ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ಪಟ್ಟ ತೊರೆದ ಬಳಿಕ ಲೋಕಪಾಲ ವ್ಯಾಪ್ತಿಗೆ: ಸಿಬಲ್ (Lokpal Bill | Kapil Sibal | Prime Minister | Anna Hazare)
PTI
ಪ್ರಧಾನ ಮಂತ್ರಿ ಕಚೇರಿಯನ್ನು ಲೋಕಪಾಲ ವ್ಯಾಪ್ತಿಗೆ ತರುವುದಕ್ಕೆ ವಿರೋಧವಿದೆ ಎಂದು ಸರಕಾರ ಹೇಳಿದೆಯಾದರೂ, ಪ್ರಧಾನಿ ಹುದ್ದೆ ತೊರೆದ ಬಳಿಕ ಅವರು ಲೋಕಪಾಲ ತನಿಖೆ ಎದುರಿಸಬಹುದಾಗಿದೆ ಎಂಬ ಅಂಶದ ಬಗ್ಗೆ ಮುಕ್ತ ಮನಸ್ಸು ಹೊಂದಿರುವುದಾಗಿ ತಿಳಿಸಿದೆ.

"ಸರಕಾರದ ಮಟ್ಟಿಗೆ ಹೇಳುವುದಾದರೆ, ಪ್ರಧಾನಿಯು ಲೋಕಪಾಲ ವ್ಯಾಪ್ತಿಗೆ ಬರಬಾರದು ಎಂಬುದು ನಿಲುವು. ಆದರೆ ಪ್ರಧಾನಿಯು ಹುದ್ದೆಯಿಂದ ಕೆಳಗಿಳಿದ ಬಳಿಕ, ಕಾನೂನುಕ್ರಮಗಳಿಂದ ಅವರು ತಪ್ಪಿಸಿಕೊಳ್ಳುವಂತಿಲ್ಲ ಎಂಬ ಭಾವನೆಯೂ ನಮ್ಮದು" ಎಂದು ಸಿಎನ್ಎನ್-ಐಬಿಎನ್ ಚಾನೆಲ್‌ನಲ್ಲಿ ಹಿರಿಯ ಪತ್ರಕರ್ತ ಕರಣ್ ಥಾಪರ್ ನಡೆಸಿಕೊಡುವ 'ಡೆವಿಲ್ಸ್ ಅಡ್ವೊಕೇಟ್' ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಅವರು ತಿಳಿಸಿದ್ದಾರೆ.

ಅದೇ ಹೊತ್ತಿಗೆ, ಈ ವಿಷಯದ ಬಗ್ಗೆ ಸರಕಾರ ನಿರ್ಧಾರ ಪ್ರಕಟಿಸುವುದು ಕರಡು ಮಸೂದೆಯು ಸಂಪುಟದ ಮುಂದೆ ಬಂದಾಗ ಮಾತ್ರ ಎಂದು ಕೂಡ ಸಿಬಲ್ ಹೇಳಿದರು.

ಲೋಕಪಾಲ ಸಮಿತಿ ರಚನೆಗೆ ರೂಪಿಸಲಾಗಿರುವ ಜಂಟಿ ಸಮಿತಿಯ ಸಭೆ ಜೂನ್ 20-21ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಕಪಿಲ್ ಸಿಬಲ್ ಹೇಳಿಕೆ ಆಸಕ್ತಿ ಹುಟ್ಟಿಸಿದೆ.

ಜಂಟಿ ಕರಡು ಸಮಿತಿಯಲ್ಲಿರುವ ನಾಗರಿಕ ಸಮಿತಿ ಸದಸ್ಯರು, ಪ್ರಧಾನಿಯನ್ನು ಲೋಕಪಾಲ ವ್ಯಾಪ್ತಿಗೆ ಸೇರಿಸುವುದಕ್ಕೆ ಸೂಕ್ತವಾದ ಮತ್ತು ಒಪ್ಪತಕ್ಕ ಕಾರಣಗಳನ್ನು ನೀಡಿದರೆ, ಸಮಿತಿಯಲ್ಲಿರುವ ಐವರು ಸಚಿವರು ಇದನ್ನು ಪರಿಗಣಿಸಲು ಸಿದ್ಧರಾಗಿದ್ದಾರೆ ಎಂದೂ ಸಿಬಲ್ ಹೇಳಿದರು.

ಪ್ರಧಾನಿ ಹುದ್ದೆಯನ್ನು ಲೋಕಪಾಲ ವ್ಯಾಪ್ತಿಗೆ ತರುವುದರಲ್ಲಿ ತನ್ನ ಮನಸ್ಸು ಮುಕ್ತವಾಗಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಈಗಾಗಲೇ ಘೋಷಿಸಿದ್ದಾರೆ ಎಂದ ಸಿಬಲ್, ಅದು ಒಬ್ಬ ವ್ಯಕ್ತಿ - ಮನಮೋಹನ್ ಸಿಂಗ್- ಅವರಿಗೆ ಸಂಬಂಧಿಸಿದ್ದಲ್ಲ, ಈ ಕಾಯ್ದೆಯು ಇಡೀ ಸಂಸ್ಥೆಗೆ ಸಂಬಂಧಿಸಿದ್ದು ಎಂದು ಹೇಳಿದರು.

ಪ್ರಧಾನಿಯನ್ನು ಲೋಕಪಾಲ ವ್ಯಾಪ್ತಿಗೆ ತರಬಾರದು ಎಂದು ವಾದಿಸಿದ ಸಿಬಲ್, "ಇಡೀ ಜಗತ್ತಿನಲ್ಲಿ ಎಲ್ಲಾದರೂ ಹುದ್ದೆಯಲ್ಲಿರುವ ಪ್ರಧಾನ ಮಂತ್ರಿಯನ್ನು ಶಿಕ್ಷಿಸಿದ ಉದಾಹರಣೆಗಳಿವೆಯೇ? ಇದ್ದರೆ ಒಂದಾದರೂ ಉದಾಹರಣೆ ಕೊಡಿ" ಎಂದು ಪ್ರತಿಸವಾಲು ಹಾಕಿದರು.

ಜನರು ಭ್ರಷ್ಟಾಚಾರದಿಂದ ರೋಸಿ ಹೋಗಿರುವುದರಿಂದ ಈ ಕುರಿತು ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿದರು. ಆದರೆ ಅವರಲ್ಲಿ ಹೆಚ್ಚಿನವರಿಗೆ ಲೋಕಪಾಲ ಎಂದರೇನೆಂಬುದೇ ತಿಳಿದಿಲ್ಲ ಎಂದ ಸಿಬಲ್, "ಹಜಾರೆ ಕಿಂದರಿ ಜೋಗಿ ಇದ್ದಂತೆ. ಅವರು ಪೀಪಿ ಊದುತ್ತಿದ್ದಾರೆ ಮತ್ತು ಸರಕಾರದಂತೆಯೇ ಜನರು ಕೂಡ ಭ್ರಷ್ಟಾಚಾರದಿಂದ ರೋಸಿ ಹೋಗಿದ್ದಾರೆ. ಆದರೆ, ಅವರು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ, ಅವರಿಗೆ ಲೋಕಪಾಲ ಮಸೂದೆ ಎಂದರೇನೆಂಬುದೇ ತಿಳಿದಿಲ್ಲ" ಎಂದರು.

ಮಾತುಕತೆಯಿಂದಲೇ ಎಲ್ಲ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ ಸಿಬಲ್, ಸ್ವತಂತ್ರವಾಗಿಯೇ ತನಿಖೆ ಕೈಗೊಂಡು ಶಿಕ್ಷೆ ವಿಧಿಸುವ ಅಧಿಕಾರಗಳನ್ನು ಸ್ವತಂತ್ರ ಲೋಕಪಾಲರಿಗೆ ನೀಡುವಲ್ಲಿ ಯಾವುದೇ ವಿವಾದವಿಲ್ಲ. ಜನ ಸೇವಕರನ್ನು ಶಿಕ್ಷಿಸಲು ಸರಕಾರದ ಅನುಮತಿಯೂ ಬೇಕಿಲ್ಲ ಎಂದರು.

ಲೋಕಾಪಾಲರು ಮೇಲ್ಮಟ್ಟದ ಭ್ರಷ್ಟಾಚಾರಗಳ ಕುರಿತು ತನಿಖೆ ಮಾಡಬೇಕು. ಇಲ್ಲವಾದಲ್ಲಿ 40 ಲಕ್ಷಕ್ಕೂ ಹೆಚ್ಚು ಕೇಂದ್ರ ಸರಕಾರಿ ನೌಕರರನ್ನು ಈ ವ್ಯಾಪ್ತಿಗೆ ತರಬೇಕಾದರೆ, ಸರಕಾರದಿಂದ ಹೊರತಾದ ಭಾರೀ ದೊಡ್ಡ ಮೂಲಸೌಕರ್ಯ ವ್ಯವಸ್ಥೆಯೇ ಬೇಕಾಗುತ್ತದೆ ಎಂದ ಅವರು, ಅದಕ್ಕೂ ಒಂದು ಮಿತಿ ಇರಬೇಕು. ಕೆಳ ಮಟ್ಟದ ಭ್ರಷ್ಟಾಚಾರವನ್ನು ನೋಡಿಕೊಳ್ಳಲು ಅದರದ್ದೇ ಆದ ವ್ಯವಸ್ಥೆಯಿದೆ. ಅದನ್ನು ಬಲಪಡಿಸೋಣ. ಆದರೆ, ಯೋಚನೆಗೆ ನಿಲುಕದಂಥದ್ದನ್ನು ನಾವು ಯೋಚಿಸಬಾರದು ಎಂದರು.

ಆದರೆ, ಸಿಬಿಐ ಮತ್ತು ಸಿವಿಸಿಗಳನ್ನು ಲೋಕಪಾಲ ವ್ಯಾಪ್ತಿಗೆ ತರುವುದಕ್ಕೆ ತಮ್ಮ ವಿರೋಧವಿದೆ ಎಂದೂ ಸಿಬಲ್ ಸ್ಪಷ್ಟಪಡಿಸಿದ್ದಾರೆ.
ಇವನ್ನೂ ಓದಿ