ಸಿಡಬ್ಲ್ಯುಜಿ, 2ಜಿ ಹಗರಣಗಳ ಬಳಿಕ ಇದೀಗ ಕೆಜಿ ಹಗರಣವೇ? ಹೀಗೊಂದು ಶಂಕೆ ಎದ್ದಿದ್ದು ಸಿಎಜಿಯ ವರದಿ ಹೊರಬಿದ್ದಿರುವ ಹಿನ್ನೆಲೆಯಲ್ಲಿ. ಮುಕೇಶ್ ಅಂಬಾನಿ ಅವರ ರಿಲಯನ್ಸ್ ಮತ್ತು ತೈಲ ಸಚಿವಾಲಯ ಸೇರಿಕೊಂಡು ಕೆಜಿ ಡಿ-6 ಜಲಾನಯನ ಪ್ರದೇಶದ ಅನಿಲ ಯೋಜನೆಗೆ ಸಂಬಂಧಿಸಿದ್ದು ಈ ಸಂಗತಿ. ತೈಲ ಸಚಿವಾಲಯವು ರಿಲಯನ್ಸ್‌ಗೆ ಕ್ಷೇತ್ರೀಯ ವೆಚ್ಚ ಹೆಚ್ಚಿಸಲು ನಿಯಮಾವಳಿ ಉಲ್ಲಂಘಿಸಿ ಅನುವು ಮಾಡಿಕೊಟ್ಟಿದೆ ಎಂಬುದು ವಿವಾದದ ಕೇಂದ್ರ ಬಿಂದು.
ಕೃಷ್ಣ ಗೋದಾವರಿ (ಕೆಜಿ) ಜಲಾನಯನ ಪ್ರದೇಶದಲ್ಲಿ ತೈಲ ಶೋಧನಾ ಕಾರ್ಯಕ್ಕಾಗಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಸಂಸ್ಥೆಯು ನಿಯಮಾವಳಿ ಉಲ್ಲಂಘಿಸಿದೆ ಎಂಬ ಆರೋಪಗಳ ಬಗ್ಗೆ ಸಿಬಿಐ ತನ್ನ ತನಿಖೆಯನ್ನು ಮಂಗಳವಾರ ತೀವ್ರಗೊಳಿಸಿತ್ತು. ಸರಕಾರವೇ ಆರ್ಐಎಲ್‌ಗೆ ನಿಯಮಾವಳಿ ಉಲ್ಲಂಘನೆಗೆ ಅವಕಾಶ ಮಾಡಿಕೊಟ್ಟಿದೆ ಎಂಬುದು ಸಿಎಜಿ ಕಂಡುಕೊಂಡ ವಿಷಯ.
ಅಂದಿನ ಪೆಟ್ರೋಲಿಯಂ ಖಾತೆ ಮುರಳಿ ದೇವ್ರಾ ನೇತೃತ್ವದ ಸಚಿವಾಲಯವು ಕೂಡ ಮುಕೇಶ್ ಅವರ ಆರ್ಐಎಲ್ ಮತ್ತು ಇತರ ಎರಡು ತೈಲ ಶೋಧನಾ ಕಂಪನಿಗಳಿಗೆ ನಾಲ್ಕು ಪಟ್ಟು ಹೆಚ್ಚು ದರ ನಿಗದಿ ಮಾಡುವ ಮೂಲಕ 'ಅನುಕೂಲ' ಮಾಡಿಕೊಟ್ಟಿದೆ ಎಂದು ಮಹಾ ಲೆಕ್ಕಪತ್ರಾಧಿಕಾರಿ ಕಚೇರಿ (ಸಿಎಜಿ) ವರದಿ ನೀಡಿದೆ. ತೈಲ ಸಚಿವಾಲಯ ಮತ್ತು ಅದರ ನಿಯಂತ್ರಣ ಘಟಕವಾಗಿರುವ ಹೈಡ್ರೋಕಾರ್ಬನ್ಸ್ ಮಹಾ ನಿರ್ದೇಶನಾಲಯ (ಡಿಜಿಎಚ್)ಗಳು, ಕನಿಷ್ಠ ಮೂರು ತೈಲ ಶೋಧನಾ ಸಂಸ್ಥೆಗಳಿಗೆ ನಿಯಮಾವಳಿ ಮೀರಿ ಅನುಕೂಲ ಮಾಡಿಕೊಟ್ಟಿತ್ತು ಎಂದು ವರದಿ ಹೇಳಿತ್ತು.
