2ಜಿ ಹಗರಣ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ವರದಿಯನ್ನು ತಮಗೆ ಮರಳಿಸಿದ ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಅವರು ಇದಕ್ಕೆ ಯಾವುದೇ ಕಾರಣವನ್ನೂ ನೀಡಿಲ್ಲ ಎಂದು ಸಮಿತಿ ಅಧ್ಯಕ್ಷ ಮುರಳಿ ಮನೋಹರ ಜೋಷಿ ಶುಕ್ರವಾರ ತಿಳಿಸಿದ್ದಾರೆ. ಈ ವರದಿಯ ಹಣೆಬರಹವನ್ನು ನಿರ್ಧರಿಸಲು ಈಗ ತಮ್ಮ ಅಧ್ಯಕ್ಷತೆಯಲ್ಲಿ ಹೊಸದಾಗಿ ರಚನೆಗೊಂಡಿರುವ ಪಿಎಸಿ ಮುಂದೆ ಮಂಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ವರದಿ ಮರಳಿಸಿದ ನಂತರ ಸ್ಪೀಕರ್ ನೀಡಿದ ವಿವರಣೆಯ ಕುರಿತಾದ ವಿವರವನ್ನು ಬಹಿರಂಗಪಡಿಸಲು ನಿರಾಕರಿಸಿದ ಜೋಷಿ, ಈ ವಿಷಯವೆಲ್ಲವೂ ಮುಂಬರುವ ಪಿಎಸಿ ಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.
ವರದಿ ಮರಳಿಸಿರುವುದರಿಂದ ಈ ವಿಷಯ ಇಷ್ಟಕ್ಕೇ ಮುಕ್ತಾಯವಾಗಿಲ್ಲ ಎಂದು ಮೇ 1ರಂದು ಹೊಸದಾಗಿ ಅಸ್ತಿತ್ವಕ್ಕೆ ಬಂದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರೂ ಆಗಿರುವ ಜೋಷಿ ಸ್ಪಷ್ಟಪಡಿಸಿದ್ದಾರೆ.
ಲೋಕಸಭಾಧ್ಯಕ್ಷರು ಮರಳಿಸಿರುವ ಪಿಎಸಿ ವರದಿಯನ್ನು ಹೊಸ ಸಮಿತಿಯ ಮುಂದಿರಿಸಿ ಏನು ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಜೋಷಿ ಹೇಳಿದ್ದಾರೆ.
ಸಮಿತಿಯು ವರದಿಯನ್ನು ಮತಕ್ಕೆ ಹಾಕುತ್ತದೆಯೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ಜೋಷಿ ನಿರಾಕರಿಸಿದರು.
ಇದು 'ಪಿಎಸಿ ವರದಿ'ಯೇ ಹೊರತು ತಮ್ಮ ವರದಿಯಲ್ಲ ಎಂದು ಹೇಳಿರುವ ಜೋಷಿ, ವರದಿಯ ಕುರಿತು ಏನು ಮಾಡಬೇಕು ಎಂಬುದರ ಕುರಿತು ನಿರ್ಣಯ ಕೈಗೊಳ್ಳಲು ಸ್ಪೀಕರ್ ವಿಶೇಷ ಅಧಿಕಾರ ಹೊಂದಿದ್ದಾರೆ. ಅವರು ವರದಿಯನ್ನು ಮರಳಿಸಿದ್ದಾರಷ್ಟೇ ಎಂದು ಜೋಷಿ ತಿಳಿಸಿದ್ದಾರೆ.