ಬ್ರಿಜ್ ಬಿಹಾರಿ ಎಂಬ 84ರ ವೃದ್ಧನಿಗಿದ್ದದ್ದು ಮಹಾರಾಜಗಂಜ್‌ನಲ್ಲಿರುವ ಜಗನ್ನಾಥ ದೇವಾಲಯದ ಮಹಾಂತ್ (ಪೂಜಾರಿ) ಆಗಬೇಕೆಂಬ ಕನಸು. ಇದಕ್ಕಾಗಿ ಜೀವನಪೂರ್ತಿ ಸಸ್ಯಾಹಾರವನ್ನೇ ಕಠಿಣ ವ್ರತವಾಗಿ ಸ್ವೀಕರಿಸಿದ್ದ ಆತ ಬ್ರಹ್ಮಚಾರಿಯಾಗಿಯೇ ಉಳಿದಿದ್ದ, ಪ್ರತಿ ದಿನ ಪೂಜೆ ಪುನಸ್ಕಾರಗಳನ್ನು ಮಾಡುತ್ತಲೇ ಇದ್ದ. ಆದರೆ ವೃದ್ಧಾಪ್ಯ ಬಂದರೂ ತಮ್ಮ ಈ ಆಸೆ ಈಡೇರದೇ ಇದ್ದಾಗ, ನಾಲ್ವರ ಕೊಲೆಯನ್ನೂ ನಡೆಸಿದ. ಇದು ನಡೆದದ್ದು 1987ರಲ್ಲಿ.
ಜೈಲಿನ ದಾಖಲೆಗಳ ಪ್ರಕಾರ, ಆತನಿಗೀಗ 108 ವರ್ಷ ವಯಸ್ಸು. ಬ್ರಿಜ್ ಬಿಹಾರಿಯನ್ನು ಶುಕ್ರವಾರ ಸಂಜೆ 7.15ಕ್ಕೆ ಗೋರಖ್‌ಪುರ ಜೈಲಿನಿಂದ ಬಿಡುಗಡೆ ಮಾಡಿದಾಗ ದೇಶದ ಅತಿ ಹಿರಿಯ ಕೈದಿಯೊಬ್ಬ ಬಿಡುಗಡೆಯಾದಂತಾಗಿದೆ.
ತೀವ್ರ ಅನಾರೋಗ್ಯ ಪೀಡಿತನಾಗಿದ್ದ ಬ್ರಿಜ್ ಬಿಹಾರಿಯ ನಾಡಿ ಮಿಡಿತ ಕ್ಷೀಣವಾಗುತ್ತಿದೆ ಎಂದು ವೈದ್ಯರು ಹೇಳಿದ ನಂತರ ಆತನನ್ನು ಕೆಲ ದಿನಗಳ ಹಿಂದೆ ಗೋರಖ್‌ಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬ್ರಿಜ್ ಬಿಹಾರಿಯನ್ನು ಬಿಡುಗಡೆ ಮಾಡುವಂತೆ ಕೋರಿ ಅಕ್ಟೋಬರ್ 2010ರಲ್ಲಿ ಮಹಾರಾಜಗಂಜ್‌ನ ಜಿಲ್ಲಾ ನ್ಯಾಯಾಧೀಶರ ಕಚೇರಿಯಿಂದ ರಾಜ್ಯಪಾಲರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲಾಗಿತ್ತು.
ಕೊಲೆ ಪ್ರಕರಣದಲ್ಲಿ ಆಪಾದಿತರಾಗಿರುವ ಬಿಹಾರಿ ಮತ್ತು ಇತರೆ 10 ಮಂದಿ ಆರೋಪಿಗಳಿಗೆ ಅಲಹಾಬಾದ್ ಹೈಕೋರ್ಟ್ ಮೇ 26ರಂದು ಜಾಮೀನು ಮಂಜೂರು ಮಾಡಿತ್ತು. ಆದರೆ ಬಿಹಾರಿ ಅವರ ಹತ್ತಿರದ ಸಂಬಂಧಿಗಳು, ಸೋದರರ ಮಕ್ಕಳು ಸಹಾ ಅದೇ ಅಪರಾಧಕ್ಕೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವುದರಿಂದ ಯಾರು ಜಾಮೀನು ನೀಡುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಆತನ ಸೋದರನ ಮಗ ಘನಶ್ಯಾಮ್ ಪಾಂಡೆಯ ಪುತ್ರ ಅವನೀಶ್ ಪಾಂಡೆ ಅವರು ಇಬ್ಬರು ಸ್ಥಳೀಯರ ಸಹಕಾರದಿಂದ ಬಾಂಡ್ ನೀಡುವ ಮೂಲಕ ವಯೋವೃದ್ಧರ ಬಿಡುಗಡೆಗೆ ಸಹಕರಿಸಿದರು.
2009ರಲ್ಲಿ ಇತರ 15 ಜನರೊಂದಿಗೆ ಶಿಕ್ಷೆ ಘೋಷಣೆಯಾದಂದಿನಿಂದಲೂ ಒಂದಿಲ್ಲೊಂದು ಅನಾರೋಗ್ಯದಿಂದಾಗಿ ಜೈಲು ಮತ್ತು ಆಸ್ಪತ್ರೆ ನಡುವೆ ಈತನ ಓಡಾಟ ನಿರಂತರವಾಗಿತ್ತು. ಇದರಿಂದಾಗಿ ಜೈಲಿನ ಅಧಿಕಾರಿಗಳು ವೃದ್ಧರಾಗಿರುವ ಬಿಹಾರಿಯನ್ನು ಮಾನವೀಯತೆ ಆಧಾರದ ಮೇಲೆ ಆಸ್ಪತ್ರೆಯಲ್ಲಿ ಶಾಶ್ವತವಾಗಿ ಇರಿಸಿದ್ದರು.
ಬಿಡುಗಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಹಾರಿ, ಭಗವಂತ್ ಪಾಂಡೆ ಅವರ ಪುತ್ರ, ಜಗನ್ನಾಥ ದೇವಾಲಯದ ಮಹಾಂತ್ ಆಗಿದ್ದ ರಾಮಾನುಜ ದಾಸ್ ಅವರು ಜೂನ್ 15, 1987ರಲ್ಲಿ ನನ್ನ ಗುರಿಯಾಗಿದ್ದರು ಎಂದು ನೆನಪಿಸಿಕೊಂಡಿದ್ದಾನೆ.
ಬಿಹಾರಿಯನ್ನು ದೇವಾಲಯದ ಮಹಾಂತ್ ಆಗಿ ನೇಮಿಸುವುದಕ್ಕೆ ಭಕ್ತಾದಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ರಾಮಾನುಜದಾಸ್ ಅವರು ಮಹಾಂತ್ ಆಗಿ ನೇಮಕಗೊಂಡಿದ್ದರು. ಇದರಿಂದ ಕೆರಳಿದ ಬಿಹಾರಿ ತಮ್ಮ 15 ಮಂದಿ ಬೆಂಬಲಿಗರೊಂದಿಗೆ ರಾಮಾನುಜದಾಸ್‌ರವನ್ನು ಕೊಲೆ ಮಾಡಿದ್ದು, ಆ ಸಂದರ್ಭ ನಡೆದ ಬಡಿದಾಟದಲ್ಲಿ ಇತರ ಮೂರು ಮಂದಿ ಕೂಡ ಸಾವನ್ನಪ್ಪಿದ್ದರು.
ಬಿಹಾರಿಯ ಅಪರಾಧ ಕ್ರೂರವಾದುದು ಎಂದು ಜೈಲಿನ ಸಹವರ್ತಿಗಳಿಗೆ ಗೊತ್ತಿದ್ದರೂ ಆತ ವಯಸ್ಸಿನ ಆಧಾರದ ಮೇಲೆ ಅನುಕಂಪ ಗಳಿಸಿಕೊಂಡಿದ್ದ. ಆತನನ್ನು ಇತರೆ ಖೈದಿಗಳು ಬಾಬಾ ಎಂದು ಕರೆಯುತ್ತಿದ್ದರು. ಜೂನ್ 14 ರಂದು ಆತನನ್ನು ಆಸ್ಪತ್ರೆಗೆ ಸೇರಿಸಿದ ನಂತರ ಇತರೆ ರೋಗಿಗಳು ಪ್ರತಿದಿನ ಸ್ನಾನ ಮಾಡಿಸುತ್ತಿದ್ದರು, ಚಪಾತಿ ಜಗಿಯಲು ಸಾಧ್ಯವಾಗದೇ ಇರುವುದರಿಂದ ಅನ್ನ ಮತ್ತು ಬೇಳೆಯ ಸಾರು ಕೊಡಿಸಲು ನೆರವಾಗಿದ್ದರು.
ಮಹಾಂತ ಹುದ್ದೆಗಾಗಿನ ತನ್ನ ದುರಾಸೆ ಮತ್ತು ಪ್ರತೀಕಾರದ ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪವಿದೆ ಎಂದು ಹೇಳಿರುವ ಬಿಹಾರಿ, ಸಾಯುವ ಮೊದಲು ತನ್ನ ಊರನ್ನು ನೋಡುವಾಸೆಯಿದೆ ಎಂದಿದ್ದಾನಲ್ಲದೆ, ಅದೇ ಜಗನ್ನಾಥ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವ ಇರಾದೆಯನ್ನೂ ವ್ಯಕ್ತಪಡಿಸಿದ್ದಾನೆ.