ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇಟಲಿ ಪೌರತ್ವ: ರಾಹುಲ್, ಸೋನಿಯಾ ಪ್ರಧಾನಿಯಾಗುವಂತಿಲ್ಲ! (Dr. Subrahmanyan Swamy | Sonia Gandhi | Rahul Gandhi | Italy Citizenship)
PTI
ಕಾಂಗ್ರೆಸ್‌ನ 'ಯುವರಾಜ' ಎಂದೇ ಪಕ್ಷೀಯರಿಂದ ಕರೆಸಿಕೊಳ್ಳುವ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ಹುದ್ದೆಗೇರಬೇಕು ಎಂದು ಸಲಹೆ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯನ್ನು ಕಟುವಾಗಿ ಟೀಕಿಸಿರುವ ಜನತಾ ಪಾರ್ಟಿ ಅಧ್ಯಕ್ಷ ಡಾ.ಸುಬ್ರಹ್ಮಣ್ಯಂ ಸ್ವಾಮಿ, ಕಾನೂನಿನ ಪ್ರಕಾರ, ಇಟಲಿಯ ಪೌರತ್ವ ಹೊಂದಿರುವ ರಾಹುಲ್ ಮತ್ತು ಅವರ ಸಹೋದರಿ ಪ್ರಿಯಾಂಕಾ ವಾದ್ರಾ ಭಾರತದ ಪ್ರಧಾನಿ ಹುದ್ದೆಗೇರುವುದು ಸಾಧ್ಯವೇ ಇಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಿರಿಯ ವಕೀಲರೂ ಆಗಿರುವ ಆಕ್ಸ್‌ಫರ್ಡ್ ಪದವೀಧರ ಡಾ.ಸ್ವಾಮಿ ಪತ್ರಿಕಾ ಹೇಳಿಕೆಯೊಂದರಲ್ಲಿ, ಪ್ರಧಾನಿ ಸಿಂಗ್ ಅವರು "ಜನಪಥ್‌ನ (ಸೋನಿಯಾ ಗಾಂಧಿ ನಿವಾಸ) ಭಟ್ಟಂಗಿಗಳ ಮುಖವಾಣಿ"ಯಾಗಿದ್ದು, 2ಜಿ ಸ್ಪೆಕ್ಟ್ರಂ ಹಗರಣದ ಹುಳುಕುಗಳು ಒಂದೊಂದೇ ಬಯಲಾಗುತ್ತಿದ್ದು, ಕಾಂಗ್ರೆಸಿಗರ ಹೆಸರುಗಳು ಒಂದೊಂದೇ ಸೇರ್ಪಡೆಯಾಗುತ್ತಿರುವುದರಿಂದ ಮುಂಬರುವ ತಿಂಗಳಲ್ಲಿ ಮನಮೋಹನ್ ಸಿಂಗ್ ಸರಿಯಾಗಿ ಕಾರ್ಯನಿರ್ವಹಿಸುವ ಬಗ್ಗೆ ಭಟ್ಟಂಗಿ ಪಡೆಯು ಎಲ್ಲ ಭರವಸೆಗಳನ್ನೂ ಕಳೆದುಕೊಂಡಿದೆ ಎಂದಿದ್ದಾರೆ.

WD
ಪ್ರಧಾನ ಮಂತ್ರಿಯನ್ನು "ರಾಹುಲ್ ಗಾಂಧಿಯು ಬೆಳೆಯಲೆಂದು ಕಾಯುತ್ತಲೇ ಇರುವ ಮೈನೋ (ಸೋನಿಯಾ ಅವರು 'ಗಾಂಧಿ'ಯಾಗುವುದಕ್ಕಿಂತ, ಅಂದರೆ ರಾಜೀವ್ ಗಾಂಧಿಯನ್ನು ವಿವಾಹವಾಗುವ ಮೊದಲಿದ್ದ ಕುಲನಾಮ) ರಾಜವಂಶದಲ್ಲಿ ಒಂದು ರೀತಿಯ ರಾಜಪ್ರತಿನಿಧಿ"ಯಂತೆ ದಿಗ್ವಿಜಯ್ ಸಿಂಗ್ ಪರಿಗಣಿಸಿದ್ದಾರೆ ಎಂದು ಡಾ.ಸ್ವಾಮಿ ಆರೋಪಿಸಿದರು.

ಆದರೆ, ರಾಹುಲ್ ಗಾಂಧಿಗೆ ಭಾರತದ ಪ್ರಧಾನಿಯಾಗುವುದಕ್ಕೆ ಕಾನೂನಿನ ತೊಡಕಿದೆ ಎಂದು ಕೂಡ ಸ್ವಾಮಿ ವಿವರಿಸಿದ್ದಾರೆ. "ಅವರು ಇಟಲಿಯ ಕಾನೂನಿನ ಪ್ರಕಾರ ಜನ್ಮತಃ ಇಟಾಲಿಯನ್ ಪ್ರಜೆ. ವಂಶಪಾರಂಪರ್ಯವಾಗಿ ಬಂದಿರುವ ಈ ಪೌರತ್ವವನ್ನು ಅವರೆಂದಿಗೂ ತ್ಯಜಿಸಿಲ್ಲ ಮತ್ತು ಯೂರೋಪಿನೆಲ್ಲೆಡೆ ಅವರು ಬೇರೆಯೇ ಹೆಸರಿನಲ್ಲಿ ಪ್ರಯಾಣಿಸಿದ್ದು ಇಟಲಿಯ ಪಾಸ್‌ಪೋರ್ಟ್‌ನ ಮೂಲಕವೇ" ಎಂದು ಮಾಹಿತಿ ನೀಡಿದರು.

ಸೋನಿಯಾ ಕೂಡ ಪ್ರಧಾನಿಯಾಗಿಲ್ಲ ಇದೇ ಕಾರಣಕ್ಕೆ!
ರಾಹುಲ್ ಅವರು ತಮ್ಮ ತಾಯಿಯ ಅನುಭವದಿಂದಲಾದರೂ ಪಾಠ ಕಲಿಯಬೇಕು ಎಂದು ಸ್ವಾಮಿ ವಿವರಣೆ ನೀಡಿದ್ದಾರೆ. 2004ರಲ್ಲಿ ಸೋನಿಯಾ ಗಾಂಧಿ ಪ್ರಧಾನಿಯಾಗುವುದು ನಿಚ್ಚಳವಾದ ಬಳಿಕ ತೀವ್ರ ವಿರೋಧಗಳು ಕೇಳಿಬಂದಿದ್ದವು. ಆದರೆ ಪ್ರಧಾನಿಯಾಗುವುದಿಲ್ಲ ಎಂದು ಸೋನಿಯಾ ಘೋಷಣೆ ಮಾಡುವ ಮೂಲಕ 'ಮಹಾನ್ ತ್ಯಾಗಮಯಿ' ಎಂದು ಕಾಂಗ್ರೆಸಿಗರಿಂದ ಕರೆಸಿಕೊಂಡರು. ಆದರೆ ಇದರ ಹಿಂದೆ ಬೇರೆಯೇ ಕಥೆಯಿದೆ ಎಂದಿದ್ದಾರೆ ಡಾ.ಸ್ವಾಮಿ.

"2004ರಲ್ಲಿ ಪ್ರಧಾನಿಯಾಗಲು ಹೊರಟಿದ್ದ ಸೋನಿಯಾ ಗಾಂಧಿ ಪ್ರಯತ್ನವು ಅಂದಿನ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಕಾನೂನು ಮುಂದಿಟ್ಟು ಬರೆದಿದ್ದ ಪತ್ರವೊಂದರಿಂದ (ಈ ಪತ್ರವನ್ನು ಇನ್ನೂ ಬಹಿರಂಗಪಡಿಸಿಲ್ಲ) ವಿಫಲವಾಗಿತ್ತು. ಈ ಪತ್ರವನ್ನು ಸೋನಿಯಾ ಗಾಂಧಿ ಸ್ವೀಕರಿಸಿದಾಗ ಅಲ್ಲಿಬ್ಬರು ಸಾಕ್ಷಿಗಳೂ ಇದ್ದರು. ಅವರೆಂದರೆ ಮನಮೋಹನ್ ಸಿಂಗ್ ಹಾಗೂ ನಟವರ ಸಿಂಗ್. ಹೀಗಾಗಿ ಎಂದಿಗೂ ಕೂಡ ತಾವು ಭಾರತದ ಪ್ರಧಾನಿಯಾಗುವುದು ಸಾಧ್ಯವಿಲ್ಲ ಎಂಬುದು ಈಗಾಗಲೇ ಸೋನಿಯಾ ಗಾಂಧಿ ಮತ್ತು ಅವರ ಇಬ್ಬರು ಮಕ್ಕಳಿಗೆ ಈಗಾಗಲೇ ಮನವರಿಕೆಯಾಗಿರಬೇಕು" ಎಂದು ವಿವರಿಸಿದ್ದಾರೆ ಡಾ.ಸ್ವಾಮಿ.

ನೀವೇನಂತೀರಿ?
ಇವನ್ನೂ ಓದಿ