ಪ್ರಬಲವಾದ ಲೋಕಪಾಲ ಕಾಯ್ದೆಗಾಗಿ ಆಗ್ರಹಿಸುತ್ತಿರುವ ನಾಗರಿಕ ಸಮಾಜದ ಪ್ರತಿನಿಧಿಗಳ ಮೇಲೆ ಸರಕಾರದಿಂದ ತೀವ್ರ ತೇಜೋವಧೆ ಯತ್ನಗಳ ಬಳಿಕ ಕುತೂಹಲ ಕೆರಳಿಸಿದ್ದ ಜಂಟಿ ಮಸೂದೆ ಕರಡು ರಚನಾ ಸಮಿತಿಯ ಸಭೆಯು ಸೋಮವಾರ ನಡೆದಿದ್ದು, ಲೋಕಪಾಲರ ಆಯ್ಕೆ ಮತ್ತು ವಜಾಕ್ಕೆ ಸಂಬಂಧಿಸಿ ಅಧಿಕಾರವು ರಾಜಕಾರಣಿಗಳ ಕೈಯಲ್ಲಿರಬೇಕೆಂದು ಸರಕಾರ ಪಟ್ಟು ಹಿಡಿಯುವುದರೊಂದಿಗೆ, ಹೊಸ ಬಿಕ್ಕಟ್ಟು ಎದುರಾಗಿದೆ.
ಸೋಮವಾರದ ಸಭೆ ಸೌಹಾರ್ದಯುತವಾಗಿಯೇ ನಡೆಯಿತು. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಮನಬಿಚ್ಚಿ ಮಂಡಿಸಿದರು ಎಂದು ನಾಗರಿಕ ಸಮಿತಿ ಮತ್ತು ಸರಕಾರದ ಸದಸ್ಯರು ಹೇಳಿಕೊಂಡರಾದರೂ, ಆದರೆ ಈಗಾಗಲೇ ಇರುವ ಭಿನ್ನಾಭಿಪ್ರಾಯಗಳು ಬಗೆ ಹರಿದಿಲ್ಲ ಎಂಬುದನ್ನು ಉಭಯ ಬಣಗಳೂ ಒಪ್ಪಿಕೊಂಡಿವೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಸರಕಾರದ ಪ್ರತಿನಿಧಿಗಳ ಪರವಾಗಿ ಮಾತನಾಡಿದ ಕಪಿಲ್ ಸಿಬಲ್, ಶೇ.80-85ರಷ್ಟು ಸಹಮತ ಏರ್ಪಟ್ಟಿದೆ. ನಾಳೆ ಮತ್ತೆ ಸಭೆ ಸೇರಿ ಉಳಿದ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ. ಎರಡೂ ಕಡೆಯವರು ನಾಳೆ ತಮ್ಮ ತಮ್ಮ ಕರಡು ಮಸೂದೆಗಳನ್ನು ಸಲ್ಲಿಸಲಿದ್ದಾರೆ ಎಂದರು.
ಆದರೆ, ನಾಗರಿಕ ಸಮಿತಿ ಸದಸ್ಯರಾದ ಪ್ರಶಾಂತ್ ಭೂಷಣ್ ಮತ್ತು ಅರವಿಂದ ಕೇಜ್ರಿವಾಲ್ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಪಾಲರ ವ್ಯಾಪ್ತಿಯ ಪ್ರಮುಖ ಸಮಸ್ಯೆ ಹಾಗೆಯೇ ಉಳಿದಿದೆಯಲ್ಲದೆ, ಹೊಸದಾಗಿ ಎರಡು ಸಮಸ್ಯೆಗಳು ಉದ್ಭವವಾಗಿವೆ ಎಂದರು.
ಅವೆಂದರೆ, ಲೋಕಪಾಲರ ನೇಮಕಾತಿ ಸಮಿತಿಯಲ್ಲಿ ರಾಜಕಾರಣಿಗಳೇ ಹೆಚ್ಚಿರಬೇಕು ಎಂಬುದು ಸರಕಾರ ಒತ್ತಾಯಿಸಿದರೆ, "ಹಾಗಾಗಬಾರದು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಸಿವಿಸಿ, ಚುನಾವಣಾ ಆಯುಕ್ತರು, ಪ್ರಧಾನಿ, ಪ್ರತಿಪಕ್ಷ ನಾಯಕರ ಸಹಿತ ವಿಸ್ತೃತ ತಳಹದಿಯ ಸ್ವತಂತ್ರ ಮತ್ತು ರಾಜಕೀಯೇತರ ಆಯ್ಕೆ ಸಮಿತಿಯೊಂದು ಅವರನ್ನು ನೇಮಿಸಬೇಕು" ಎಂಬುದು ನಾಗರಿಕ ಸಮಿತಿ ಸದಸ್ಯರ ಪಟ್ಟು.
ಅದೇ ರೀತಿ, ಎರಡನೇ ಹೊಸ ಭಿನ್ನಾಭಿಪ್ರಾಯವೆಂದರೆ, ದುರ್ವರ್ತನೆ ತೋರಿದ, ಕರ್ತವ್ಯ ನಿಭಾಯಿಸಲು ವಿಫಲವಾದ ಲೋಕಾಯುಕ್ತರನ್ನು ಹಿಂದಕ್ಕೆ ಕರೆಸಿಕೊಳ್ಳುವ ಅಧಿಕಾರದ ಕುರಿತು. ಅವರ ವಜಾಕ್ಕೆ ಯಾವುದೇ ನಾಗರಿಕನು ಕೂಡ ಸುಪ್ರೀಂ ಕೋರ್ಟ್ ಮೊರೆ ಹೋಗಿ ಅರ್ಜಿ ಸಲ್ಲಿಸಬಹುದು ಎಂಬುದು ನಾಗರಿಕ ಸಮಿತಿಯ ಒತ್ತಾಯವಾದರೆ, ಆ ಅಧಿಕಾರವೂ ರಾಜಕಾರಣಿಗಳು ಹಾಗೂ ಸರಕಾರದ ಕೈಯಲ್ಲಿರಬೇಕು. ಸರಕಾರವು ಮಾತ್ರವೇ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಬಹುದು ಎಂಬುದು ಸರಕಾರದ ವಾದ.
ಮಂಗಳವಾರ ಜಂಟಿ ಕರಡು ರಚನಾ ಸಮಿತಿಯು ಮತ್ತೆ ಸಭೆ ಸೇರಲಿದ್ದು, ಎರಡೂ ಕಡೆಯವರು ತಾವು ಸಿದ್ಧಪಡಿಸಿದ ಕರಡು ಮಸೂದೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಭಿನ್ನಾಭಿಪ್ರಾಯ ಇರುವ ಅಂಶಗಳಿಗೆ ತಮ್ಮ ಅನಿಸಿಕೆಯನ್ನು ಸೇರಿಸುತ್ತಾರೆ ಮತ್ತು ಇವೆಲ್ಲವೂ ಸಂಪುಟದ ಮುಂದೆ ಹೋಗುತ್ತದೆ.