ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ಹಜಾರೆ ಉಪವಾಸ ಮಾಡಬೇಕಿಲ್ಲ: ಸಂತೋಷ್ ಹೆಗ್ಡೆ (Karnataka Lokayukta | Santosh Hegde | Not in favour | Anna going on fast)
ಅಣ್ಣಾ ಹಜಾರೆ ಉಪವಾಸ ಮಾಡಬೇಕಿಲ್ಲ: ಸಂತೋಷ್ ಹೆಗ್ಡೆ
ಬೆಂಗಳೂರು, ಭಾನುವಾರ, 19 ಜೂನ್ 2011( 09:06 IST )
ಪ್ರಭಾವೀ ಲೋಕಪಾಲ ಮಸೂದೆ ರಚನೆಯಾಗದಿದ್ದರೆ ಆಗಸ್ಟ್ 16 ರಿಂದ ಉಪವಾಸ ಸತ್ಯಾಗ್ರಹ ನಡೆಸಲು ಅಣ್ಣಾ ಹಜಾರೆ ನಿರ್ಧರಿಸಿರುವುದಕ್ಕೆ ಕರ್ನಾಟಕ ಲೋಕಾಯುಕ್ತ ಹಾಗೂ ಲೋಕಪಾಲ ಮಸೂದೆ ಕರಡು ರಚನಾ ಸಮಿತಿಯ ಸದಸ್ಯರೂ ಆಗಿರುವ ಸಂತೋಷ್ ಹೆಗ್ಡೆ ಅವರು ಸಹಮತ ವ್ಯಕ್ತಪಡಿಸಿಲ್ಲ.
ಆದರೆ ಪ್ರಸ್ತಾಪಿತ ಮಸೂದೆಯು ಪ್ರಭಾವೀ ರೂಪದಲ್ಲಿ ಹೊರಬರುವ ಬಗ್ಗೆ ಹೆಗ್ಡೆ ಸಂದೇಹ ವ್ಯಕ್ತಪಡಿಸಿದ್ದು, ಜಂಟಿ ಸಮಿತಿಯು ನೀಡಿದ ಲೋಕಪಾಲ ಮಸೂದೆಯ ಕರಡಿನ ಅತ್ಯಂತ ದುರ್ಬಲ ರೂಪವಷ್ಟೇ ಕಾಯ್ದೆಯಾಗಿ ಸಂಸತ್ತಿನಲ್ಲಿ ಹೊರಬರಬಹುದು ಎಂಬುದು ಅವರ ಅನಿಸಿಕೆ.
ಅಣ್ಣಾಜಿ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಮುಂದುವರಿಸಬೇಕು. ಅವರು ಉಪವಾಸ ಸತ್ಯಾಗ್ರಹ ನಡೆಸಬಾರದು ಎಂದು ಹೆಗ್ಡೆ ಹೇಳಿದ್ದಾರೆ.
ಅಣ್ಣಾ ಹಜಾರೆ ಅವರು ರಾಷ್ಟ್ರಾದ್ಯಂತ ಸಂಚರಿಸಿ ಭ್ರಷ್ಟಾಚಾರ ಹಾಗೂ ಅದು ದೇಶದ ಪ್ರಗತಿ ಮೇಲೆ ಬೀರುವ ಪರಿಣಾಮಗಳ ಕುರಿತು ಜನರಿಗೆ ಮನವರಿಕೆ ಮಾಡಬೇಕಾಗಿದೆ ಎಂದು ಹೆಗ್ಡೆ ಪಿಟಿಐಗೆ ತಿಳಿಸಿದ್ದಾರೆ. ಲೋಕಪಾಲ ಮಸೂದೆ ರಚನೆಯಾಗದಿದ್ದರೆ ಆಗಸ್ಟ್ 16ರಿಂದ ಮತ್ತೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅಣ್ಣಾ ಹಜಾರೆ ಎಚ್ಚರಿಸಿದ್ದರು.
ಅಪಾರ ಜನ ಬೆಂಬಲ ಹೊಂದಿರುವುದರಿಂದ ಸದ್ಯಕ್ಕೆ ಹಜಾರೆ ಅವರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಬಾರದು ಎಂದು ಅವರಲ್ಲಿ ಹೇಳಿರುವುದಾಗಿಯೂ ಹೆಗ್ಡೆ ತಿಳಿಸಿದರು.