ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲ 'ಭೀತಿ': ಮುಂಗಾರು ಅಧಿವೇಶನ ಮುಂದಕ್ಕೆ (Parliament | Monsoon Session 2011 | Lokpal Bill | Women Reservation Bill | Anna Hazare)
ಭ್ರಷ್ಟಾಚಾರ ಹಾಗೂ ವಿದೇಶದಲ್ಲಿ ಕೂಡಿ ಹಾಕಿರುವ ಕಾಳ ಧನದ ಕುರಿತು ನಾಗರಿಕ ಸಮಿತಿ ಸದಸ್ಯರು, ಪ್ರಜೆಗಳು ಹಾಗೂ ಪ್ರತಿಪಕ್ಷಗಳಿಂದ ತೀವ್ರ ಇಕ್ಕಟ್ಟಿನಲ್ಲಿ ಸಿಲುಕಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು, ಲೋಕಪಾಲ ಮಸೂದೆ ಮಂಡನೆಯಾಗಲೇಬೇಕಾದ ಅನಿವಾರ್ಯತೆಯಿರುವ ಸಂಸತ್ತಿನ ಮುಂಗಾರು ಅಧಿವೇಶನವನ್ನೇ ಮಾಮೂಲಿಗಿಂತ ಎರಡು ವಾರಗಳ ಕಾಲ ಮುಂದಕ್ಕೆ ಹಾಕಿದೆ. ಅಂದರೆ ಅಧಿವೇಶನವು ಆಗಸ್ಟ್ 1ರಿಂದ ಸೆಪ್ಟೆಂಬರ್ 8ರವರೆಗೆ ನಡೆಯಲಿದೆ.

ವಿತ್ತ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಮಂಗಳವಾರ ಸಭೆ ಸೇರಿ, ಈ ಅಧಿವೇಶನದ ದಿನಾಂಕವನ್ನು ರಾಷ್ಟ್ರಪತಿಗೆ ತಿಳಿಸಲು ನಿರ್ಧರಿಸಿತು. ಆಗಸ್ಟ್ 15ರೊಳಗೆ ಲೋಕಪಾಲ ಕಾಯ್ದೆ ಜಾರಿಯಾಗದಿದ್ದರೆ ಆಮರಣ ಉಪವಾಸ ನಡೆಸುವುದಾಗಿ ನಾಗರಿಕ ಹೋರಾಟಗಾರ, ಗಾಂಧಿ ವಾದಿ ಅಣ್ಣಾ ಹಜಾರೆ ಈಗಾಗಲೇ ಎಚ್ಚರಿಸಿರುವುದು ಇಲ್ಲಿ ಗಮನಾರ್ಹ.

ಹಲವಾರು ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ, ಕೋಲಾಹಲಕಾರಿ ಸಂಸತ್ ಅಧಿವೇಶನ ನಡೆಯಲಿದೆ. ಹೀಗಾಗಿ ಪ್ರತಿಪಕ್ಷಗಳ ವಾಗ್ದಾಳಿ ಎದುರಿಸುವ ನಿಟ್ಟಿನಲ್ಲಿ ಸಂಪೂರ್ಣ ಸಿದ್ಧವಾಗಲು ತಕ್ಕಷ್ಟು ಕಾಲಾವಕಾಶ ಬೇಕಾಗಿದೆ ಎಂಬುದು ಯುಪಿಎ ಅನಿಸಿಕೆಯೆಂಬಂತೆ ತೋರುತ್ತಿದೆ. ಲೋಕಪಾಲ ಮಸೂದೆಗೆ ಸಂಬಂಧಿಸಿ ನಾಗರಿಕ ಸಮಿತಿ ಸದಸ್ಯರ ಮೇಲೆ ಕೆಸರೆರಚಾಟ ಹಾಗೂ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ ಜನತೆಯ ಸತ್ಯಾಗ್ರಹವನ್ನು ಹತ್ತಿಕ್ಕಿದ ಕ್ರಮ, 2ಜಿ ಹಗರಣ ಮುಂತಾದವುಗಳ ಕುರಿತ ಪ್ರಶ್ನೆಗಳ ಸುರಿಮಳೆಗೂ ಆಯಾ ಮುಖಂಡರು ಸಿದ್ಧರಾಗಬೇಕಿದೆ.

ಲೋಕಪಾಲ ಮಸೂದೆ ಕುರಿತಾಗಿ ಜುಲೈ ಮೊದಲ ವಾರದಲ್ಲಿ ಸರ್ವ ಪಕ್ಷ ಸಭೆ ಕರೆಯಲಾಗಿದೆ. ಈ ಅಧಿವೇಶನದಲ್ಲಿ ಲೋಕಪಾಲ ಮಸೂದೆಯಲ್ಲದೆ, ಮಹಿಳಾ ಮೀಸಲಾತಿ, ನ್ಯಾಯಾಂಗದ ಉತ್ತರದಾಯಿತ್ವ ಮತ್ತು ಆಸ್ತಿ ಘೋಷಣೆ ಮಸೂದೆಯೂ ಮಂಡನೆಯಾಗುವ ನಿರೀಕ್ಷೆಗಳಿವೆ.

ಅಧಿವೇಶನವನ್ನು ವಿಳಂಬ ಮಾಡಿದ್ದೇಕೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಬನ್ಸಾಲ್ ಅವರು, "ಈ ಹಿಂದೆಯೂ ಆಗಸ್ಟ್ ತಿಂಗಳಲ್ಲೇ ಮುಂಗಾರು ಅಧಿವೇಶನ ನಡೆದ ಸಾಕಷ್ಟು ಉದಾಹರಣೆಗಳಿವೆ" ಎಂದಷ್ಟೇ ಹೇಳಿದರು.
ಇವನ್ನೂ ಓದಿ