ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿಷ ನೀಡಿ ಸ್ವಾಮೀಜಿ ಹತ್ಯೆ: ಬಿಜೆಪಿ ಕಾರಣ ಎಂದ ಕಾಂಗ್ರೆಸ್ (Swami Nigamananda Death | Swami Nijananda | Save Ganga | Poison)
"ಗಂಗಾ ನದಿ ರಕ್ಷಿಸಿ" ಹೋರಾಟಗಾರ, ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದ ಹರಿದ್ವಾರದ ಮಾತೃ ಸದನ ಆಶ್ರಮದ ಸ್ವಾಮೀ ನಿಗಮಾನಂದ ಅವರ ಉಪವಾಸ ನಡೆಸುತ್ತಿದ್ದಾಗ ಯಾವುದೇ ರಾಷ್ಟ್ರೀಯ ವಾಹಿನಿಗಳ ಕಣ್ಣಿಗೆ ಕಾಣದೆ, ಇದೀಗ 115 ದಿನಗಳ ಉಪವಾಸ ನಡೆಸಿ ಸಾವನ್ನಪ್ಪಿದ ಬಳಿಕ ಸುದ್ದಿಯಾಗುತ್ತಿದ್ದು, ಅವರಿಗೆ ಗಣಿ ಧಣಿಗಳು ವಿಷವುಣಿಸಿ ಕೊಂದಿದ್ದಾರೆ ಎಂಬ ಆರೋಪ ಒಂದೆಡೆಯಾದರೆ, ಸ್ವಾಮಿ ಸಾವಿಗೆ ಬಿಜೆಪಿ ಸರಕಾರವೇ ಕಾರಣ ಎಂಬ ರಾಜಕೀಯ ಆರೋಪವೂ ಕೇಳಿಬರತೊಡಗಿದೆ.

ಉತ್ತರಾಖಂಡದಲ್ಲಿ ಬಿಜೆಪಿ ಸರಕಾರವಿದೆ. ಈ ಸರಕಾರದ ಮುಖ್ಯಮಂತ್ರಿ ರಮೇಶ್ ಪೋಖ್ರಿಯಲ್ ಅವರು ಗಂಗಾ ನದಿ ತಟದ ಅಕ್ರಮ ಗಣಿಗಾರಿಕೆ ಬಗ್ಗೆ ಗಮನ ಹರಿಸದೆ, ಕೇವಲ ಹರಿದ್ವಾರ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಾಬಾ ರಾಮದೇವ್ ಅವರನ್ನು ಬೆಂಬಲಿಸಲು ಮನ ಮಾಡಿದರು. ಸ್ವಾಮಿಯನ್ನು ರಕ್ಷಿಸುವ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಕಾಂಗ್ರೆಸ್ ನಾಯಕ, ಕೇಂದ್ರ ಸಚಿವ ಜೈರಾಮ್ ರಮೇಶ್ ಆರೋಪ ಮಾಡತೊಡಗಿದ್ದಾರೆ.

ಸ್ವಾಮೀಜಿಗೆ ವಿಷ ನೀಡಿದ ನರ್ಸ್
ಸ್ವಾಮೀ ನಿಗಮಾನಂದ ಅವರಿಗೆ ವಿಷವುಣಿಸಿ ಹತ್ಯೆ ಮಾಡಲಾಗಿದೆ ಎಂಬ ಆರೋಪಗಳು ಕೂಡ ಕೇಳಿ ಬಂದಿದ್ದು, ಗಣಿ ಧಣಿಗಳೊಂದಿಗೆ ಸೇರಿಕೊಂಡ ಆಸ್ಪತ್ರೆಯ ಸಿಬ್ಬಂದಿಯೇ ಈ ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿಯೂ ಹೊರಬರುತ್ತಿದೆ.

