ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಣಿಗಾರಿಕೆ ವಿರುದ್ಧ 4 ತಿಂಗಳ ನಿರಶನ: ಸ್ವಾಮೀಜಿ ಅಪಮೃತ್ಯು
(Swami Nigamananda dies of Fasting | Ganga River | Illegal Mining | Haridwar)
ಗಣಿಗಾರಿಕೆ ವಿರುದ್ಧ 4 ತಿಂಗಳ ನಿರಶನ: ಸ್ವಾಮೀಜಿ ಅಪಮೃತ್ಯು
ಡೆಹ್ರಾಡೂನ್, ಮಂಗಳವಾರ, 14 ಜೂನ್ 2011( 12:11 IST )
ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದವರನ್ನು ಬಲ ಪ್ರಯೋಗಿಸಿ ಎತ್ತಂಗಡಿ ಮಾಡಿಸಲಾಗುತ್ತದೆಯೇ ಹೊರತು, ಗಾಂಧೀಜಿ ಹೇಳಿಕೊಟ್ಟ ಶಾಂತಿಯುತ ಆಂದೋಲನ ಮಾರ್ಗ ಅನುಸರಿಸಿದವರ ಬಗ್ಗೆ ಅಧಿಕಾರಸ್ಥರು ಗಮನ ಹರಿಸುತ್ತಿಲ್ಲ ಎಂಬುದಕ್ಕೆ ಸಾಕ್ಷಿ, ಸರಿ ಸುಮಾರು ನಾಲ್ಕು ತಿಂಗಳ ಕಾಲ ಉಪವಾಸ ನಡೆಸುತ್ತಿದ್ದ ಸತ್ಯಾಗ್ರಹಿಯೊಬ್ಬರು ಸದ್ದಿಲ್ಲದೆ ಮೃತಪಟ್ಟಿದ್ದಾರೆ.
ಗಂಗಾ ನದಿ ಮಲಿನವಾಗುತ್ತಿದ್ದು, ಸುತ್ತ ಮುತ್ತಲ ಗಣಿಗಾರಿಕೆ ಮತ್ತು ಕಲ್ಲು ಕೊರೆಯುವಿಕೆ ತಡೆಯಬೇಕು ಎಂದು ಒತ್ತಾಯಿಸಿ ಹರಿದ್ವಾರ ಗಂಗಾ ತಟದಲ್ಲಿರುವ ಮಾತೃ ಸದನ ಆಶ್ರಮದ ಸ್ವಾಮಿ ನಿಗಮಾನಂದ 74 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿದ ಪರಿಣಾಮವಾಗಿ ಆಸ್ಪತ್ರೆ ಸೇರಿದ್ದ ಯೋಗ ಗುರು ಬಾಬಾ ರಾಮದೇವ್ ಅವರಿದ್ದ ಡೆಹ್ರಾಡೂನ್‌ನ ಹಿಮಾಲಯ ಆಸ್ಪತ್ರೆಯಲ್ಲೇ ಸ್ವಾಮಿ ನಿಗಮಾನಂದ ಅವರೂ ದಾಖಲಾಗಿದ್ದರು ಎಂಬುದು ವಿಪರ್ಯಾಸ.
ಬಾಬಾ ರಾಮದೇವ್ ಅವರು ನೇರವಾಗಿಯೇ ಕಾಂಗ್ರೆಸ್ ಮತ್ತು ಯುಪಿಎ ಸರಕಾರದ ಮೇಲೆಯೇ ಮುಗಿಬಿದ್ದಿದ್ದರು. ಹೀಗಾಗಿ ಮಾಧ್ಯಮಗಳಿಂದಲೂ ಸಾಕಷ್ಟು ಪ್ರಚಾರ ಪಡೆದರು. ಆದರೆ ಸ್ವಾಮೀ ನಿಗಮಾನಂದ ಅವರ ಹೋರಾಟವು ರಾಷ್ಟ್ರೀಯ ಮಾಧ್ಯಮಗಳ, ವಿಶೇಷವಾಗಿ ವಾಹಿನಿಗಳ ಕಣ್ಣಿಗೆ ಬಿದ್ದಿರಲಿಲ್ಲ. 2008ರಲ್ಲೂ ಅವರು ಸುಮಾರು 3 ತಿಂಗಳ ಕಾಲ ಉಪವಾಸ ಮಾಡಿದ್ದರು.
