ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಯಾಗೆ ವಿಶೇಷ ಕಾರು ಕಳುಹಿಸಿ ಕರೆಸಿಕೊಂಡ ಪ್ರಧಾನಿ
(Jayalalithaa | Tamilnadu | PMO | Manmohan Singh | 2G | Politics)
ಜಯಾಗೆ ವಿಶೇಷ ಕಾರು ಕಳುಹಿಸಿ ಕರೆಸಿಕೊಂಡ ಪ್ರಧಾನಿ
ನವದೆಹಲಿ, ಮಂಗಳವಾರ, 14 ಜೂನ್ 2011( 14:12 IST )
PTI
ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಶತ್ರುಗಳೂ ಅಲ್ಲ. ಒಂದು ಕಾಲದಲ್ಲಿ ಹೀನಾಮಾನವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಟೀಕಿಸಿದ್ದ ತಮಿಳುನಾಡು ಹಾಲಿ ಮುಖ್ಯಮಂತ್ರಿ ಜಯಲಲಿತಾ ಅವರು ದೆಹಲಿಗೆ ಬಂದಾಗ, ಮಂಗಳವಾರ ಸ್ವತಃ ಪ್ರಧಾನ ಮಂತ್ರಿ ಕಚೇರಿಯೇ ಆಕೆಯನ್ನು ಕಾರು ಕಳುಹಿಸಿ, ಬರಮಾಡಿಕೊಂಡಿದೆ.
ಪ್ರಧಾನಮಂತ್ರಿಯನ್ನು ಮಂಗಳವಾರ ಭೇಟಿ ಮಾಡಿದ ಜಯಲಲಿತಾ, ತಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ಬೇಡಿಕೆಗಳ ದೊಡ್ಡ ಪಟ್ಟಿಯನ್ನೇ ಪ್ರಧಾನಿಗೆ ನೀಡಿದ್ದು, ಇದು ಸೌಹಾರ್ದಯುತ ಮಾತುಕತೆಯಷ್ಟೇ. ಯಾವುದೇ ರಾಜಕೀಯ ಇಲ್ಲ ಎಂದು ಹೇಳಿದ್ದಾರೆ.
ಪತ್ರಕರ್ತರ ಪ್ರಶ್ನೆಗಳ ಮಹಾಪೂರಕ್ಕೆ ಉತ್ತರಿಸಿದ ಜಯಲಲಿತಾ, ನಾವೇನೂ ಯುಪಿಎಗೆ ಬೆಂಬಲ ಘೋಷಿಸಿಲ್ಲ. ನಮ್ಮ ಬೆಂಬಲ ಬೇಕಾದವರು ಅವರಾಗಿಯೇ ಬಂದು ಕೇಳಬೇಕು ಎಂದು ತಮ್ಮ ಎಂದಿನ ದಿಟ್ಟತನವನ್ನು ಪ್ರದರ್ಶಿಸಿದ್ದಾರೆ.
ಒಂದೆಡೆ, ತಮಿಳುನಾಡಿನ ಮತ್ತೊಂದು ಬಲಾಢ್ಯ ಪಕ್ಷ ಡಿಎಂಕೆ 2ಜಿ ಹಗರಣದ ಸುಳಿಯೊಳಗೆ ಸಿಲುಕಿ, ವಿಧಾನಸಭಾ ಚುನಾವಣೆಗಳಲ್ಲಿ ಹೀನಾಯವಾಗಿ ದಂಡಿಸಿಕೊಂಡಿದ್ದಷ್ಟೇ ಅಲ್ಲದೆ, ಅದರ ಮಾಜಿ ಕೇಂದ್ರ ಮಂತ್ರಿ ಎ.ರಾಜಾ ಹಾಗೂ ಸಂಸದೆ ಕನಿಮೊಳಿ ಜೈಲು ಪಾಲಾಗಿದ್ದಾರೆ. ಡಿಎಂಕೆ ಇದೀಗ ಕನಿಮೊಳಿಯನ್ನು ಸಿಬಿಐ ಬಂಧಿಸಿರುವುದರಿಂದಾಗಿ ಕಾಂಗ್ರೆಸ್ ವಿರುದ್ಧದ ಒಳಗೊಳಗೇ ಕುದಿಯುತ್ತಿರುವಂತೆಯೇ, ಜಯಲಲಿತಾ ಅವರಿಗೆ ಯುಪಿಎ ಈ ರೀತಿಯ ಅದ್ಧೂರಿ ಸ್ವಾಗತ ಕೋರಿರುವುದು ಅದನ್ನು ಮತ್ತಷ್ಟು ಅಧೀರವನ್ನಾಗಿಸಿದೆ.