ಗಣಿ ಮಾಫಿಯಾ ಜತೆ ಕೈಜೋಡಿಸಿದ ಆಸ್ಪತ್ರೆಯ ಸಿಬ್ಬಂದಿಯು, ಉಪವಾಸದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸ್ವಾಮೀಜಿಗೆ ವಿಷವುಣಿಸಿದ ಬಳಿಕ 36ರ ಹರೆಯದ ಸ್ವಾಮಿ ನಿಗಮಾನಂದರಿಗೆ ಹೃದಯಾಘಾತವಾಯಿತು ಎಂದು ಅವರ ಆಪ್ತ ಬೆಂಬಲಿಗರೂ, ಹರಿದ್ವಾರ ನಾಗರಿಕ ಮಂಡಳಿಯ ಅಧ್ಯಕ್ಷರೂ ಆಗಿರುವ ಡಾ.ವಿಜಯ್ ವರ್ಮಾ ಆರೋಪಿಸಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ಹರಿದ್ವಾರ ನ್ಯಾಯಾಧೀಶ ಆರ್.ಮೀನಾಕ್ಷಿ ಸುದರಂ ಅವರು ವೈದ್ಯಕೀಯ ಪರೀಕ್ಷೆಗೆ ಆದೇಶಿಸಿದ್ದಾರೆ.

ಸ್ವಾಮೀಜಿ ಫೆ.19ರಿಂದ 115 ದಿನ ಉಪವಾಸ ಸತ್ಯಾಗ್ರಹ ಮಾಡಿದ್ದರು. ಮೇ 15ರಂದು ಮಾತೃ ಸದನದ ಬ್ರಹ್ಮಚಾರಿ ದಯಾನಂದ ಅವರು ಹರಿದ್ವಾರ ಪೊಲೀಸರಿಗೆ ದೂರು ನೀಡಿ, ಕಲ್ಲು ಗಣಿಗಾರಿಕೆ ಒಕ್ಕೂಟ ಸದಸ್ಯ ಹಾಗೂ ಒಬ್ಬ ವೈದ್ಯ ಸೇರಿಕೊಂಡು ಸ್ವಾಮಿಗೆ ವಿಷ ನೀಡಿದ್ದಾರೆ ಎಂದು ಆರೋಪಿಸಿದ್ದರು. ಗಣಿ ಲಾಬಿಯ ಒತ್ತಡಕ್ಕೆ ಪೊಲೀಸರು ಮಣಿಯುತ್ತಿದ್ದಾರೆ, ಎಫ್ಐಆರ್‌ನಲ್ಲಿ ಹೆಸರಿರುವ ಆರೋಪಿಗಳನ್ನು ಬಂಧಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಮಾತೃ ಸದನದ ಭಕ್ತರು ಆರೋಪಿಸಿದ್ದಾರೆ.

ಇದೇ ವೇಳೆ, ಸ್ವಾಮಿ ನಿಗಮಾನಂದರಿಗೆ ವಿಷಯುಕ್ತ ಇಂಜೆಕ್ಷನ್ ಚುಚ್ಚಿದ್ದ ನರ್ಸ್ ಆಸ್ಪತ್ರೆಯಿಂದ ಕಾಣೆಯಾಗಿದ್ದಾರೆ ಎಂದು ಸ್ವಾಮೀಜಿಯ ಗುರು ಹಾಗೂ ಮಾತೃಸದನದ ಸಂಸ್ಥಾಪಕರಾದ ಸ್ವಾಮಿ ನಿಜಾನಂದ ಅವರು ಆರೋಪಿಸಿದ್ದಾರೆ.

