ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲ ವ್ಯಾಪ್ತಿಗೆ ಪ್ರಧಾನಿ: ಸರ್ವಪಕ್ಷ ಸಭೆಗೆ ಕಾಂಗ್ರೆಸ್ ನಿರ್ಧಾರ (Lokpal Bill, PM, All Party Meet, Congress, Corruption)
ಲೋಕಪಾಲ ವ್ಯಾಪ್ತಿಗೆ ಪ್ರಧಾನಿ ಹುದ್ದೆಯವನ್ನು ತರುವ ವಿಚಾರವು ಭಾರೀ ತಲೆನೋವಿಗೆ ಕಾರಣವಾಗಿರುವಂತೆಯೇ, ಇದುವರೆಗೆ ತಾನಾಗಿಯೇ ಈ ವಿಷಯವನ್ನು ನಿಭಾಯಿಸುತ್ತಿದ್ದ ಕಾಂಗ್ರೆಸ್ ಪಕ್ಷವು, ಎಲ್ಲ ಪಕ್ಷಗಳ ಅಭಿಪ್ರಾಯ ಕೇಳುವ ಮತ್ತು ಹೊಣೆ ಹಂಚಿಕೊಳ್ಳುವ ಕೆಲಸಕ್ಕೆ ಮುಂದಾಗಿದೆ. ಇದಕ್ಕಾಗಿ ಸರ್ವಪಕ್ಷ ಸಭೆ ಕರೆಯಲು ನಿರ್ಧರಿಸಿದೆ.

ಭ್ರಷ್ಟಾಚಾರದ ವಿರುದ್ಧ ಕಠಿಣ ಕಾಯ್ದೆ ರೂಪಿಸುವ ನಿಟ್ಟಿನಲ್ಲಿ ರಚಿಸಲಾಗಿರುವ ಲೋಕಪಾಲ ಜಂಟಿ ಕರಡು ಮಸೂದೆ ಸಮಿತಿಯಲ್ಲಿ ನಾಗರಿಕ ಸಮಾಜ ಹಾಗೂ ಸರಕಾರಿ ಪ್ರತಿನಿಧಿಗಳ ನಡುವೆ ಭಿನ್ನಾಭಿಪ್ರಾಯಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್‌ನ ಇತರ ಕೆಲವು ಪ್ರಮುಖ ಸದಸ್ಯರನ್ನೊಳಗೊಂಡ ಕೋರ್ ಕಮಿಟಿ ಶನಿವಾರ ಸಭೆ ನಡೆಸಿತು.

ಭ್ರಷ್ಟಾಚಾರ ವಿಷಯ ಮತ್ತು ತೆಲಂಗಾಣದಂತಹಾ ಸೂಕ್ಷ್ಮ ವಿಷಯಗಳ ವಿವಾದದಿಂದ ಜರ್ಝರಿತವಾಗಿರುವುದರಿಂದ ಶುಕ್ರವಾರ ರಾತ್ರಿಯೂ ಕೋರ್ ಕಮಿಟಿ ಸಭೆ ನಡೆಸಲಾಗಿತ್ತು.

ಪ್ರಸ್ತಾಪಿತ ಲೋಕಪಾಲ ಮಸೂದೆ ವ್ಯಾಪ್ತಿಗೆ ಪ್ರಧಾನಿ ಬರಲೇಬೇಕು ಎಂದು ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿ ಒತ್ತಾಯಿಸುತ್ತಿದ್ದರೆ, ಅಧಿಕಾರಸ್ಥರಲ್ಲಿ ಇದಕ್ಕೆ ವಿರೋಧವಿದೆ. ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಬಳಿಕ ಬೇಕಾದರೆ ಅವರನ್ನು ಲೋಕಪಾಲದ ವ್ಯಾಪ್ತಿಗೆ ತರುವ ಕುರಿತು ಸರಕಾರ ಮುಕ್ತ ಭಾವನೆ ಹೊಂದಿದೆ. ಈ ಕುರಿತ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಈಗ ಜೂ.20, 21ರಂದು ಜಂಟಿ ಕರಡು ಸಮಿತಿ ಸಭೆ ಸೇರಲಿದೆ.

ಪ್ರಧಾನಿಯನ್ನು ಲೋಕಪಾಲ ವ್ಯಾಪ್ತಿಗೆ ತರುವ ಕುರಿತು ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದು ಹಿರಿಯ ಕಾಂಗ್ರೆಸಿಗರಾದ ಕೇಂದ್ರ ಸಚಿವ ಪಿ.ಚಿದಂಬರಂ ಮತ್ತಿತರರು ಆಗಾಗ್ಗೆ ಹೇಳುತ್ತಲೇ ಇದ್ದಾರೆ. ಕಾಂಗ್ರೆಸ್ ಈಗ ಯುಪಿಎ ಮೈತ್ರಿಕೂಟದ ನೇತೃತ್ವ ವಹಿಸಿರುವುದರಿಂದ ಎಲ್ಲರ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್‌ಗೆ ತನ್ನದೇ ಆದ ಪೂರ್ಣ ಜನಾದೇಶವಿಲ್ಲ ಎಂದು ಅಸಹಾಯಕತೆ ಪ್ರದರ್ಶಿಸಿದ್ದರು.
ಇವನ್ನೂ ಓದಿ