ಕಪ್ಪು ಹಣದ ಬಗ್ಗೆ ದೇಶವು ಜಾಗೃತವಾಗಿದೆ ಎಂದಿರುವ ಯೋಗ ಗುರು ಬಾಬಾ ರಾಮದೇವ್, ಭ್ರಷ್ಟಾಚಾರದ ವಿರುದ್ಧ ಹಾಗೂ ವಿದೇಶದಲ್ಲಿ ಭಾರತೀಯರು ಕೂಡಿಟ್ಟ ಲೆಕ್ಕಕ್ಕೆ ಸಿಗದ ಕಪ್ಪುಹಣವನ್ನು ವಾಪಸ್ ತರಲು ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ್ದಾರಲ್ಲದೆ, ಶಾಂತಿಯುತವಾಗಿ, ಸಂವಿಧಾನಬದ್ಧವಾಗಿಯೇ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಕೇಂದ್ರ ಸರಕಾರ ಮಾಡಿದ ದೌರ್ಜನ್ಯದ ಆ ಕರಾಳ ರಾತ್ರಿಯನ್ನು ಜೀವನದಲ್ಲೆಂದಿಗೂ ಮರೆಯುವುದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಡೆಹ್ರಾಡೂನ್ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಾಬಾ, ವಿದೇಶದಲ್ಲಿ ಭಾರತೀಯರು ಕೂಡಿಟ್ಟ ಕಪ್ಪುಹಣವನ್ನು ವಾಪಸ್ ತರಲು ತಾವು ಪ್ರತಿಭಟನೆ ನಡೆಸಿದ್ದನ್ನು ಸಮರ್ಥಿಸಿಕೊಂಡರು. ಕಪ್ಪುಹಣವನ್ನು ಭಾರತಕ್ಕೆ ವಾಪಸ್ ತರಬೇಕು ಎಂದು ಪುನರಪಿ ಒತ್ತಾಯಿಸಿದರು.
ತಾವು ದೆಹಲಿಯಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಶಾಂತಿಯುತ ಹಾಗೂ ಸಂವಿಧಾನಬದ್ಧವಾಗಿತ್ತು, ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘಿಸಿರಲಿಲ್ಲ ಎಂದ ಬಾಬಾ, ಮಧ್ಯರಾತ್ರಿ ಪೊಲೀಸರು ತಮ್ಮ ಬೆಂಬಲಿಗರ ಮೇಲೆ ನಡೆಸಿದ ದೌರ್ಜನ್ಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು. ಅಂತೆಯೇ, ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೆಂಬಲಿಸಿದ ಎಲ್ಲರಿಗೂ ಬಾಬಾ ಧನ್ಯವಾದ ಹೇಳಿದರು.
ಯೋಗಾಭ್ಯಾಸ ಮಾಡದಂತೆ ಸಲಹೆ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಕೆಲ ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆಯೂ, ಪೂರ್ಣವಾಗಿ ಗುಣಮುಖರಾಗುವವರೆಗೂ ಪ್ರಾಣಾಯಾಮ ಮತ್ತು ಯೋಗಾಸನ ಮಾಡದಿರುವಂತೆಯೂ ವೈದ್ಯರು ಬಾಬಾ ಅವರಿಗೆ ಸಲಹೆ ನೀಡಿದ್ದಾರೆ.