮಿಕರಿಗೆ ವಾರ್ಷಿಕವಾಗಿ ನೀಡುವ ಸರಾಸರಿ ಸಂಬಳವು 18 ಸಾವಿರ ಕೋಟಿ ರೂಪಾಯಿ. ಆರು ಕೋಟಿ ಬಾಲಕಾರ್ಮಿಕರ ಬದಲು ದಿನವೊಂದಕ್ಕೆ ಸರಾಸರಿ 115 ರೂ. ಸಂಬಳ ಪಡೆಯುವ ವಯಸ್ಕ ಕಾರ್ಮಿಕರನ್ನು ನೇಮಿಸಿದರೆ, 1.38 ಲಕ್ಷ ಕೋಟಿ ರೂ. ನೀಡಬೇಕಾಗುತ್ತಿತ್ತು. ಈ ಎರಡು ಮೊತ್ತಗಳ ನಡುವಿನ ಅಂತರವು 1.20 ಲಕ್ಷ ಕೋಟಿ ರೂ.' ಎಂದು ಅಧ್ಯಯನ ವರದಿ ಅಂಕಿ ಅಂಶ ನೀಡಿದೆ.

ಈ ಹಣವನ್ನು ಉದ್ಯೋಗದಾತರು ಕಾರ್ಮಿಕರಿಗೆ ಕೊಡಬೇಕು. ಆದರೆ ಬಾಲಕಾರ್ಮಿಕರನ್ನೇ ನೇಮಿಸಿ ಅವರನ್ನು ಕಡಿಮೆ ಸಂಬಳಕ್ಕೆ ಹೆಚ್ಚು ದುಡಿಸುತ್ತಿದ್ದಾರೆ. 'ಉದ್ಯೋಗದಾತರು ತೆರಿಗೆಯಿಂದ ತಪ್ಪಿಸಿಕೊಳ್ಳಲು ತಮ್ಮ ಆದಾಯದ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಪ್ರತಿವರ್ಷ 1.20 ಲಕ್ಷ ಕೋಟಿ ರೂ. ಕಪ್ಪು ಹಣ ಅಕ್ರಮವಾಗಿ ಸಂಗ್ರಹಿಸಲಾಗುತ್ತಿದೆ' ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.