ಕೇಂದ್ರದ ಹಿರಿಯ ಮತ್ತು ಗೌರವಾನ್ವಿತ ಸಚಿವರಲ್ಲೊಬ್ಬರಾಗಿದ್ದ ವಿತ್ತ ಮಂತ್ರಿ ಪ್ರಣಬ್ ಮುಖರ್ಜಿಯವರೇ ಅಣ್ಣಾ ಹಜಾರೆ ಮತ್ತವರ ಬಳಗದ ವಿರುದ್ಧ ಕಿಡಿ ಕಾರಿದ ಬಳಿಕ ಆಕ್ರೋಶಿತಗೊಂಡಿರುವ ನಾಗರಿಕ ಸಮಾಜವು, 2001ರಲ್ಲಿ ಲೋಕಪಾಲ ಮಸೂದೆಯ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದ ಇದೇ ಪ್ರಣಬ್ ಮುಖರ್ಜಿ, ವೀರಪ್ಪ ಮೊಯ್ಲಿ ಮತ್ತು ಚಿದಂಬರಂ ಅವರು ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದೇಕೆ ಎಂದು ಪ್ರಶ್ನಿಸಿದೆ. ಲೋಕಪಾಲ ವ್ಯಾಪ್ತಿಗೆ ಪ್ರಧಾನಿಯೂ ಬರಬೇಕು ಎಂದು ಮುಖರ್ಜಿ ಮಾಡಿದ್ದ ಶಿಫಾರಸನ್ನು, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಮ್ಮತಿಯನ್ನೂ ಸೂಚಿಸಿದ್ದರು ಎಂದು ಹಜಾರೆ ಬಣದವರು ನೆನಪಿಸಿದ್ದಾರೆ.
ಈ ಕುರಿತು ಹಾಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಅಣ್ಣಾ ಹಜಾರೆ ಬಳಗವು, ಮುಖರ್ಜಿ ಮಾತ್ರವೇ ಅಲ್ಲ, 2011ರ ಜನವರಿ ತಿಂಗಳಲ್ಲಿ ಈಗಿನ ಸರಕಾರದ ಕಾನೂನು ಮಂತ್ರಿ ಎಂ.ವೀರಪ್ಪ ಮೊಯ್ಲಿ ಕೂಡ ತಾವು ರೂಪಿಸಿದ್ದ ಕರಡಿನಲ್ಲಿ, ಪ್ರಧಾನಿಯೂ ಲೋಕಪಾಲ ವ್ಯಪ್ತಿಗೆ ಬರಬೇಕು ಎಂದು ಸಲಹೆ ನೀಡಿದ್ದರು. ಈ ಕರಡನ್ನು ಪಿ.ಚಿದಂಬರಂ ನೇತೃತ್ವದ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿತ್ತು. 2011ರ ಮಾರ್ಚ್ ತಿಂಗಳಲ್ಲಿ ನೀಡಿದ ಹೇಳಿಕೆಯಲ್ಲಿ ಗೃಹ ಸಚಿವಾಲಯವೂ ಇದಕ್ಕೆ ಪೂರಕವಾಗಿತ್ತು ಎಂದು ವಿವರಿಸಿದೆ.
ಈಗ ಜಂಟಿ ಕರಡು ಸಮಿತಿಯಲ್ಲಿರುವ ಚಿದಂಬರಂ, ಮೊಯ್ಲಿ, ಪ್ರಣಬ್ ಸಹಿತ ಐವರು ಮಂತ್ರಿಗಳೂ ಕೂಡ ಒಗ್ಗಟ್ಟಾಗಿ, ಲೋಕಪಾಲ ವ್ಯಾಪ್ತಿಗೆ ಪ್ರಧಾನಿ ಕಚೇರಿಯನ್ನು ತರುವುದನ್ನು ಬಲವಾಗಿ ವಿರೋಧಿಸುತ್ತಿರುವುದೇಕೆ ಎಂದು ಅಣ್ಣಾ ಹಜಾರೆ ಬಣವು ಪ್ರಶ್ನಿಸಿದೆ.
ಮೊನ್ನೆ ಮಾರ್ಚ್ ತಿಂಗಳಿಂದ ಇದುವರೆಗಿನ ಎರಡು ತಿಂಗಳ ಅವಧಿಯಲ್ಲಿ ಮನಸ್ಸು ಬದಲಾಯಿಸಲು ಕಾರಣವೇನು ಎಂದು ತಿಳಿಯಲು ನಾವು ಬಯಸುತ್ತಿದ್ದೇವೆ. ಇದು ನಿಗೂಢ. ಮನಮೋಹನ್ ಸಿಂಗ್ ಅವರಂತಹಾ ಪ್ರಾಮಾಣಿಕ ಪ್ರಧಾನಿಯೊಬ್ಬರು, ಲೋಕಪಾಲ ವ್ಯಾಪ್ತಿಗೆ ಬರುವುದಕ್ಕೆ ಹೆದರುವುದೇಕೆ ಎಂದು ನಾಗರಿಕ ಸಮಿತಿ ಸದಸ್ಯರಲ್ಲೊಬ್ಬರಾದ ಅರವಿಂದ ಕೇಜ್ರಿವಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದರು.