ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಯೋಗಗುರು ಬಾಬಾ ರಾಮದೇವ್ ಅವರ ಮೇಲೆ ಪೊಲೀಸರು ನಡೆಸಿದ ದಾಳಿ, 1975ರ ತುರ್ತುಪರಿಸ್ಥಿತಿಯ ದಿನಗಳನ್ನು ನೆನಪಿಸುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಟೀಕಿಸಿದ್ದಾರೆ.
ಬಾಬಾ ರಾಮದೇವ್ ಮತ್ತು ಅವರ ಅನುಯಾಯಿಗಳ ಮೇಲೆ ಕೇಂದ್ರ ಸರಕಾರ ತೋರಿದ ಕ್ರೌರ್ಯ, ಜೂನ್ 25, 1975ರಂದು ದೇಶಾದ್ಯಂತ ಹೇರಿದ ತುರ್ತುಪರಿಸ್ಥಿತಿಯ ದಿನಗಳು ಮರುಕಳಿಸುವಂತೆ ಮಾಡಿವೆ ಎಂದು ಅಡ್ವಾಣಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶ್ಯಾಮಲಾ ರಸ್ತೆಯಲ್ಲಿರುವ ಮಧ್ಯಪ್ರದೇಶ ನಾಟ್ಯ ವಿದ್ಯಾಲಯ ಶಾಲೆಯ ಉದ್ಘಾಟನೆಗಾಗಿ ನಗರಕ್ಕೆ ಆಗಮಿಸಿದ್ದ ಅಡ್ವಾಣಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅತ್ಯಂತ ಭ್ರಷ್ಟ ಸರಕಾರವಾಗಿದೆ ಎಂದು ಕಿಡಿಕಾರಿದರು.
ಭ್ರಷ್ಟಾಚಾರ ಕುರಿತಂತೆ ಮಾತನಾಡಿದ ಅವರು 2ಜಿ ತರಂಗಾಂತರ ಹಗರಣ ಸೇರಿದಂತ ಹಲವು ಹಗರಣಗಳ ಬಗ್ಗೆ ಸಂಸತ್ತಿನಲ್ಲಿ ಬಿಜೆಪಿ ಪ್ರಬಲ ಹೋರಾಟ ನಡೆಸುತ್ತಿದೆ ಎಂದು ಅಡ್ವಾಣಿ ಹೇಳಿದ್ದಾರೆ.