ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಟ್ರಸ್ಟ್ ಸದಸ್ಯರಿಂದ ಸಾಯಿಬಾಬಾ ಸೊಸೆಗೆ ಜೀವ ಬೆದರಿಕೆ (Satya Sai Baba | Central Trust | Yajur Mandir | Chetana Raju)
PTI
ಸತ್ಯ ಸಾಯಿ ಬಾಬಾ ಅವರು ಕೂಡಿಟ್ಟ ಸಂಪತ್ತೆಲ್ಲಾ ಧೂರ್ತರ ಪಾಲಾಗುತ್ತಿದೆ ಎಂಬೊಂದು 'ಹಗರಣ' ಬೆಳಕಿಗೆ ಬರತೊಡಗಿರುವಂತೆಯೇ, ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಸದಸ್ಯರ ಕುರಿತಾದ ಸಂದೇಹಗಳೂ ಬಲವಾಗತೊಡಗಿದೆ. ಹೊಸ ಬೆಳವಣಿಗೆಯಲ್ಲಿ, ಟ್ರಸ್ಟ್‌ನ ಕೆಲವು ಸದಸ್ಯರಿಂದ ತನಗೆ ಜೀವ ಬೆದರಿಕೆ ಬಂದಿದೆ ಎಂದು ಸಾಯಿ ಬಾಬಾ ಅವರ ಆಪ್ತ ಸಂಬಂಧಿಯಾದ ಚೇತನಾ ರಾಜು ಅವರು ಆರೋಪಿಸಿರುವುದು ಈ ಸಂದೇಹಗಳಿಗೆ ಪುಷ್ಟಿ ನೀಡಿದೆ.

ಸತ್ಯ ಸಾಯಿ ಬಾಬಾ ಅವರ ಆಪ್ತ ಸಹಾಯಕನಾಗಿದ್ದ ಮಂಗಳೂರು ಮೂಲದ ಸತ್ಯಜಿತ್ ಎಂಬವರ ಪರವಾಗಿ ಬಾಬಾ ಉಯಿಲು ಬರೆದಿಟ್ಟಿದ್ದಾರೆ, ಅವರೇ ಸಾಯಿ ಸಾಮ್ರಾಜ್ಯದ ಅಧಿಪತಿಯಾಗುತ್ತಾರೆ ಎಂಬುದರಿಂದ ವಿಚಲಿತರಾಗಿರುವ ಕೆಲವು ಟ್ರಸ್ಟ್ ಸದಸ್ಯರು, ಸತ್ಯಜಿತ್ ಅವರ ಏಳಿಗೆಗೆ ಅಡ್ಡಗಾಲು ಇಡುತ್ತಲೇ ಇದ್ದಾರೆ ಎನ್ನಲಾಗುತ್ತಿದೆ. ಈ ನಡುವೆ, ಸಾಯಿ ಬಾಬಾ ಅವರ ಸಹೋದರನ ಮಗ, ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎನ್ನಲಾಗುತ್ತಿರುವ ರತ್ನಾಕರ್ ಅವರು ಕೂಡ ಬಾಬಾ ಸಾಮ್ರಾಜ್ಯದ ಉತ್ತರಾಧಿಕಾರ ಆಕಾಂಕ್ಷಿಯಾಗಿದ್ದರು.

ಪ್ರಶಾಂತಿ ನಿಲಯದಲ್ಲಿರುವ ಸತ್ಯ ಸಾಯಿ ಬಾಬಾ ಅವರ ತಾಯಿಯ ಹೆಸರಿನ ಈಶ್ವರಮ್ಮ ಮಹಿಳಾ ಕಲ್ಯಾಣ ಟ್ರಸ್ಟ್‌ನ ಅಧ್ಯಕ್ಷೆ ಚೇತನಾ ರಾಜು ಪ್ರಕಾರ, ಟ್ರಸ್ಟ್‌ನಲ್ಲಿ ಎಲ್ಲವೂ ಸರಿ ಇಲ್ಲ. ಆದರೆ, ಯಾರಿಂದ ಬೆದರಿಕೆ ಬಂದಿದ್ದು ಎಂಬುದನ್ನು ಚೇತನಾ ಬಹಿರಂಗಪಡಿಸಿಲ್ಲವಾದರೂ, ಇತ್ತೀಚೆಗೆ ಬಾಬಾ ಅಂತರಂಗದ ಕೊಠಡಿ ಯಜುರ್ವೇದ ಮಂದಿರವನ್ನು ತೆರೆಯುವಾಗ ಬಾಬಾ ಸಂಬಂಧಿಕರಿಗೂ ಅವಕಾಶ ನೀಡದ ಟ್ರಸ್ಟ್ ಸದಸ್ಯ ವಿ.ಶ್ರೀನಿವಾಸನ್ ಅವರ ಮೇಲೆ ಚೇತನಾಗೆ ಕೋಪ ಇದೆ. ಆದರೆ ಇದುವರೆಗೆ ಆಕೆ ಪೊಲೀಸರಿಗೆ ದೂರು ನೀಡಿಲ್ಲ.

ಟ್ರಸ್ಟ್ ಸದಸ್ಯ ಆರ್.ಜೆ.ರತ್ನಾಕರ್ ಹೊರತಾಗಿ ಯಾವುದೇ ಕುಟುಂಬ ಸದಸ್ಯರನ್ನು ಶ್ರೀನಿವಾಸ್ ಅವರು ಯಜುರ್ ಮಂದಿರದ ಒಳಗೆ ಬಿಡಲಿಲ್ಲ. ಪ್ರಶಾಂತಿ ನಿಲಯದ ಎಲ್ಲ ವಿಷಯಗಳಿಂದಲೂ ತಮ್ಮನ್ನು ದೂರವಿಡಲಾಗಿದೆ ಎಂದು ಚೇತನಾ ದೂರಿದ್ದಾರೆ. ಅವರು ಸಾಯಿ ಬಾಬಾ ಅವರ ಅಕ್ಕನ ಮಗಳು.

ಲಕ್ಷಾಂತರ ಭಕ್ತರು ಆತಂಕಗೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಹಣದೊಂದಿಗೆ ಮೂವರು ಬಂಧಿತರಾಗಿದ್ದ ಸಂಗತಿಯ ಬಗ್ಗೆ ಹಾಗೂ ಯಜುರ್ ಮಂದಿರದಿಂದ ಅಮೂಲ್ಯ ವಸ್ತುಗಳು ಸಾಗಾಟವಾಗುತ್ತಿರುವ ಕುರಿತು ಸಮಗ್ರ ತನಿಖೆಯಾಗಬೇಕಾಗಿದೆ ಎಂದು ಚೇತನಾ ಅವರ ಸಹೋದರ ಶ್ರವಣ್ ಕೂಡ ಆಗ್ರಹಿಸಿದ್ದಾರೆ.

ರತ್ನಾಕರ್ ಹೇಳಿಕೆಗೆ ಪೊಲೀಸ್ ತಿರುಗೇಟು
ಇದೇ ವೇಳೆ, ಮೂವರ ಬಂಧನದಿಂದ ವಶಪಡಿಸಿಕೊಳ್ಳಲಾಗಿರುವ ಸುಮಾರು 85 ಲಕ್ಷ ರೂಪಾಯಿ ಹಣವು 12 ಭಕ್ತರಿಗೆ ಸೇರಿದ್ದು ಎಂಬ ಆರ್.ಜೆ.ರತ್ನಾಕರ್ ಅವರ ಹೇಳಿಕೆಯನ್ನು ನಿರಾಕರಿಸಿರುವ ಪೊಲೀಸರು, ಅದು ಟ್ರಸ್ಟ್‌ಗೆ ಸೇರಿದ ಹಣ ಎನ್ನುವುದಕ್ಕೆ ತಮ್ಮಲ್ಲಿ ಪುರಾವೆಗಳಿವೆ ಎಂದಿದ್ದಾರೆ. ಈ ಲೆಕ್ಕಕ್ಕೆ ಸಿಗದ ಹಣ ತಮ್ಮದು ಎಂದು ಇದುವರೆಗೂ ಯಾರೂ ತಮ್ಮ ಬಳಿ ಬಂದಿಲ್ಲ ಎಂದು ಪೆನುಕೊಂಡ ಡಿಎಸ್ಪಿ ಕೋಲಾರ ಕೃಷ್ಣ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ನಡುವೆ, ಬಂಧಿತರಲ್ಲೊಬ್ಬನಾಗಿರುವ, ಟ್ರಸ್ಟ್ ಸದಸ್ಯ ವಿ.ಶ್ರೀನಿವಾಸನ್ ಅವರ ಕಾರು ಚಾಲಕ ಚಂದ್ರ ಶೇಖರ್ ಅಲಿಯಾಸ್ ಶೇಖರ್ ಹಾಗೂ ಎಂಜಿನಿಯರ್ ಸೋಹನ್ ಶೆಟ್ಟಿ ಎಂಬವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ಜೂ.23ರವರೆಗೆ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ. ಮತ್ತೊಬ್ಬ ಶಂಕಿತ, ಬಾಬಾ ಅವರ ಮಹಾ ಸಮಾಧಿಯ ಸೈಟ್ ಎಂಜಿನಿಯರ್ ಹರೀಶ ನಂದ ಶೆಟ್ಟಿಗೆ ಜೂ.27ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮೂವರ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ನಡೆಯುತ್ತಿದೆ. ಪ್ರಶಾಂತಿ ನಿಲಯದ ಹಲವಾರು ಕೆಲಸಗಾರರು ಹಾಗೂ ರತ್ನಾಕರನ ಆತ್ಮೀಯರು ಹಿಂದೂಪುರದ ನ್ಯಾಯಾಲಯ ಆವರಣದಲ್ಲಿ ನೆರೆದಿದ್ದರು.

ಯಜುರ್ ಮಂದಿರದ ಭದ್ರತಾ ಅಧಿಕಾರಿ ಸೆರೆ
ಇವೆಲ್ಲ ಬೆಳವಣಿಗೆಗಳ ನಡುವೆ, ಬೆಂಗಳೂರು ದಾರಿಯಲ್ಲಿ, ಸತ್ಯ ಸಾಯಿ ಬಾಬಾ ಟ್ರಸ್ಟ್‌ಗೆ ಸೇರಿದ ಹಣ ವಶಪಡಿಸಿಕೊಳ್ಳಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತಿ ನಿಲಯದ ಮುಖ್ಯ ಭದ್ರತಾ ಅಧಿಕಾರಿ ಪ್ರಧಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ, ನಿವೃತ್ತ ವಾಯುಸೇನಾ ಅಧಿಕಾರಿಯಾಗಿರುವ ಪ್ರಧಾನ್ ಅವರೇ, ಯಜುರ್ ಮಂದಿರದಿಂದ 35.5 ಲಕ್ಷ ಹಣವನ್ನು ಹೊರಗೆ ತಂದು ಟ್ರಸ್ಟ್ ಸದಸ್ಯರಾದ ರತ್ನಾಕರ್ ಹಾಗೂ ವಿ.ಶ್ರೀನಿವಾಸನ್ ಅವರಿಗೆ ಒಪ್ಪಿಸಿದ್ದರು. ಬಳಿಕ ಅದನ್ನು ಕಾರು ಚಾಲಕ ಚಂದ್ರಶೇಖರನ ಕೈಗೆ ಒಪ್ಪಿಸಲಾಗಿತ್ತು.
ಇವನ್ನೂ ಓದಿ