ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್‌ಗೆ ಪ್ರಧಾನಿಯಾಗೋ ಎಲ್ಲ ಗುಣಲಕ್ಷಣಗಳಿವೆ: ದಿಗ್ವಿಜಯ್
(Rahul Gandhi | Qualities | Becoming good PM | Digvijay)
ರಾಹುಲ್‌ಗೆ ಪ್ರಧಾನಿಯಾಗೋ ಎಲ್ಲ ಗುಣಲಕ್ಷಣಗಳಿವೆ: ದಿಗ್ವಿಜಯ್
ನವದೆಹಲಿ, ಶುಕ್ರವಾರ, 17 ಜೂನ್ 2011( 17:18 IST )
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು "ಅತ್ಯುತ್ತಮ" ಪ್ರಧಾನಿಯಾಗುವ ಎಲ್ಲ "ಗುಣಗಳು ಹಾಗೂ ಸಾಮರ್ಥ್ಯಗಳನ್ನು" ಹೊಂದಿದ್ದಾರೆ ಎಂದು ಪಕ್ಷದ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ, ಹಿರಿಯ ಕಾಂಗ್ರೆಸಿಗ ದಿಗ್ವಿಜಯ್ ಸಿಂಗ್ ಬಣ್ಣಿಸಿದ್ದಾರೆ.
ರಾಹುಲ್ ಗಾಂಧಿ ಜೂನ್ 19ಕ್ಕೆ 41ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಅವರು ಪ್ರಧಾನಿಯಾಗಬಯಸಿದರೆ ಅದು ಸಂದರ್ಭ ಮತ್ತು ಸನ್ನಿವೇಶದ ಮೇಲೆ ನಿರ್ಧರಿತವಾಗಿರುತ್ತದೆ ಎಂದು ಕಾಂಗ್ರೆಸ್ 'ಯುವರಾಜ'ನ ಜತೆಗೆ ಕೆಲಸ ಮಾಡುತ್ತಾ, ಅವರಿಗೆ ಸಲಹೆ ಸೂಚನೆಗಳನ್ನು ನೀಡುತ್ತಲೇ ಇರುವ ದಿಗ್ವಿಜಯ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ರಾಹುಲ್ ಅವರೀಗ ಕೊಂಚ ಪ್ರಬುದ್ಧರಾಗಿದ್ದಾರೆ ಎಂದು ಬಣ್ಣಿಸಿದ ಸಿಂಗ್, ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳ ಬಗ್ಗೆ ಅವರಿಗೆ ಅರಿವಿದೆ. ಗಾಂಧಿ ಕುಟುಂಬದ ಸದಸ್ಯರಾಗಿರುವುದಷ್ಟೇ ಅಲ್ಲ, ಜನರೊಂದಿಗೆ ಉತ್ತಮವಾಗಿ ಬೆರೆಯುವ ಗುಣಗಳೂ ಅವರಲ್ಲಿವೆ ಎಂದು ದಿಗ್ವಿಜಯ್ ಹೊಗಳಿದ್ದಾರೆ.
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹಾಗೂ ಬಿಜೆಪಿ ಮುಖಂಡರು ರಾಹುಲ್ ಗಾಂಧಿಯ ಪ್ರತಿಸ್ಪರ್ಧಿಗಳು ಎಂಬ ಮಾತನ್ನು ತಿರಸ್ಕರಿಸಿದ ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದ ಉಸ್ತುವಾರಿಯೂ ಆಗಿರುವ ದಿಗ್ವಿಜಯ್ ಸಿಂಗ್, ಅವರು ತಮ್ಮೊಂದಿಗೇ ಸ್ಪರ್ಧೆ ನಡೆಸುತ್ತಿದ್ದಾರೆಯೇ ಹೊರತು, ಬೇರೆಯವರೊಂದಿಗೆ ಅಲ್ಲ ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ವಾಸ್ತವತೆಗಿಂತಲೂ ನಾಟಕೀಯತೆಯನ್ನೇ ಹೆಚ್ಚು ಪ್ರದರ್ಶಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳ ಆಪಾದನೆಯನ್ನು ನಿರಾಕರಿಸಿದ ದಿಗ್ವಿಜಯ್, 'ರಾಹುಲ್ ಧೈರ್ಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಆತ್ಮ ವಿಶ್ವಾಸ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ' ಎಂದು ಹೇಳಿದ್ದಾರೆ.