ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣ: ಪಿಎಸಿ ವರದಿ ಜೋಷಿಗೆ ಮರಳಿಸಿದ ಸ್ಪೀಕರ್ (2G Spectrum Scam | Murli Manohar joshi | PAC | Speaker | Meira Kumar)
2ಜಿ ಹಗರಣ: ಪಿಎಸಿ ವರದಿ ಜೋಷಿಗೆ ಮರಳಿಸಿದ ಸ್ಪೀಕರ್
ನವದೆಹಲಿ, ಗುರುವಾರ, 16 ಜೂನ್ 2011( 08:55 IST )
PTI
2ಜಿ ಹಗರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷ, ಬಿಜೆಪಿ ಮುಖಂಡ ಮುರಳಿ ಮನೋಹರ ಜೋಷಿ ಸಿದ್ಧಪಡಿಸಿದ್ದ ತನಿಖಾ ವರದಿಯನ್ನು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ನಿರೀಕ್ಷಿತವಾಗಿಯೇ ಮರಳಿಸಿದ್ದಾರೆ.
ಸಮಿತಿಯ ತಮ್ಮ ಹಿಂದಿನ ಅಧಿಕಾರಾವಧಿ ಕೊನೆಗೊಂಡ ಏಪ್ರಿಲ್ 30ರಂದು ಈ ವರದಿಯನ್ನು ಸ್ಪೀಕರ್‌ಗೆ ಸಲ್ಲಿಸಲಾಗಿತ್ತು. ಈ ವರದಿಯಲ್ಲಿ, 2007ರಲ್ಲಿ 2ಜಿ ತರಂಗಗುಚ್ಛ ಹಂಚಿಕೆಯಲ್ಲಿ ಭಾರೀ ಪ್ರಮಾಣದ ಅವ್ಯವಹಾರವಾಗಿರುವುದರಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತವರ ಕಚೇರಿ, ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರ ಪಾತ್ರಗಳ ಬಗ್ಗೆ ತೀಕ್ಷ್ಣ ಟೀಕೆಗಳಿದ್ದವು. ಅಂತೆಯೇ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಅವರ ಮೇಲೂ ನೇರ ಆರೋಪಗಳಿದ್ದವು.
ಸಮಿತಿಯ ಹಿಂದಿನ ಅಧಿಕಾರಾವಧಿಯ ಅಂತ್ಯದಲ್ಲಿ (ಏಪ್ರಿಲ್ 28) ನಡೆದಿದ್ದ ಸಭೆಯಲ್ಲಿ, ಕಾಂಗ್ರೆಸ್, ಡಿಎಂಕೆ ಮತ್ತು ಸಮಾಜವಾದಿ ಪಕ್ಷದ ಸಂಸದರು ವರದಿಗೆ ವಿರೋಧ ವ್ಯಕ್ತಪಡಿಸಿ, ತಮ್ಮೊಳಗೇ ಸಭೆ ನಡೆಸಿ, ವರದಿಯನ್ನು ತಿರಸ್ಕರಿಸಿದ್ದೇವೆ ಎಂದು ಘೋಷಿಸಿದ್ದರು. ಆದರೆ, ವರದಿ ತಿರಸ್ಕರಿಸಲು ನಿಯಮಾವಳಿ ಪ್ರಕಾರ ಯಾವುದೇ ಅವಕಾಶವಿಲ್ಲ ಎಂದು ಜೋಷಿ ಪ್ರತಿಪಾದಿಸಿ, ವರದಿಯನ್ನು ನಿಯಮ ಪ್ರಕಾರ ಸ್ಪೀಕರ್‌ಗೆ ಕಳುಹಿಸಿಕೊಟ್ಟಿದ್ದರಲ್ಲದೆ, ಸ್ಪೀಕರ್ ಅವರ ವರದಿಯನ್ನು ಸಂಸತ್ತಿನ ಮುಂದಿಡುತ್ತಾರೆ ಎಂಬ ವಿಶ್ವಾಸದಲ್ಲಿರುವುದಾಗಿ ಘೋಷಿಸಿದ್ದರು. ಇದೀಗ ಮಂಗಳವಾರ ಮೀರಾ ಕುಮಾರ್ ಅವರು ಈ ವರದಿಯನ್ನು ತಿರಸ್ಕರಿಸಿ ಮರಳಿಸಿರುವುದಾಗಿ ಮೂಲಗಳು ತಿಳಿಸಿವೆ.
ಆದರೆ ಸಂಸದೀಯ ನಡಾವಳಿ ಪ್ರಕಾರ, ಈ ವರದಿ ತಯಾರಿಸಿದ ಸಮಿತಿಯ ಅಂಗೀಕಾರ ದೊರೆತ ಬಳಿಕವಷ್ಟೇ ಈ ವರದಿಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಬಹುದಾಗಿದೆ.
ಈ ನಡುವೆ, ಕಾಂಗ್ರೆಸ್ ಸದಸ್ಯ, ಸಂಸದ ಕೆ.ಎಸ್.ರಾವ್ ಅವರು ಸ್ಪೀಕರ್‌ರನ್ನು ಭೇಟಿಯಾಗಿ, ಏ.28ರ ಸಭೆಯಲ್ಲೇನು ನಡೆಯಿತು ಎಂದೆಲ್ಲಾ ವಿವರಿಸಿದ್ದರು. ಏ.30ರಂದು ಅಧಿಕಾರಾವಧಿ ಕೊನೆಗೊಂಡ ಬಳಿಕ ಜೋಷಿ ನೇತೃತ್ವದ ಸಮಿತಿಗೆ ವಿಸ್ತರಣೆಯವನ್ನೂ ನೀಡಲಾಗಿತ್ತು.
2ಜಿ ಹಗರಣದಲ್ಲಿ ಪ್ರಧಾನಿ ಮತ್ತು ಗೃಹಸಚಿವರ ಹೆಸರು ಬಂದಿರುವುದರಿಂದಾಗಿಯೇ ಕಾಂಗ್ರೆಸ್ ಸದಸ್ಯರು ಅಕ್ರಮ ಮುಚ್ಚಿಡಲು ಈ ವರದಿ ಮಂಡನೆಗೆ ತಡೆಯೊಡ್ಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
2ಜಿ ಹಗರಣಕ್ಕೆ ಸಂಬಂಧಿಸಿದಂತೆ ಪಿಎಸಿ ತನಿಖೆಗೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ ಎಂದು ಭಾನುವಾರ ಜೋಷಿ ಆರೋಪಿಸಿದ್ದರು. 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಗೆ ಮತ್ತು ಅಂದಿನ ವಿತ್ತ ಸಚಿವರಿಗೆ ಎಲ್ಲ ಗೊತ್ತಿದ್ದೂ ಸುಮ್ಮನಿದ್ದರು. ಹೀಗಾಗಿಯೇ ಕಾಂಗ್ರೆಸ್ ಈ ವರದಿಯನ್ನು ತಿರಸ್ಕರಿಸಿದೆ ಎಂದು ಜೋಷಿ ಹೇಳಿದ್ದಾರೆ.