ಗಂಗಾ ನದಿ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಿಲ್ಲಿಸಿ ಪವಿತ್ರ ನದಿಯನ್ನು ರಕ್ಷಿಸುವಂತೆ ಆಗ್ರಹಿಸಿ ಸ್ವಾಮಿ ನಿಗಮಾನಂದ ಅವರು ಫೆಬ್ರವರಿ 19ರಿಂದ ನಿರಶನ ಪ್ರಾರಂಭಠಿಸಿದ್ದರು. ಉಪವಾಸದಿಂದಾಗಿ ಅವರ ಪರಿಸ್ಥಿತಿ ಚಿಂತಾಜನಕವಾದಾಗ ಏಪ್ರಿಲ್ 27ರಂದು ಅವರನ್ನು ಬಲವಂತವಾಗಿ ಹರಿದ್ವಾರದ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಉಪವಾಸ ತೀವ್ರವಾಗಿದ್ದರಿಂದಾಗಿ ಕೋಮಾ ಸ್ಥಿತಿಗೆ ತಲುಪಿದಾಗ ಈ ತಿಂಗಳಾರಂಭದಲ್ಲಿ ಹಿಮಾಲಯನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟರು.
ವಿಷವುಣಿಸಿ ಕೊಲ್ಲಲಾಯಿತೇ? ಆದರೆ, ಸ್ವಾಮೀಜಿಗೆ ವಿಷವುಣಿಸಿ ಕೊಲ್ಲಲಾಗಿದೆ ಎಂದು ಆರೋಪಿಸಿರುವ ಅವರ ಬೆಂಬಲಿಗರು, ಈ ಕುರಿತು ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಗಣಿಗಾರಿಕೆಯಲ್ಲಿ ಸರಕಾರವೂ ಭಾಗಿಯಾಗಿದೆ. ಅದು ಗಣಿ ಮಾಫಿಯಾವನ್ನು ರಕ್ಷಿಸುತ್ತಿದೆ. ಅವರು ಯಾವುದೇ ಮಾಧ್ಯಮಗಳ ಕವರೇಜ್ ಇಲ್ಲದೆಯೇ ನೈಜವಾಗಿ ಹೋರಾಟ ಮಾಡುತ್ತಿದ್ದರು ಎಂದು ಅದೇ ಆಶ್ರಮದ ಸ್ವಾಮಿ ಕೈಲಾಸಾನಂದ ಅವರು ಹೇಳಿದ್ದಾರೆ.
ಸ್ವಾಮೀಜಿ ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಅವರಿಗೆ ವಿಷ ಉಣಿಸಿರುವುದು ಪತ್ತೆಯಾಗಿದೆ ಎಂಬ ಕುರಿತು ವದಂತಿಗಳು ಹಬ್ಬಿದ್ದು, ಈ ಕುರಿತು ಸಿಬಿಐ ತನಿಖೆಗೆ ಬೆಂಬಲಿಗರು ಒತ್ತಾಯಿಸತೊಡಗಿದ್ದಾರೆ.
ಅವರ ಮನವೊಲಿಕೆಗೆ ಯಾವುದೇ ಮಂತ್ರಿಗಳು ಹೋಗಲಿಲ್ಲ, ಸರಕಾರದ ಪ್ರತಿನಿಧಿಗಳು ತೆರಳಲಿಲ್ಲ, ಜನ ಸಾಮಾನ್ಯರೂ ದೂರವೇ ಉಳಿದಿದ್ದರು. ಸ್ವಾಮಿ ನಿಗಮಾನಂದ ಪಾರ್ಥಿವ ಶರೀರವನ್ನು ಶವಾಗಾರದಿಂದ ತೆಗೆದುಕೊಂಡು ಹೋದಾಗ, ಅಲ್ಲಿ ರಾಜಕಾರಣಿಗಳಿರಲಿಲ್ಲ, ಸಾಧು ಸಂತರಿರಲಿಲ್ಲ, ಯಾವ ಅಧಿಕಾರಿಗಳೂ ಇರಲಿಲ್ಲ!