ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾಗೆ ಅಂಕುಶ ಹಾಕ್ಬೇಕಾಗಿದೆ: ಕಾಂಗ್ರೆಸ್ ನೇರ ವಾಗ್ದಾಳಿ
(Corruption | Congress | Anna Hazare | Lokpal Bill | Team Anna)
ಅಣ್ಣಾಗೆ ಅಂಕುಶ ಹಾಕ್ಬೇಕಾಗಿದೆ: ಕಾಂಗ್ರೆಸ್ ನೇರ ವಾಗ್ದಾಳಿ
ನವದೆಹಲಿ, ಸೋಮವಾರ, 13 ಜೂನ್ 2011( 18:44 IST )
ಯೋಗ ಗುರು ಬಾಬಾ ರಾಮದೇವ್ ಅವರ ಉಪವಾಸ ವ್ರತದ ಆಂದೋಲನಕ್ಕೆ ತಡೆಯೊಡ್ಡುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಇದೀಗ ಅಣ್ಣಾ ಹಜಾರೆ ಬಣದ ಮೇಲೆ ಪೂರ್ಣ ಪ್ರಮಾಣದಲ್ಲಿ ಮುಗಿಬಿದ್ದಿದ್ದು, ಉಭಯ ಬಣಗಳ ನಡುವಿನ ವಾಕ್ಸಮರ ಮುಂದುವರಿದಿದೆಯಲ್ಲದೆ, ಅಣ್ಣಾ ಹಜಾರೆ ಮೇಲೆಯೇ ನೇರವಾಗಿ ವಾಗ್ದಾಳಿ ಆರಂಭಿಸಿರುವುದು ಕುತೂಹಲ ಕೆರಳಿಸಿದೆ.
ತಮ್ಮ ವಕ್ತಾರ ಮನೀಷ್ ತಿವಾರಿ ಮೂಲಕ ತೀವ್ರ ವಾಗ್ದಾಳಿಯನ್ನು ಆರಂಭಿಸಿರುವ ಕಾಂಗ್ರೆಸ್, ಚುನಾಯಿತರಾಗದವರ ಒಂದು ಗುಂಪಿನ ಒತ್ತಾಸೆಯಿಂದಾಗಿ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎದುರಾಗಿದೆ ಎಂದು ಟೀಕಿಸಿದೆ.
ಲೋಕಪಾಲ ಕರಡು ಮಸೂದೆಯ ಜಂಟಿ ಸಮಿತಿಯಲ್ಲಿರುವ ನಾಗರಿಕ ಸಮಾಜದ ಪ್ರತಿನಿಧಿ ಅಣ್ಣಾ ಹಜಾರೆಯವರ ಕಳೆದ ಎರಡು ತಿಂಗಳ ಚಟುವಟಿಕೆಗಳನ್ನು ಗಮನಿಸಿದರೆ, ಅವರಿಗೆ ಅಂಕುಶ ಹಾಕುವ ಅಗತ್ಯವಿದೆ ಎಂದ ತಿವಾರಿ, ತಾನು ಸರಕಾರ ಉರುಳಿಸಬಲ್ಲೆ ಎಂಬ ಭ್ರಮೆ ಹಜಾರೆ ಅವರಿಗಿದ್ದರೆ ಇದ್ದರೆ, ಅದು ತಪ್ಪಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತಿವಾರಿ, ಹಜಾರೆ ಅವರು ಬಿಜೆಪಿ ಆಡಳಿತವಿರುವ ರಾಜ್ಯಗಳ ಸರಕಾರಗಳನ್ನು ಟೀಕಿಸುವುದಿಲ್ಲವೇಕೆ ಎಂದು ಪ್ರಶ್ನಿಸಿದರು. ಬೆಂಗಳೂರಿಗೆ ಹೋಗುತ್ತಾರೆ, ಅಲ್ಲಿನ ಸರಕಾರದ ವಿರುದ್ಧ ಆರೋಪಗಳು ಕೇಳಿಬಂದಾಗ, ಯಡಿಯೂರಪ್ಪರ ಭ್ರಷ್ಟಾಚಾರವು ಅಣ್ಣಾ ಹಜಾರೆಗೆ ಕಾಣಿಸುವುದೇ ಇಲ್ಲ ಎಂದ ಮನೀಷ್ ತಿವಾರಿ, ರಾಜಕೀಯ ಪಕ್ಷಗಳ ಬೆಂಬಲವಿಲ್ಲ ಎನ್ನುತ್ತಿದ್ದಾರೆ. ಹಾಗಿದ್ದರೆ ಅವರೇಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಹೊಗಳಬೇಕು ಎಂದು ಪ್ರಶ್ನಿಸಿದ್ದಾರೆ.