ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ವರ್ಗಾಯಿಸಲೆಂದು ಅಲ್ಲಿಗೆ ತೆರಳಿದ್ದಾರೆ ಎನ್ನುವ ಟೀಕಾಕಾರರ ಆರೋಪಗಳ ಮಧ್ಯೆಯೇ, ಕಾಂಗ್ರೆಸ್ ಅಧ್ಯಕ್ಷೆ ಹಾಗೂ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿದೇಶ ಪ್ರವಾಸದ ವಿವರಗಳು ಮತ್ತು ಅದಕ್ಕೆ ಮಾಡಿರುವ ಖರ್ಚಿನ ವಿವರ ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗವು (ಸಿಐಸಿ) ಸೂಚನೆ ನೀಡಿರುವುದು ಕಾಂಗ್ರೆಸ್ಸಿಗರಲ್ಲಿ ತಳಮಳ ಮೂಡಿಸಿದೆ.
ಅರ್ಜಿದಾರ ಹಿಸ್ಸಾರ್ ಮೂಲದ ರಮೇಶ್ ವರ್ಮಾ ಎಂಬವರು, ಮಾಹಿತಿ ಹಕ್ಕು ಕಾಯ್ದೆಯಡಿ ಸೋನಿಯಾ ಗಾಂಧಿ ವಿದೇಶಗಳಿಗೆ ಭೇಟಿ ನೀಡಿರುವ ಉದ್ದೇಶ ಹಾಗೂ ವಿವರಗಳು ಹಾಗೂ ವೆಚ್ಚದ ಮಾಹಿತಿ, ವಿದೇಶಿ ಪ್ರವಾಸದಿಂದ ದೇಶಕ್ಕೆ ಆದ ಲಾಭಗಳ ಕುರಿತಂತೆ ಪ್ರಧಾನ ಮಂತ್ರಿ ಕಚೇರಿಯಿಂದ ಮಾಹಿತಿ ಕೋರಿದ್ದರು.
ಮಾಹಿತಿ ಹಕ್ಕು ಕಾಯ್ದೆಯಡಿ ಬಂದ ಅರ್ಜಿಯ ಬಗ್ಗೆ ಸಂಸದೀಯ ವ್ಯವಹಾರಗಳ ಸಮಿತಿ ವಿವರಣೆ ನೀಡಿ, ಕಳೆದ 10 ವರ್ಷಗಳಿಂದ ಕೇಂದ್ರ ಸರಕಾರ ಸೋನಿಯಾ ಗಾಂಧಿಯವರ ಪ್ರವಾಸ ವೆಚ್ಚವನ್ನು ಭರಿಸುತ್ತಿಲ್ಲ ಎಂದು ಹೇಳಿಕೆ ನೀಡಿ ಕೈ ತೊಳೆದುಕೊಂಡಿದೆ.
ಆದರೆ, ರಾಷ್ಟ್ರೀಯ ಸಲಹಾ ಸಮಿತಿಯ ಮುಖ್ಯಸ್ಥರಾಗಿ ಸೋನಿಯಾ ಅವರ ವಿದೇಶಿ ಪ್ರವಾಸಗಳ ವಿವರಗಳನ್ನು, ಅರ್ಜಿದಾರರಿಗೆ ನೀಡಲಾಗಿದೆಯೇ ಎನ್ನುವ ಬಗ್ಗೆ ಸಂಪುಟ ಕಾರ್ಯದರ್ಶಿಗೆ ಮಾಹಿತಿಯಿಲ್ಲ. ಅರ್ಜಿದಾರರಿಗೆ ಸಂಪೂರ್ಣ ವಿವರಗಳನ್ನು ನೀಡುವಂತೆ ಮುಖ್ಯ ವಾರ್ತಾ ಆಯುಕ್ತ ಸತ್ಯಾನಂದ್ ಮಿಶ್ರಾ ನಿರ್ದೇಶನ ನೀಡಿದ್ದಾರೆ.
ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಗಳು ಫೆಬ್ರವರಿ 16ರಂದು ಆರ್‌ಟಿಐ ಅರ್ಜಿಯನ್ನು ಸ್ವೀಕರಿಸಿದ್ದು, ಮಾರ್ಚ್ 16, 2010 ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ವರ್ಗಾಯಿಸಿದ್ದಾರೆ. ಬಳಿಕ ಅದನ್ನು ಮಾರ್ಚ್ 26ರಂದು ಸಂಸದೀಯ ವ್ಯವಹಾರಗಳ ಸಚಿವಾಲಯಕ್ಕೆ ರವಾನಿಸಲಾಗಿದೆ.
ಈ ನಿಟ್ಟಿನಲ್ಲಿ, ಪ್ರಧಾನ ಮಂತ್ರಿಗಳ ಕಚೇರಿಯು ಮಾಹಿತಿ ಹಕ್ಕು ಕಾಯ್ದೆ ಅರ್ಜಿಯನ್ನು ಬೇಜವಾಬ್ದಾರಿಯಿಂದ ನಿಭಾಯಿಸಿ, ಇತರ ಇಲಾಖೆಗಳಿಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ. ಮುಂಬರುವ ದಿನಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಬರುವ ಅರ್ಜಿಗಳನ್ನು ಆಯಾ ಸಚಿವಾಲಯಗಳಿಗೆ ಮಾತ್ರ ಕಳುಹಿಸಬೇಕು ಎಂದು ಮಿಶ್ರಾ ಪ್ರಧಾನಿ ಕಚೇರಿಗೆ ಸೂಚನೆ ನೀಡಿದ್ದಾರೆ.
ಅರ್ಜಿದಾರರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಯನ್ನು ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿಗಳು ಲಘುವಾಗಿ ಪರಿಗಣಿಸಿರುವುದಂತೂ ಸತ್ಯ. ಅರ್ಜಿಯನ್ನು ಪ್ರಧಾನಮಂತ್ರಿ ಕಚೇರಿಯ ಸಿಪಿಐಒ ಇಲಾಖೆಗೆ ಕಳುಹಿಸಲಾಗಿತ್ತು. ಸಿಪಿಐಒ ಕಚೇರಿಯ ಅಧಿಕಾರಿಗಳು ಅರ್ಜಿ ಯಾವ ಇಲಾಖೆಗೆ ಸಂಬಂಧಿಸಿದೆ ಎನ್ನುವ ಬಗ್ಗೆ ಖಚಿತಪಡಿಸಿಕೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಒಂದು ಸಚಿವಾಲಯದಿಂದ ಮತ್ತೊಂದು ಸಚಿವಾಲಯಕ್ಕೆ ವರ್ಗಾಯಿಸುತ್ತಿರುವ ಹಿನ್ನೆಲೆಯಲ್ಲಿ, ಅನಗತ್ಯವಾಗಿ ವಿಳಂಬ ನೀತಿ ಅನುಸರಿಸಿದಂತಾಗುತ್ತದೆ ಎಂದು ಕೇಂದ್ರ ವಾರ್ತಾ ಆಯುಕ್ತ ಸತ್ಯಾನಂದ್ ಮಿಶ್ರಾ ತಿಳಿಸಿದ್ದಾರೆ.