2004 ಹಾಗೂ 2006ರ ನಡುವೆ ರಿಲಯನ್ಸ್ ಕಂಪನಿಯು ಕೆಜಿ ಜಲಾನಯನ ಪ್ರದೇಶ ಅಭಿವೃದ್ಧಿ ವೆಚ್ಚವನ್ನು ಸುಮಾರು ಮೂರು ಪಟ್ಟು ಅಂದರೆ 11,280 ಕೋಟಿ ರೂ. (2.4 ಶತಕೋಟಿ ಡಾಲರ್)ನಿಂದ 41,360 ಕೋಟಿ ರೂ. (8.8 ಶತಕೋಟಿ ಡಾಲರ್)ಗೆ ಹೆಚ್ಚಿಸಲು ಅನುಕೂಲ ಮಾಡಿಕೊಡಲಾಗಿದೆ ಎಂಬುದು ಸಿಎಜಿ ಪ್ರಾಥಮಿಕ ವರದಿಯಲ್ಲಿರುವ ಆರೋಪ.
ವರದಿ ಸೋರಿಕೆಯಾಗಿದ್ದು ಹೇಗೆ?
ಈ ವಿಷಯವು ಸರಕಾರದ ಖರ್ಚು ವೆಚ್ಚಗಳ ಮೇಲೆ ನಿಗಾ ಇರಿಸುವ ಅಧಿಕಾರವುಳ್ಳ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ (ಪಿಎಸಿ) ಗಮನಕ್ಕೂ ಬಂದಿದೆ. ಈಗ, ತರಾತುರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಎಸಿ ಅಧ್ಯಕ್ಷ ಡಾ.ಮುರಳಿ ಮನೋಹರ ಜೋಷಿ, ಸಿಎಜಿ ವರದಿಯು ಸಂಸತ್ತಿನಲ್ಲಿ ಮಂಡನೆಯಾಗುವ ಮುನ್ನವೇ ಮಾಧ್ಯಮಗಳಿಗೆ ಸೋರಿದ್ದು ಹೇಗೆ ಎಂಬುದು ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ.
ಸದನದಲ್ಲಿ ಸಿಎಜಿ ವರದಿ ಮಂಡನೆಯಾಗದೆ ಅದನ್ನು ಹೊರಗೆ ಪ್ರಕಟಪಡಿಸುವಂತಿಲ್ಲ. ಈ ಬಗ್ಗೆ ತನಿಖೆಯಾಗಲಿ ಎಂದು ಡಾ.ಜೋಷಿ ಒತ್ತಾಯಿಸಿದ್ದಾರೆ.
ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಯುನಿಟ್‌ಗೆ 1.8 ಡಾಲರ್‌ಗೆ ಮಾರುತ್ತಿರುವಾಗ ರಿಲಯನ್ಸ್ ಇಂಡಸ್ಟ್ರೀಸ್‌ಗೆ 4.2 ಡಾಲರ್‌ನಲ್ಲಿ ಮಾರಲು ಅನುವು ಮಾಡಿದ್ದೇಕೆ ಎಂದು ಪ್ರಶ್ನಿಸಿರುವ ಜೋಷಿ, ಸಚಿವರ ಗುಂಪು ಯಾವ ಒತ್ತಡದಿಂದಾಗಿ ಈ ರೀತಿಯಾಗಿ ದರವನ್ನು ಹೆಚ್ಚಿಸಲು ಅವಕಾಶ ಮಾಡಿಕೊಟ್ಟಿತು, ಇದರಿಂದ ಸರಕಾರಕ್ಕೆ ಎಷ್ಟು ನಷ್ಟವಾಗಿದೆ ಎಂದು ಪ್ರಶ್ನಿಸಿದ್ದಾರೆ.
