ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟರ ವಿರುದ್ಧ ಹೋರಾಟ ಕೋಮುವಾದವೇ?: ಕಾಂಗ್ರೆಸ್‌ಗೆ ಬಿಜೆಪಿ (Corruption | Congress | Anna Hazare | Secular | Communal)
PTI
ಭ್ರಷ್ಟಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಒಂದೆಡೆ ಕಾಂಗ್ರೆಸ್ ಮತ್ತು ಅಣ್ಣಾ ಹಜಾರೆ ಬಣದ ನಡುವೆ ವಾಕ್ಸಮರ ನಡೆಯುತ್ತಿದ್ದರೆ, ಮತ್ತೊಂದೆಡೆಯಿಂದ ಬಿಜೆಪಿ, ಸಂಘಪರಿವಾರ ಕೂಡ ವಾಕ್ಪ್ರಹಾರ ನಡೆಸಲಾರಂಭಿಸಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವವರ ವಿರುದ್ಧ ಮನಬಂದಂತೆ ಹೀಗಳೆಯುತ್ತಿರುವ ಕಾಂಗ್ರೆಸ್ ಪಕ್ಷವು ಮಾನಸಿಕ ಸಮತೋಲನವನ್ನೇ ಕಳೆದುಕೊಂಡಿದೆ ಎಂದು ಟೀಕಿಸಿರುವ ಬಿಜೆಪಿ, ಭ್ರಷ್ಟಾಚಾರ ವಿರುದ್ಧ ಹೋರಾಡುವುದು ಅದಕ್ಕೆ 'ಕೋಮುವಾದ'ವಾಗಿಯೂ, ಕಪ್ಪು ಹಣವುಳ್ಳವರಿಗೆ ರಕ್ಷಣೆ ನೀಡುವುದು 'ಜಾತ್ಯತೀತವಾದ'ವಾಗಿಯೂ ಕಾಣಿಸುತ್ತಿದೆ ಎಂದು ಟೀಕಿಸಿದೆ.

ಅಣ್ಣಾ ಹಜಾರೆ ಹಾಗೂ ಬಾಬಾ ರಾಮದೇವ್ ಅವರ ಹೋರಾಟದ ಹಿಂದೆ ಆರೆಸ್ಸೆಸ್, ಬಿಜೆಪಿ ಇದೆ ಎಂದೆಲ್ಲಾ ಕಾಂಗ್ರೆಸ್ ಟೀಕಿಸಿತ್ತು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಮುಖ್ತಾರ್ ಅಬ್ಬಾಸ್ ನಖ್ವಿ, ಕಾಳಧನವನ್ನು ವಿದೇಶದಲ್ಲಿ ಕೂಡಿಟ್ಟವರಿಗೆ, ಭಯೋತ್ಪಾದಕರಿಗೆ, ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡುವುದು ಕಾಂಗ್ರೆಸ್ ಮಟ್ಟಿಗೆ ಧರ್ಮ ನಿರಪೇಕ್ಷತೆ, ಭ್ರಷ್ಟಾಚಾರದ ವಿರುದ್ಧ ಹೋರಾಡುವುದು, ಉಗ್ರಗಾಮಿಗಳಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸುವುದು, ಕಪ್ಪು ಹಣವನ್ನು ಭಾರತಕ್ಕೆ ಕರೆ ತರಬೇಕೆಂದು ಒತ್ತಾಯಿಸುವುದು ಕೋಮುವಾದ ಅಂತ ಕಾಣಿಸುತ್ತದೆ ಎಂದು ವ್ಯಂಗ್ಯವಾಡಿದರು.

ಇನ್ನೊಂದೆಡೆ, ವಿದೇಶದಲ್ಲಿ ಕೂಡಿಟ್ಟಿರುವ ಕಾಳ ಧನವನ್ನು ವಾಪಸ್ ತರಿಸಲು ಕೇಂದ್ರವು ಯಾವೆಲ್ಲಾ ಕ್ರಮ ಕೈಗೊಂಡಿದೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ ಬಿಜೆಪಿ ನಾಯಕ ರಾಜನಾಥ್ ಸಿಂಗ್, ಸರಕಾರಕ್ಕೆ ನಿಜಕ್ಕೂ ಭ್ರಷ್ಟಾಚಾರ ತೊಲಗಿಸುವ ಬದ್ಧತೆಯಿದ್ದರೆ, ಮುಂಗಾರು ಅಧಿವೇಶನದ ಬಳಿಕ ವಿಶೇಷ ಅಧಿವೇಶನ ಕರೆದು ಚರ್ಚಿಸಬೇಕು ಎಂದು ಒತ್ತಾಯಿಸಿದರು.

ಆರೆಸ್ಸೆಸ್ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಭ್ರಷ್ಟಾಚಾರ ವಿರುದ್ಧ ಕಟಿಬದ್ಧರಾಗಿರುವ ನಾಗರಿಕ ಸಮಾಜ ಸದಸ್ಯರ ಮೇಲೆ ಕೆಸರೆರಚುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆರೆಸ್ಸೆಸ್ ವಕ್ತಾರ ರಾಮಮಾಧವ್, ಕಾಂಗ್ರೆಸ್ ಮತ್ತು ಸರಕಾರದಲ್ಲಿರುವ ನಾಯಕರು, ಭ್ರಷ್ಟರ ವಿರುದ್ಧ ಹೋರಾಡುತ್ತಿರುವ ಅಣ್ಣಾ ಹಜಾರೆ ಅಥವಾ ಬಾಬಾ ರಾಮದೇವ್ ಬಗ್ಗೆ ಕೀಳುಮಟ್ಟದ ಮತ್ತು ಆಧಾರ ರಹಿತ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಇವನ್ನೂ ಓದಿ