ತಮಿಳುನಾಡು ಚುನಾವಣೆಯಲ್ಲಿ ಗೆದ್ದ ಬಳಿಕ ಮೊದಲ ಬಾರಿ ದೆಹಲಿಗೆ ಭೇಟಿ ನೀಡಿದ ಜಯಲಲಿತಾ ಉಳಿದುಕೊಂಡಿದ್ದ ತಮಿಳುನಾಡು ಭವನಕ್ಕೆ ಪ್ರಧಾನಿ ಕಾರ್ಯಾಲಯದ ಕಾರನ್ನೇ ಕಳುಹಿಸಲಾಗಿದ್ದು 7, ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ನಿವಾಸಕ್ಕೆ ಆಕೆಗೆ ಯಾವುದೇ ಔಪಚಾರಿಕ ಭದ್ರತಾ ತಪಾಸಣೆಯೂ ಇಲ್ಲದೆ, ಒಳಗೆ ಕರೆದುಕೊಳ್ಳಲಾಗಿತ್ತು.
ಒಂದೆಡೆ 2ಜಿ ಹಗರಣದ ರೂವಾರಿ ಎಂದೇ ಹೇಳಲಾಗುತ್ತಿರುವ ಹಿಂದಿನ ಟೆಲಿಕಾಂ ಸಚಿವ, ಹಾಲಿ ಜವಳಿ ಸಚಿವ ದಯಾನಿಧಿ ಮಾರನ್ ರಾಜೀನಾಮೆಗೂ ಎಲ್ಲೆಡೆಯಿಂದ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಜಯಲಲಿತಾ ಮತ್ತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಭೇಟಿಗೆ ಹೆಚ್ಚಿನ ಮಹತ್ವ ಬಂದಿದೆ.
ಜಯಲಲಿತಾ ಬಣವು ಯುಪಿಎಗೆ ಹತ್ತಿರವಾಗುತ್ತಿರುವುದು ಡಿಎಂಕೆಯ ಆಕ್ರೋಶದ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಆದರೆ, ಒಂದು ಕಾಲದಲ್ಲಿ ಯುಪಿಎಯನ್ನೇ ನಡುಗಿಸುವಷ್ಟು ಬಲ ಹೊಂದಿದ್ದ ಡಿಎಂಕೆ, ಈಗ ಕುಗ್ಗಿ ಹೋಗಿದೆ. ತಮಿಳುನಾಡಿನಲ್ಲಿಯೂ ಅಧಿಕಾರ ಇಲ್ಲ, ಕೇಂದ್ರದಲ್ಲಿಯೂ ಇದ್ದ ಚೂರು ಪಾರು ಅಧಿಕಾರ ಹೋಗಿಬಿಡಬಹುದೆಂಬ ಆತಂಕ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ನೇತೃತ್ವದ ಡಿಎಂಕೆ ಮಂದಿಯದ್ದು.
ರಾಜಕೀಯವು ಯಾವ ಕ್ಷಣ ಯಾವ ಕಡೆ ವಾಲುತ್ತದೆಯೋ ಎಂಬುದಕ್ಕೆ ಕಾಲವೇ ಉತ್ತರ ಹೇಳುತ್ತದೆ.