ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸರಕಾರದ ಕರಡು ಮಸೂದೆ: ಪ್ರಧಾನಿ ಲೋಕಪಾಲ ವ್ಯಾಪ್ತಿಗೆ? (PM | will be under Lokpal | Lokpal ambit | Centre draft)
ಭ್ರಷ್ಟಾಚಾರದ ನಿಗ್ರಹಕ್ಕೆ ಮಂಡನೆಯಾಗಲಿರುವ ಲೋಕಪಾಲ ಮಸೂದೆ ವ್ಯಾಪ್ತಿಗೆ ಪ್ರಧಾನಿಯನ್ನು ಒಳಪಡಿಸುವ ವಿಷಯಕ್ಕೆ ಸಂಬಂಧಪಟ್ಟಂತೆ ಬಂದಿರುವ ಒತ್ತಡಕ್ಕೆ ಕೇಂದ್ರವು ಕೊಂಚ ಮಣಿದಿದೆ. ಸರಕಾರ ರಚಿಸಿರುವ ಅಂತಿಮ ಕರಡಿನಲ್ಲಿ ಪ್ರಧಾನಿಯವರನ್ನು ಈ ಮಸೂದೆ ವ್ಯಾಪ್ತಿಗೆ ತರುವ ಕುರಿತು ಮಾಹಿತಿ ದೊರೆತಿರುವುದಾಗಿ ಸಿಎನ್ಎನ್-ಐಬಿಎನ್ ತಿಳಿಸಿದೆ.

ಸರಕಾರ ರೂಪಿಸಿರುವ ಮಸೂದೆಯ ಅಂತಿಮ ಕರಡಿನ ಪ್ರಕಾರ, ಪ್ರಧಾನಿ ಲೋಕಪಾಲ ಮಸೂದೆಗೆ ಒಳಪಡಲಿದ್ದಾರೆ. ಆದರೆ ಕೆಲವೊಂದು ರಕ್ಷಣಾತ್ಮಕ ಕ್ರಮಗಳನ್ನು ಇದು ಒಳಗೊಂಡಿರುತ್ತದೆ. ಪ್ರಧಾನಿ ಅವರ ವಿರುದ್ಧ ದೂರುಗಳನ್ನು ದಾಖಲಿಸಬಹುದು, ಆದರೆ ಅವರು ಹುದ್ದೆಯಿಂದ ಕೆಳಗಿಳಿದ ನಂತರವೇ ವಿಚಾರಣೆ ನಡೆಯಲಿದೆ ಎಂದು ಕರಡಿನಲ್ಲಿ ಹೇಳಲಾಗಿದೆ. ಸರಕಾರವು ಪ್ರಧಾನಿ ಮನಮೋಹನ್ ಸಿಂಗ್ ಜೊತೆ ಮಾತುಕತೆ ನಡೆಸಿದ ನಂತರವೇ ಈ ನಿಯಮವನ್ನು ಕರಡಿನಲ್ಲಿ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲೋಕಪಾಲ ವ್ಯಾಪ್ತಿಗೆ ಬರುವ ಇತರರಂತೆಯೇ ಪ್ರಧಾನಿಯವರೂ ನ್ಯಾಯಾಂಗ ವಿಚಾರಣೆ ಎದುರಿಸಬೇಕು ಎಂದು ನಾಗರಿಕ ಸಮಾಜದ ಬೇಡಿಕೆಯನ್ನು ಸರಕಾರವು ಈಗಾಗಲೇ ತಿರಸ್ಕರಿಸಿದೆ. ಸರಕಾರ ರೂಪಿಸಿರುವ ಕರಡಿನ ಕುರಿತು ಜುಲೈ ಮೊದಲ ವಾರ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಲಾಗುವುದು ಎನ್ನಲಾಗಿದೆ.

ಈ ಮೊದಲು ಸೋಮವಾರ ನಡೆದ ಲೋಕಪಾಲ ಮಸೂದೆ ಜಂಟಿ ಕರಡು ರಚನಾ ಸಮಿತಿಯ 8ನೇ ಸಭೆಯು ಸರಕಾರ ಹಾಗೂ ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿ ನಡುವೆ ಸಹಮತ ಮೂಡಿಸುವಲ್ಲಿ ವಿಫಲವಾಯಿತು. ಆದರೂ ಸಭೆಯು ಸಕಾರಾತ್ಮಕ ನಿಲುವಿನ ಮೂಲಕ ಅಂತ್ಯಗೊಂಡಿತು ಎಂದು ಸರಕಾರ ತಿಳಿಸಿದೆ. ಕೆಲವು ವಿಷಯಗಳ ಕುರಿತು ಭಿನ್ನಾಭಿಪ್ರಾಯಗಳು ಈಗಲೂ ಬಾಕಿ ಉಳಿದಿದ್ದು, ಇನ್ನಷ್ಟು ಭಿನ್ನಾಭಿಪ್ರಾಯಗಳು ಹೊಸದಾಗಿ ತಲೆದೋರಿವೆ ಎಂದು ನಾಗರಿಕ ಸಮಿತಿ ತಿಳಿಸಿದೆ.

ನಾಗರಿಕ ಸಮಿತಿಯ ಶೇ.80ರಿಂದ 85ರಷ್ಟು ಶಿಫಾರಸುಗಳನ್ನು ಒಪ್ಪಿಕೊಳ್ಳಲಾಗಿದೆ ಎಂದು ಕೇಂದ್ರ ದೂರ ಸಂಪರ್ಕ ಖಾತೆ ಸಚಿವ ಕಪಿಲ್‌ ಸಿಬಾಲ್‌ ಹೇಳಿದ್ದರೆ, ನಾಗರಿಕ ಸಮಿತಿಯ ಪ್ರತಿನಿಧಿಗಳಾದ ಪ್ರಶಾಂತ್‌ ಭೂಷಣ್‌ ಹಾಗೂ ಅರವಿಂದ್‌ ಕೇಜ್ರಿವಾಲ್‌ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.

ಸರಕಾರ ಮತ್ತು ನಾಗರಿಕ ಸಮಿತಿಯ ಎರಡೂ ಕರಡುಗಳನ್ನು ಮಂಗಳವಾರ ನಡೆಯಲಿರುವ ಸಭೆಯಲ್ಲಿ ಚರ್ಚಿಸಿದ ನಂತರ ಕೇಂದ್ರ ಸಂಪುಟಕ್ಕೆ ಕಳುಹಿಸಲಾಗುತ್ತದೆ.
ಇವನ್ನೂ ಓದಿ