ನಾಗರಿಕ ಸಮಾಜ ಸಲ್ಲಿಸಿರುವ 'ಜನ ಲೋಕಪಾಲ ಕಾಯಿದೆ' ಕರಡು ಪ್ರತಿಯಲ್ಲಿ ಸಾಕಷ್ಟು ಪೊಳ್ಳು ಸಂಗತಿಗಳಿವೆ ಎಂದು ಎತ್ತಿ ತೋರಿಸಿರುವ ಕೇಂದ್ರ ಸರಕಾರವು, "ಸರಕಾರದ ಹೊರಗೆ ಬೇರೊಂದು ಪರ್ಯಾಯ ಸರಕಾರ ಈ ದೇಶಕ್ಕೆ ಬೇಕಾಗಿಲ್ಲ" ಎಂದು ಟೀಕಿಸಿದೆ.
"ನಾವು ಸ್ವತಂತ್ರ, ತನಿಖೆ ಮಾಡಬಲ್ಲ ಮತ್ತು ಶಿಕ್ಷೆ ವಿಧಿಸಬಲ್ಲ ಏಜೆನ್ಸಿ ಪರವಾಗಿದ್ದೇವೆ. ಪ್ರಬಲವಾದ ಲೋಕಪಾಲ ನಮಗೆ ಬೇಕು. ಆದರೆ ಲೋಕಪಾಲರ ಕಾರ್ಯವೈಖರಿಯಲ್ಲೂ ನಿಗಾ ಮತ್ತು ಸಮತೋಲನ ಇರಬೇಕಾಗುತ್ತದೆ" ಎಂದು ಮಂಗಳವಾರ ನಡೆದ ಜಂಟಿ ಕರಡು ಸಮಿತಿಯ 9ನೇ ತಥಾ ಅಂತಿಮ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮಾವನ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಹೇಳಿದರು.
ನಾಗರಿಕ ಸಮಿತಿ ಒಪ್ಪಿಸಿದ 'ಜನ ಲೋಕಪಾಲ ಕಾಯ್ದೆಯ ಕರಡು' ಬಗ್ಗೆ ಉಲ್ಲೇಖಿಸಿದ ಸಿಬಲ್, ನಾಗರಿಕ ಸಮಿತಿ ಜತೆಗೆ ಒಳ್ಳೆಯ ಚರ್ಚೆ ನಡೆದಿದೆ. ಆದರೆ, ಸರಕಾರದ ಹೊರಗೆ ಮತ್ತೊಂದು ಸರಕಾರದಂತಹಾ ಪರ್ಯಾಯ ವ್ಯವಸ್ಥೆಗೆ ನಾವು ಒಪ್ಪಿಲ್ಲ. ಲೋಕಪಾಲರೇ ಭ್ರಷ್ಟರು ಎಂದಾದರೆ ಯಾರು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ತಿಳಿಯಬಯಸಿದರು.
ಯಾರಿಗೂ ಉತ್ತರದಾಯಿಯೇ ಅಲ್ಲದ ಪರ್ಯಾಯ ತನಿಖಾ ಏಜೆನ್ಸಿ ಹೊಂದುವುದು ಸರಿಯೇ? ಎಂದು ಇದೇ ಸಂದರ್ಭದಲ್ಲಿ ಹಾಜರಿದ್ದ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಕೂಡ ಕೇಳಿದರು. ಸರಕಾರವು ಪ್ರಸ್ತಾಪಿಸಿದ ಲೋಕಪಾಲ ಕಾನೂನಿನ ಪ್ರಕಾರ, ಸರಕಾರಿ ಅಧಿಕಾರಿಗಳನ್ನು ಕಿತ್ತೊಗೆಯಲು ಲೋಕಪಾಲರು ಶಿಫಾರಸು ಮಾಡಬಹುದು, ವಿತ್ತೀಯ ಅಧಿಕಾರ ಇರುತ್ತದೆ, ಸ್ವಯಂ ನಿರ್ಧಾರದಿಂದ ದೂರುಗಳನ್ನು ಸ್ವೀಕರಿಸಬಹುದು, ಪೊಲೀಸ್ ಅಧಿಕಾರವನ್ನು ಪ್ರಯೋಗಿಸಬಹುದು ಮತ್ತು ಸ್ವತಂತ್ರ ತನಿಖಾ ಅಧಿಕಾರವೂ ಇರುತ್ತದೆ.