'ಸೋನಿಯಾಜೀಯವರೇ, ನಿಮ್ಮ ಪಕ್ಷದ ಮುಖಂಡರೆಲ್ಲಾ ಅವಹೇಳನಕಾರಿ ಮಾತುಗಳನ್ನು ಆಡುತ್ತಾ ಭ್ರಷ್ಟಾಚಾರ ವಿರೋಧೀ ಹೋರಾಟದ ದಿಕ್ಕು ತಪ್ಪಿಸುತ್ತಿದ್ದಾರೆ, ಏನಾದರೂ ಮಾಡಿ' ಅಂತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಬರೆದ ಸುದೀರ್ಘ ಪತ್ರಕ್ಕೆ ಸೋನಿಯಾ 'ತಕ್ಕ' ಉತ್ತರ ನೀಡಿದ್ದಾರೆ. 62 ಶಬ್ದಗಳ ಆರು ಸಾಲಿನ ಪತ್ರದಲ್ಲಿ ಆಕೆ, "ನನ್ನ ನಿರ್ಧಾರ ಈಗಾಗಲೇ ಸ್ಪಷ್ಟಪಡಿಸಿದ್ದೇನೆ" ಎಂದಷ್ಟೇ ಹೇಳಿ ತಮ್ಮ ಅಸಮಾಧಾನವನ್ನು ಹೊರಗೆಡಹಿದ್ದಾರೆ.
'ನಿಮ್ಮ ಪಕ್ಷದವರು ನಮ್ಮ ಹೋರಾಟವನ್ನು ಆರೆಸ್ಸೆಸ್/ಬಿಜೆಪಿ ಪ್ರಾಯೋಜಕತ್ವದ್ದು, ನಾನು ಆರೆಸ್ಸೆಸ್ ಏಜೆಂಟ್ ಎಂದೆಲ್ಲಾ ಆರೋಪಿಸುತ್ತಿದ್ದಾರೆ. ದಯವಿಟ್ಟು ನಿಮ್ಮವರಿಗೆ ಬುದ್ಧಿ ಹೇಳಿ' ಎಂದು ಅಣ್ಣಾ ಹಜಾರೆ ಬರೆದಿರುವ ಪತ್ರಕ್ಕೆ ಸೋನಿಯಾ ಉತ್ತರ ಹೀಗಿದೆ: "ನೀವು ಜೂ.9ರಂದು ಬರೆದ ಪತ್ರ ತಲುಪಿದೆ. ನಾನು ದೆಹಲಿಯಲ್ಲಿ ಇರಲಿಲ್ಲವಾದ್ದರಿಂದ ಉತ್ತರಿಸಲಾಗಲಿಲ್ಲ. ಇದೇ ವೇಳೆ, ನೀವಿದನ್ನು (ಹಜಾರೆ ಪತ್ರವನ್ನು) ಬಹಿರಂಗ ಮಾಡಿಯೂ ಬಿಟ್ಟಿದ್ದೀರಿ. ನಾನು ಈ ವಿಷಯದಲ್ಲಿ ಮಾಹಿತಿ ಸಂಗ್ರಹಿಸುತ್ತೇನೆ. ಉಳಿದ ವಿಷಯಗಳ ಬಗ್ಗೆ ಈಗಾಗಲೇ ಏಪ್ರಿಲ್ 29ರಂದು ನಾನು ಬರೆದ ಪತ್ರದಲ್ಲಿ ನಿಮಗೆ ಈಗಾಗಲೇ ಸ್ಪಷ್ಟಪಡಿಸಿದ್ದೇನೆ"! ಅಂದರೆ ಪತ್ರ ಬಹಿರಂಗಪಡಿಸಿದ ಕುರಿತಾಗಿಯೂ ಸೋನಿಯಾ ಆಕ್ಷೇಪಿಸಿರುವುದು ಇಲ್ಲಿ ಸ್ಪಷ್ಟವಾಗುತ್ತದೆ.
ಜಂಟಿ ಲೋಕಪಾಲ ಕರಡು ರಚನಾ ಸಮಿತಿಯ ಅಂತಿಮ ಸಭೆ ಆರಂಭವಾಗುವ ಒಂದು ದಿನ ಮುಂಚಿತವಾಗಿ ಕಡ್ಡಿ ತುಂಡರಿಸಿದಂತೆ ಬರೆಯಲಾಗಿರುವ ಈ ಪತ್ರವು, ಅಣ್ಣಾ ಹಜಾರೆ ಬಣದ ಬಗೆಗಿನ ತನ್ನ ಕಠಿಣ ನಿಲುವನ್ನು ಕಾಂಗ್ರೆಸ್ ಸಡಿಲಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಈಗಾಗಲೇ ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ಹಜಾರೆ ನೇತೃತ್ವದ ನಾಗರಿಕ ಸಮಿತಿಯ ಎಲ್ಲ ಸದಸ್ಯರ ವಿರುದ್ಧ ಒಂದಿಲ್ಲೊಂದು ಆರೋಪಗಳನ್ನು ಮಾಡುತ್ತಾ, ಅವರನ್ನು "ಆರೆಸ್ಸೆಸ್ ಮುಖವಾಡ" ಎಂದೆಲ್ಲಾ ಹೇಳುತ್ತಿದೆಯಲ್ಲದೆ, ಬಾಬಾ ರಾಮದೇವ್ ಅವರನ್ನು ಠಕ್ಕ, ವಂಚಕ ಇತ್ಯಾದಿ ಕೀಳುಮಟ್ಟದ ಭಾಷೆ ಪ್ರಯೋಗಿಸಿ ಭಾರೀ ಪ್ರಚಾರ ಮಾಡುತ್ತಿದೆ. ಇದರಿಂದ ತೀರಾ ನೊಂದದ್ದ ಹಜಾರೆ ಅವರು ಈ ಕುರಿತು ಜೂ.9ರಂದು ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿಗೆ ದೂರು ನೀಡಿದ್ದರು.
ಆದರೆ, ಇಷ್ಟು ಮಹತ್ವದ ಪತ್ರದ ಬಗ್ಗೆ ಕೇವಲ ಕೆಲವೇ ಸಾಲುಗಳಲ್ಲಿ ನಿರ್ಲಕ್ಷ್ಯಭರಿತ ಉತ್ತರ ನೀಡುವ ಮೂಲಕ, ಹಜಾರೆ ಬಣದ ಬಗಗೆ ತನಗಿರುವ ಅಸಮಾಧಾನವನ್ನು ಕಾಂಗ್ರೆಸ್ ಬಯಲಾಗಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, ಏಪ್ರಿಲ್ 19ರಂದು ಸೋನಿಯಾ ಅವರು ಅಣ್ಣಾ ಹಜಾರೆಗೆ ಬರೆದ ಉತ್ತರದಲ್ಲಿ, ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ತಾನು ಬದ್ಧವಾಗಿರುವುದಾಗಿ ಹೇಳಿದ್ದರಲ್ಲದೆ, ಈ ಅಪಪ್ರಚಾರ ಆಂದೋಲನವನ್ನು ಬೆಂಬಲಿಸುವುದಿಲ್ಲ ಎಂದೂ ಭರವಸೆಯನ್ನಾದರೂ ನೀಡಿದ್ದರು. ಪಕ್ಷಾಧ್ಯಕ್ಷೆಯ ಮಾತಿಗೂ ಬೆಲೆಯಿಲ್ಲದೆ, ಕಾಂಗ್ರೆಸ್ ಮುಖಂಡರಾದ ದಿಗ್ವಿಜಯ್ ಸಿಂಗ್, ಕಪಿಲ್ ಸಿಬಲ್, ಜನಾರ್ದನ ದ್ವಿವೇದಿ, ಬಿ.ಕೆ.ಹರಿಪ್ರಸಾದ್ ಮುಂತಾದವರು ಹಜಾರೆ ಬಣದ ಮೇಲೆ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದರು.
ಲೋಕಪಾಲ ವ್ಯಾಪ್ತಿಗೆ ಪ್ರಧಾನಮಂತ್ರಿಯನ್ನು ಮತ್ತು ನ್ಯಾಯಾಂಗದ ಮುಖ್ಯಸ್ಥರನ್ನು ಸೇರ್ಪಡಿಸುವ ವಿಚಾರ ಮತ್ತು ಈ ಕಾಯಿದೆಯು ಎಲ್ಲ ಸ್ತರದ ಅಧಿಕಾರಿಗಳು, ಜನ ಸೇವಕರನ್ನೂ ಅದರ ವ್ಯಾಪ್ತಿಗೆ ಸೇರಿಸಬೇಕೆಂಬ ಹಜಾರೆ ಬಣದ ವಾದಕ್ಕೆ ಕಾಂಗ್ರೆಸ್ ಒಪ್ಪದಿರುವುದೇ ಈ ರೀತಿಯ ಕೆಸರೆರಚಾಟಗಳಿಗೆ ಪ್ರಧಾನ ಕಾರಣ ಎನ್ನಲಾಗುತ್ತಿದೆ. ಸರಕಾರವು ಮೇಲ್ಮಟ್ಟದ ಅಧಿಕಾರಿಗಳನ್ನು ಮಾತ್ರವೇ ಲೋಕಪಾಲ ವ್ಯಾಪ್ತಿಗೆ ತರುವ ಉದ್ದೇಶ ಹೊಂದಿದ್ದರೆ, ಪ್ರಧಾನಿ, ನ್ಯಾಯಾಂಗ ಮುಖ್ಯಸ್ಥರು ಹಾಗೂ ಸಂಸದರನ್ನು ಹೊರಗಿಡುವ ಮನೋಭಾವದಲ್ಲಿದೆ.