ಏಪ್ರಿಲ್ 30ರಂದು ನರ್ಸ್ ಒಬ್ಬಾಕೆ ಸ್ವಾಮೀಜಿಗೆ ವಿಷದ ಚುಚ್ಚುಮದ್ದು ನೀಡಿದ್ದಳು ಎಂದು ಮೇ 11ರಂದು ಸ್ವಾಮಿ ನಿಜಾನಂದ ಅವರು ಹರಿದ್ವಾರದ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮೇ 2ರಂದು ಸ್ವಾಮಿ ನಿಗಮಾನಂದರ ಆರೋಗ್ಯ ಹದಗೆಡಲು ಇದೇ ಕಾರಣ ಎಂದಿರುವ ಸ್ವಾಮಿ ನಿಜಾನಂದ, ಹಿಮಾಲಯ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಕೆ.ಭಟ್ನಾಗರ್ ಮತ್ತು ಹಿಮಾಲಯನ್ ಸ್ಟೋನ್ ಕ್ರಶರ್ ಸಂಸ್ಥೆಯ ಮಾಲೀಕ ಜ್ಞಾನೇಶ್ ಕುಮಾರ್ ಅವರೇ ಇವೆಲ್ಲದಕ್ಕೂ ಕಾರಣ ಎಂದೂ ಅವರು ಆರೋಪಿಸಿದ್ದಾರೆ. ನರ್ಸ್ 'ಆರ್ಗ್ಯಾನೋಫಾಸ್ಫೇಟ್' ಎಂಬ ರಾಸಾಯನಿಕವನ್ನು ಸ್ವಾಮೀಜಿಗೆ ನೀಡಿದ್ದಳು ಎಂದು ಅವರು ಹೇಳಿದ್ದಾರೆ.

ಉತ್ತರಾಖಂಡ ಸರಕಾರವು ಸ್ವಾಮೀಜಿ ಸಾವಿನ ಬಗ್ಗೆ ಈಗಾಗಲೇ ಸಿಬಿ-ಸಿಐಡಿ ತನಿಖೆಗೆ ಆದೇಶಿಸಿದೆ.

ಗಣಿಗಾರಿಕೆ ನಿಷೇಧ, ಗಣಿಧಣಿಗಳಿಂದ ತಡೆ
ಇದೇ ವೇಳೆ, ಸ್ವಾಮೀಜಿ ಸಾವನ್ನು ಇದೀಗ ರಾಜಕೀಯ ಕಾರಣಗಳಿಗಾಗಿ ಬಳಸಿಕೊಳ್ಳಲಾಗುತ್ತಿದ್ದು, ಬಾಬಾ ರಾಮದೇವ್ ಅವರು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಿದ ಮಾದರಿಯಲ್ಲೇ, ಹೋರಾಟದ ಉದ್ದೇಶ ಮೂಲೆಗುಂಪಾಗಿ, ವಿಷಯಾಂತರ ಆಗುತ್ತಿರುವುದು ನಿಚ್ಚಳವಾಗಿದೆ.

ಬಿಜೆಪಿ ಸರಕಾರ ಏನೂ ಮಾಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ, ಗಂಗಾ ನದಿಯ ಸುತ್ತಮುತ್ತ ಪರಿಸರ ಸೂಕ್ಷ್ಮ ಪ್ರದೇಶವಾಗಿರುವುದರಿಂದ 2010ರ ಡಿಸೆಂಬರ್ 10ರಂದು ಉತ್ತರಾಖಂಡ ಸರಕಾರವು ಸಂಪೂರ್ಣವಾಗಿ ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆಯನ್ನು ನಿಷೇಧಿಸಿತ್ತು. ಆದರೆ, ಸರಕಾರದ ಈ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ಗಣಿ ಧಣಿಗಳು, ಕೋರ್ಟಿನಿಂದ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದರು.

ಆ ಬಳಿಕ ಮೇ 27ರಂದು, ಮಾತೃ ಸದನವು ಉತ್ತರಾಖಂಡ ಹೈಕೋರ್ಟಿನಲ್ಲಿ ವಿಶೇಷ ರಜಾ ಕಾಲದ ಅರ್ಜಿಯೊಂದನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ, ಈ ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು.
ಇವನ್ನೂ ಓದಿ