ಸಿಎಜಿಯೇನೂ ತನಿಖಾ ಸಂಸ್ಥೆಯಲ್ಲ ಎಂದ ದಿಗ್ವಿಜಯ್ ಹಗರಣದ ವಾಸನೆ ಬರುತ್ತಿದೆ ಎಂದಾದ ತಕ್ಷಣವೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಸಿಎಜಿ ವರದಿಯನ್ನು ಮೊದಲು ಪಿಎಸಿಯಲ್ಲಿ ಚರ್ಚಿಸಬೇಕಾಗುತ್ತದೆ. ಸಿಎಜಿಯೇನೂ ತನಿಖಾ ವರದಿ ಸಲ್ಲಿಸಿದ್ದಲ್ಲ ಎಂದು ಕಾಂಗ್ರೆಸ್ಸನ್ನು ಸಮರ್ಥಿಸಿಕೊಂಡಿದ್ದಾರೆ.
"ಸಿಎಜಿಯ ಪಾತ್ರದ ಬಗ್ಗೆ ಹಿರಿಯ ಸಂಸತ್ ಸದಸ್ಯರಿಗೆ ಅರ್ಥವಾಗದಿರುವುದು ನನಗೆ ಅಚ್ಚರಿ ತಂದಿದೆ. ಸಿಎಜಿ ಪಾತ್ರವೆಂದರೆ ಲೆಕ್ಕಪತ್ರ ಸರಿಯಾಗಿಡುವುದು ಅಷ್ಟೇ. ಅದು ಸಲ್ಲಿಸುವ ವರದಿಯು ಭ್ರಷ್ಟಾಚಾರದ ತನಿಖಾ ವರದಿಯೇನಲ್ಲ. ಅದು ಕೇವಲ ಲೆಕ್ಕಪತ್ರ ಕಾಯ್ದಿಡುವ ಏಜೆನ್ಸಿ. ಈ ವರದಿಯನ್ನು ಡಾ.ಜೋಷಿ ನೇತೃತ್ವದ ಪಿಎಸಿ ಚರ್ಚೆ ಮಾಡಬೇಕು. ಸಿಎಜಿ ವರದಿಯೇ ತನಿಖಾ ವರದಿ ಅಂತ ಮಾಧ್ಯಮಗಳೂ ಯೋಚಿಸುತ್ತಿವೆ" ಎಂದು ಪ್ರತಿಕ್ರಿಯಿಸಿದ್ದಾರೆ ದಿಗ್ವಿಜಯ್.
ಈ ಹಿಂದೆಯೇ, ಈ ವಿವಾದವು ಬೆಳಕಿಗೆ ಬಂದಿತ್ತು. ಅಂಬಾನಿ ಸಹೋದರರಾದ ಮುಕೇಶ್ ಮತ್ತು ಅನಿಲ್ ನಡುವೆ ವೈಮನಸ್ಯ ಜೋರಾಗಿದ್ದ ಅವಧಿಯಲ್ಲಿ, ಅನಿಲ ಉತ್ಪಾದನೆಯ ವೆಚ್ಚವು ತೀರಾ ಕಡಿಮೆ ಇದ್ದರೂ, ಮುಕೇಶ್ ಕಂಪನಿಗೆ ಅನಿಲಕ್ಕೆ ಭಾರೀ ಹೆಚ್ಚು ದರ ವಿಧಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಅನಿಲ್ ಅಂಬಾನಿ ಅಂದು ಆರೋಪಿಸಿದ್ದರು. ಈ ವಿವಾದ ಬೆಳಕಿಗೆ ಬಂದ ಬಳಿಕ ಮುರಳಿ ದೇವ್ರಾ ಅವರನ್ನು ತೈಲ ಸಚಿವಾಲಯದಿಂದ ಎತ್ತಂಗಡಿ ಮಾಡಲಾಗಿತ್ತು ಎಂಬುದು ಗಮನಿಸಬೇಕಾದ ವಿಷಯ.