ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲ: ಸರಕಾರದ ಕರಡು ಮಸೂದೆಯಲ್ಲಿ ಎಲ್ಲ ಮಿಸ್ಸಿಂಗ್
(Lokpal panel | Joint drafting committee | Anna Team | Corruption)
ಲೋಕಪಾಲ: ಸರಕಾರದ ಕರಡು ಮಸೂದೆಯಲ್ಲಿ ಎಲ್ಲ ಮಿಸ್ಸಿಂಗ್
ನವದೆಹಲಿ, ಬುಧವಾರ, 22 ಜೂನ್ 2011( 17:47 IST )
ಕಾಂಗ್ರೆಸ್ ನೇತೃತ್ವದ ಸರಕಾರ ಸಿದ್ಧಪಡಿಸಿದ ಲೋಕಪಾಲ ಮಸೂದೆಯ ಕರಡು ಪ್ರತಿಯು ಸಿಬಿಐಗಿಂತಲೂ ದುರ್ಬಲವಾದ ಸಂಸ್ಥೆ ಎಂದು ನಾಗರಿಕ ಸಮಿತಿ ಸದಸ್ಯರಾದ ಅಣ್ಣಾ ಹಜಾರೆ ಅವರ ಬಳಗ ದೂರಿಕೊಂಡಿದ್ದಾರೆ. ಹಾಗಾದರೆ, ಅಧಿಕಾರಸ್ಥರು, ರಾಜಕಾರಣಿಗಳು ಸಿದ್ಧಪಡಿಸಿರುವ ಈ ಕರಡು ಮಸೂದೆಯಲ್ಲಿ ಏನಿದೆ? ಜನರ ಲೋಕಪಾಲ ತಮ್ಮದು ಎಂದು ಹೇಳಿಕೊಳ್ಳುತ್ತಿರುವ ಅಣ್ಣಾ ಹಜಾರೆ ಬಳಗವು ರೂಪಿಸಿದ ಕರಡು ಪ್ರತಿಯಲ್ಲೇನಿದೆ ಎಂಬ ಕುರಿತಾದ ತುಲನೆ ಇಲ್ಲಿದೆ.
ಸರಕಾರದ ಕರಡಿನಲ್ಲಿ ಪ್ರಧಾನಿ ಹುದ್ದೆಯನ್ನು, ಉನ್ನತ ನ್ಯಾಯಾಂಗವನ್ನು ಹಾಗೂ ಸಂಸತ್‌ನೊಳಗೆ ಸಂಸದರ ವರ್ತನೆಯನ್ನು ಪ್ರಸ್ತಾಪಿತ ಲೋಕಪಾಲದಿಂದ ದೂರವಿಡಲಾಗಿದೆ.
ಲೋಕಪಾಲದ ವ್ಯಾಪ್ತಿಯ ಬಗ್ಗೆ ಸರ್ಕಾರದ ಮಸೂದೆ ಹೀಗೆ ಹೇಳುತ್ತದೆ: "ಈ ಕಾಯ್ದೆಯ ಅನ್ಯ ನಿಬಂಧನೆಗಳಿಗೆ ಅನುಗುಣವಾಗಿ, ಲೋಕಪಾಲರು ಭ್ರಷ್ಟಾಚಾರದ ಯಾವುದೇ ದೂರುಗಳು, ಆರೋಪಗಳನ್ನು ತನಿಖೆ ಮಾಡಬಹುದು. ಆದರೆ, ಪ್ರಧಾನಮಂತ್ರಿ ಹೊರತಾಗಿ ಕೇಂದ್ರ ಸಂಪುಟದ ಹಾಲಿ ಅಥವಾ ಮಾಜಿ ಸಚಿವರು ಮತ್ತು ಹಾಲಿ ಹಾಗೂ ಮಾಜಿ ಸಂಸದರು ಮಾತ್ರ ಇದರ ವ್ಯಾಪ್ತಿಗೆ ಬರುತ್ತಾರೆ."
ಆದರೆ, ಸಂಸತ್ತಿನ ಒಳಗೆ ಅಥವಾ ಸಂಬಂಧಿತ ಯಾವುದೇ ಸಮಿತಿಯಲ್ಲಿ ಸಂಸತ್‌ನ ಯಾವುದೇ ಸದಸ್ಯರನ್ನು ಒಳಗೊಂಡ ಯಾವುದೇ ಸಂಗತಿಗಳು, ಪ್ರಕರಣಗಳ ಕುರಿತು ಮತ್ತು ಸದಸ್ಯರ ಮೇಲೆ ಲೋಕಪಾಲರು ತನಿಖೆ ಮಾಡುವಂತಿಲ್ಲ.
ಆದರೆ, ನಾಗರಿಕ ಸಮಿತಿಯ ಜನ ಲೋಕಪಾಲ ಕರಡಿನಲ್ಲಿ, "ಪ್ರಧಾನಿ ಹಾಗೂ ಸಂಪುಟದ ಯಾವುದೇ ಸದಸ್ಯರು, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟಿನ ಯಾವುದೇ ನ್ಯಾಯಾಧೀಶರು ಮತ್ತು ಯಾವುದೇ ಸಂಸದರ ವಿರುದ್ಧ ಲೋಕಪಾಲದ ಏಳು ಮಂದಿ ಸದಸ್ಯರ ಸಮಿತಿಯ ಅನುಮತಿ ಪಡೆಯದೆ ಯಾವುದೇ ಕ್ರಮ, ತನಿಖೆಯನ್ನು ಕೈಗೊಳ್ಳುವಂತಿಲ್ಲ" ಎಂದು ಹೇಳಲಾಗಿದೆ. ನಾಗರಿಕ ಸಮಿತಿ ಕರಡಿನ ಪ್ರಕಾರ, ಸಾರ್ವಜನಿಕ ಅಧಿಕಾರಿಗಳಿಗೆ ಶಿಫಾರಸುಗಳನ್ನು ಮಾಡುವ, ಭ್ರಷ್ಟಾಚಾರ ತಗ್ಗಿಸಲು ಹಾಗೂ ಭ್ರಷ್ಟರನ್ನು ಬಯಲಿಗೆಳೆಯುವವರ ರಕ್ಷಣೆಗಾಗಿ ಅವರ ಕಾರ್ಯವೈಖರಿಯಲ್ಲಿ ಬದಲಾವಣೆಗೆ ಸೂಚಿಸುವ ಅಧಿಕಾರ ಲೋಕಪಾಲರಿಗಿರುತ್ತದೆ.
ಭ್ರಷ್ಟ ಮಾರ್ಗದ ಮೂಲಕ ಯಾವುದೇ ಲೀಸ್, ಪರವಾನಗಿ, ಅನುಮತಿ, ಗುತ್ತಿಗೆ ಅಥವಾ ಒಪ್ಪಂದಗಳು ನಡೆದಿದ್ದರೆ ಅವುಗಳನ್ನು ರದ್ದುಪಡಿಸುವ ಅಥವಾ ಬದಲಾಯಿಸುವ ಅಧಿಕಾರದೊಂದಿಗೆ, ಸಂಬಂಧಿದ ಸಂಸ್ಥೆ, ಕಂಪನಿ, ಗುತ್ತಿಗೆದಾರ ಅಥವಾ ಭ್ರಷ್ಟಾಚಾರದಲ್ಲಿ ಭಾಗಿಯಾದ ಯಾವುದೇ ವ್ಯಕ್ತಿಯನ್ನು ಕಪ್ಪು ಪಟ್ಟಿಯಲ್ಲಿ ಇರಿಸುವ ಅಧಿಕಾರವೂ ಲೋಕಪಾಲರಿಗೆ ನೀಡಬೇಕು ಎಂಬ ಅಂಶ ನಾಗರಿಕ ಸಮಾಜದ ಲೋಕಪಾಲ ಕರಡು ಮಸೂದೆಯಲ್ಲಿದೆ.
ಸಿಬಿಐನ ಭ್ರಷ್ಟಾಚಾರ-ವಿರೋಧಿ ಘಟಕವನ್ನು ಲೋಕಪಾಲದೊಂದಿಗೆ ವಿಲೀನ ಮಾಡುವ ಕುರಿತು ನಾಗರಿಕ ಸಮಿತಿ ಕರಡಿನ ಪ್ರಕಾರ, ಕೇಂದ್ರಕ್ಕೆ ಈ ಘಟಕದ ಮೇಲೆ ಯಾವುದೇ ಅಧಿಕಾರ ಅಥವಾ ನಿಯಂತ್ರಣ ಇರುವುದಿಲ್ಲ. ಈ ಮೊದಲು, ಮುಖ್ಯ ವಿಚಕ್ಷಣಾ ಆಯೋಗ (ಸಿವಿಸಿ)ಯನ್ನು ಲೋಕಪಾಲದೊಂದಿಗೆ ವಿಲೀನ ಮಾಡಬೇಕೆಂದು ನಾಗರಿಕ ಸಮಿತಿ ಒತ್ತಾಯಿಸುತ್ತಿತ್ತು. ಆದರೆ ಅಂತಿಮ ಕರಡಿನಲ್ಲಿ ಈ ಒತ್ತಾಯ ಇಲ್ಲ.
ಸಿಬಿಐಯನ್ನು ಲೋಕಪಾಲದ ವ್ಯಾಪ್ತಿಯಡಿ ತಂದರೆ ಬೇರೆ ಬೇರೆ ವಿಷಯಗಳ ಬಗ್ಗೆ ನೋಡಿಕೊಳ್ಳುವ ಸಲುವಾಗಿ ಕಾರ್ಯಾಂಗಕ್ಕೆ ಇರುವ ತನ್ನದೇ ಆದ ತನಿಖಾ ಸಂಸ್ಥೆಯನ್ನು ಬಿಟ್ಟುಕೊಟ್ಟಂತಾಗುತ್ತದೆ ಎಂಬುದು ಸರಕಾರದ ವಾದ.
ನಾಗರಿಕ ಸಮಿತಿ ಕರಡಿನಲ್ಲಿ "ಸ್ವಯಂಪ್ರೇರಿತವಾಗಿ ಮತ್ತು ಸಕಾಲಿಕ" ಮಾಹಿತಿ ನೀಡುವ, ಲಂಚ ಕೊಡುವಾತನ ಮೇಲೆ ಕ್ರಮ ಕೈಗೊಳ್ಳುವಂತಿಲ್ಲ ಎಂಬ ಪ್ರಸ್ತಾಪವಿದೆ.
ಲೋಕಪಾಲರನ್ನು ನೇಮಿಸುವ ಆಯ್ಕೆ ಸಮಿತಿ ಬಗ್ಗೆ ನಾಗರಿಕ ಸಮಿತಿಯ ಪ್ರಕಾರ, ಪ್ರಧಾನಿ, ಲೋಕಸಭೆಯ ಪ್ರತಿಪಕ್ಷ ನಾಯಕ, ಸುಪ್ರೀಂ ಕೋರ್ಟಿನ ಇಬ್ಬರು ನ್ಯಾಯಾಧೀಶರು, ಇಬ್ಬರು ಹೈಕೋರ್ಟ್ ಮುಖ್ಯ ನ್ಯಾಯಾಧೀಶರು, ಮುಖ್ಯ ಚುನಾವಣಾ ಆಯುಕ್ತರು, ಸಿಎಜಿ ಹಾಗೂ ಲೋಕಪಾಲದ ಹಿಂದಿನ ಮುಖ್ಯಸ್ಥರು ಇರಬೇಕು. ಆದರೆ, ಸರಕಾರದ ಮಸೂದೆಯ ಆಯ್ಕೆ ಸಮಿತಿಯಲ್ಲಿ, ಪ್ರಧಾನಿ, ಪ್ರತಿಪಕ್ಷ ನಾಯಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೇ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು.
ಫೋನ್ ಕದ್ದಾಲಿಸುವ ಅಧಿಕಾರ, ಭ್ರಷ್ಟಾಚಾರ ತಗ್ಗಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಕಾರ್ಯವೈಖರಿ ಬದಲಾವಣೆಗೆ ಶಿಫಾರಸು ಮುಂತಾದ ಅಂಶಗಳೆಲ್ಲವೂ ಸರಕಾರದ ಕರಡು ಪ್ರತಿಯಲ್ಲಿ ಇಲ್ಲ. ಅಲ್ಲದೆ, ಸೂಕ್ತ ತನಿಖೆಗಾಗಿ ಹಾಗೂ ಎಲ್ಲ ಸಂಸದರು ಸಲ್ಲಿಸಿದ ಆಸ್ತಿ ಘೋಷಣೆಯ ಹೇಳಿಕೆಗಳ ತನಿಖೆಗಾಗಿ ಅತ್ಯಾಧುನಿಕ ಉಪಕರಣಗಳನ್ನು ಹೊಂದುವ ಅಧಿಕಾರವನ್ನೂ ಹಜಾರೆ ಬಣ ಕೇಳಿತ್ತು.
ಜನ ಲೋಕಪಾಲ ಮಸೂದೆ ಕರಡಿನ ಪ್ರಕಾರ, ಭಾರತೀಯ ಟೆಲಿಗ್ರಾಫ್ ಕಾಯ್ದೆಯ ಐದನೇ ವಿಭಾಗದಡಿ, ಲೋಕಪಾಲ ಪೀಠಕ್ಕೆ ದೂರವಾಣಿ, ಇಂಟರ್ನೆಟ್ ಮತ್ತಿತರ ಮಾಧ್ಯಮಗಳ ಸಂವಹನಗಳ ಕದ್ದಾಲಿಕೆ ಅಧಿಕಾರವನ್ನು ನೀಡಬೇಕು.