ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಿಗ್ವಿಜಯ್‌ ರಾಹುಲ್‌ ಗಾಂಧಿಯ 'ಸ್ಟೆಪ್ನಿ': ಉಮಾ ಭಾರತಿ (Digvijay | Stepney | Rahul Gandhi | Uma Bharti)
ಇತ್ತೀಚೆಗಷ್ಟೇ ಬಿಜೆಪಿಗೆ ಮರಳಿ, ನೇರವಾಗಿ ಕಾಂಗ್ರೆಸ್‌ನ 'ದೊಡ್ಡ ಬಾಯಿ' ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶದ ಕಾಂಗ್ರೆಸ್‌ ಉಸ್ತುವಾರಿ ದಿಗ್ವಿಜಯ್‌ ಸಿಂಗ್‌ ಅವರ ಮೇಲೆ ಸಮರ ಸಾರಿರುವ ಬಿಜೆಪಿಯ ಉತ್ತರ ಪ್ರದೇಶ ಘಟಕದ ಉಸ್ತುವಾರಿ ನಾಯಕಿ ಉಮಾ ಭಾರತಿ, ದಿಗ್ವಿಜಯ್ ರಾಹುಲ್‌ ಗಾಂಧಿಯವರ 'ಸ್ಟೆಪ್ನಿ' ಎಂದು ಬಣ್ಣಿಸಿದ್ದು, ಉತ್ತರ ಪ್ರದೇಶದಲ್ಲಿ ಅವರಿಗೆ ಯಾವುದೇ ಬೆಲೆ ಇಲ್ಲ ಎಂದು ಹೇಳಿದ್ದಾರೆ.

ಅವರು (ದಿಗ್ವಿಜಯ್‌) ರಾಹುಲ್‌ ಗಾಂಧಿಯ ಸ್ಟೆಪ್ನಿ. ಉತ್ತರ ಪ್ರದೇಶದಲ್ಲಿ ದಿಗ್ವಿಜಯ್‌ಗೆ ಯಾವುದೇ ಬೆಲೆ ಇಲ್ಲ. ಅವರು ಹೋದಲ್ಲೆಲ್ಲಾ ನಾನು ಅವರನ್ನು ಸೋಲಿಸುತ್ತಿರುವುದು ಕಾಕತಾಳೀಯ. ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ಅವರು ಪಕ್ಷದ ಉಸ್ತುವಾರಿಯಾಗಿದ್ದ ಸಂದರ್ಭದಲ್ಲಿ ನನ್ನಿಂದ ಸೋಲು ಅನುಭವಿಸಿದ್ದಾರೆ. ಈಗ ಉತ್ತರ ಪ್ರದೇಶದ ಸರದಿ' ಎಂದು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಚುನಾವಣೆಗಳು ನಡೆಯಲಿವೆ.

ದಿಗ್ವಿಜಯ್‌ ಸಿಂಗ್‌ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಉಮಾ, ದಿಗ್ವಿಜಯ್ ಹೇಳಿಕೆಯನ್ನು ಅವರ ಪಕ್ಷವೇ ಒಪ್ಪುವುದಿಲ್ಲ. ಅವರು ಯಾವಾಗಲಾದರೂ ಹೇಳಿಕೆ ನೀಡಿದರೆ, ಅವರ ಪಕ್ಷದ ವಕ್ತಾರರು ಪತ್ರಿಕಾಗೋಷ್ಠಿ ಕರೆದು ಅದನ್ನು ನಿರಾಕರಿಸುತ್ತಾರೆ. ಇದನ್ನು ನೋಡಿದರೆ, ಪಕ್ಷವು ಅವರನ್ನು ಅವರಷ್ಟಕ್ಕೇ ಬಿಟ್ಟಿದೆ. ಅವರ ನಾಲಿಗೆಯ ಮೇಲೆ ಕಾಂಗ್ರೆಸ್‌ ಪಕ್ಷಕ್ಕೆ ಹಿಡಿತವೇ ಇಲ್ಲವೆಂಬಂತೆ ತೋರುತ್ತದೆ ಎಂದು ಹೇಳಿದ್ದಾರೆ.

ಪಕ್ಷವು ಹಿಂದುತ್ವ ಹಾಗೂ ರಾಮ ಮಂದಿರ ನಿರ್ಮಾಣದ ಬಗ್ಗೆ ನಂಬಿಕೆ ಹೊಂದಿದ್ದು, ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಈ ವಿಷಯಗಳು ಪಕ್ಷದ ಕಾರ್ಯಸೂಚಿಯಾಗಿರುವುದಿಲ್ಲ ಎಂದು ಉಮಾ ಸ್ಪಷ್ಟಪಡಿಸಿದರು.

'ನಾನು ಹಿಂದುತ್ವ ಮತ್ತು ರಾಮನ ಬಗ್ಗೆ ನಂಬಿಕೆಯಿಟ್ಟಿದ್ದೇನೆ. ನಮಗೆ ಇಲ್ಲಿ ರಾಮರಾಜ್ಯ ನಿರ್ಮಾಣವಾಗಬೇಕು. ರಾಮ ಮಂದಿರ ಕುರಿತು ನಮಗೆ ನಂಬಿಕೆಯಿದೆ. ಆದರೆ ಇದು ರಾಜ್ಯದಲ್ಲಿನ ಪಕ್ಷದ ರಾಜಕೀಯ ಕಾರ್ಯಸೂಚಿಯಲ್ಲ. ನಾವು ಭ್ರಷ್ಟಾಚಾರ ಮತ್ತು ಅಪರಾಧ ಪ್ರಕರಣಗಳ ಬಗ್ಗೆ ಗಮನ ಹರಿಸುತ್ತೇವೆ. ಇದೇ 2012ರಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ನಮ್ಮ ಪಕ್ಷದ ