ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೆಹಲಿಗೆ ಬಂದು ಹಜಾರೆ ಉಪವಾಸದಲ್ಲಿ ಭಾಗವಹಿಸ್ತೀನಿ: ಬಾಬಾ
(Ramdev | Challenges | Govt | Vows to join | Anna in Delhi)
ದೆಹಲಿಗೆ ಬಂದು ಹಜಾರೆ ಉಪವಾಸದಲ್ಲಿ ಭಾಗವಹಿಸ್ತೀನಿ: ಬಾಬಾ
ಹರಿದ್ವಾರ/ನವದೆಹಲಿ, ಬುಧವಾರ, 22 ಜೂನ್ 2011( 15:27 IST )
ತಾವು ದೆಹಲಿ ಪ್ರವೇಶಿಸುವುದನ್ನು ಯಾರೂ ತಡೆಯಲಾರರು. ಕೋಟ್ಯಂತರ ಜನರ ಪರವಾಗಿ ನಾವು ಎತ್ತಿರುವ ಧ್ವನಿಯನ್ನು ಅಡಗಿಸುವುದು ಯಾರಿಂದಲೂ ಸಾಧ್ಯವಿಲ್ಲ ಎಂದಿರುವ ಯೋಗ ಗುರು ಬಾಬಾ ರಾಮದೇವ್, ಗಾಂಧೀವಾದಿ ಅಣ್ಣಾ ಹಜಾರೆ ಅವರು ದೆಹಲಿಯಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆಸಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.
ಭ್ರಷ್ಟಾಚಾರ ಹಾಗೂ ಭಾರತೀಯರು ವಿದೇಶದಲ್ಲಿಟ್ಟಿರುವ ಲೆಕ್ಕಕ್ಕೆ ಸಿಗದಷ್ಟು ಕಪ್ಪುಹಣವನ್ನು ದೇಶಕ್ಕೆ ವಾಪಸ್ ತರುವಂತೆ ಆಗ್ರಹಿಸಿ ರಾಮಲೀಲಾ ಮೈದಾನದಲ್ಲಿ ಬಾಬಾ ರಾಮ್‌ದೇವ್ ಅವರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ತಡರಾತ್ರಿ ದಾಳಿ ನಡೆಸಿದ ಪೊಲೀಸರು ಪ್ರತಿಭಟನಾಕಾರರನ್ನು ಅಲ್ಲಿಂದ ಓಡಿಸಿದ್ದರಲ್ಲದೆ, ರಾಮದೇವ್ ಅವರು ದೆಹಲಿ ಪ್ರವೇಶಿಸದಂತೆ ನಿರ್ಬಂಧವನ್ನೂ ವಿಧಿಸಿದ್ದರು.
'ದೇಶದ ಕೋಟ್ಯಂತರ ಜನರ ಪರವಾಗಿ ದನಿ ಎತ್ತಲು ದೆಹಲಿಗೆ ಬರುವವರನ್ನು ಸರಕಾರವು ತಡೆಗಟ್ಟಲು ಸಾಧ್ಯವಿಲ್ಲ' ಎಂದು ಬಾಬಾ ರಾಮ್‌ದೇವ್ ಅವರ ಬಲಗೈ ಬಂಟ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ. ದೆಹಲಿ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಬಲಿಪಶುವಾಗಿದ್ದವರ ಪೈಕಿ ಇವರೂ ಒಬ್ಬರಾಗಿದ್ದರು.
ಲೋಕಪಾಲ್ ಮಸೂದೆ ಜಾರಿಗೊಳಿಸಲು ಆಗ್ರಹಿಸಿ ಈ ಮೊದಲು ಉಪವಾಸ ಸತ್ಯಾಗ್ರಹ ನಡೆಸಿದ್ದ ಅಣ್ಣಾ ಹಜಾರೆ, ಆಗಸ್ಟ್ 1ರಿಂದ ಸೆಪ್ಟೆಂಬರ್ 8ರವರೆಗೆ ನಡೆಯಲಿರುವ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಲೋಕಪಾಲ ಕಾಯ್ದೆ ಜಾರಿಗೆ ತರಲು ಸರಕಾರವು ವಿಫಲವಾದರೆ ಆಗಸ್ಟ್ 16ರಿಂದ ಜಂತರ್ ಮಂತರ್‌ನಲ್ಲಿ ಮತ್ತೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪುನರಪಿ ಹೇಳಿದ್ದರು.
ರಾಮಲೀಲಾ ಮೈದಾನದಲ್ಲಿ ಪ್ರಹಸನ ನಡೆದ ನಂತರ ದೆಹಲಿ ಸರಕಾರವು ಬಾಬಾ ರಾಮ್‌ದೇವ್ ಅವರು ರಾಷ್ಟ್ರದ ರಾಜಧಾನಿ ನವದೆಹಲಿಗೆ ಪ್ರವೇಶಿಸುವುದನ್ನು ನಿಷೇಧಿಸಿತ್ತು. ರಾಮಲೀಲಾ ಮೈದಾನದಲ್ಲಿ ಉಪವಾಸ ಆರಂಭಿಸಿದ್ದ ಬಾಬಾ ರಾಮ್‌ದೇವ್ ಡೆಹ್ರಾಡೂನ್‌ನ ಆಸ್ಪತ್ರೆಯಲ್ಲಿ ಅಂತ್ಯಗೊಳಿಸಿದ್ದರು.
ಹಜಾರೆ ಅವರು ನಡೆಸುತ್ತಿರುವ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ರಾಮ್‌ದೇವ್ ಅವರ ನಿರ್ಧಾರದ ಕುರಿತು ಬಹುತೇಕರು ಚರ್ಚೆ ಆರಂಭಿಸಿದ್ದಾರೆ, ಬಾಬಾ ರಾಮ್‌ದೇವ್ ಅವರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ, ಪೊಲೀಸರ ಬಲಪ್ರಯೋಗಕ್ಕೊಳಗಾಗಿ ದೆಹಲಿಯಿಂದ ಓಡಿಹೋಗಬೇಕಾಗಿ ಬಂದಿದ್ದುದರಿಂದ ಕಳೆದುಹೋಗಿದ್ದ ವರ್ಚಸ್ಸನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ರಾಮದೇವ್ ಈಗ ಹಜಾರೆಗೆ ಬೆಂಬಲ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ.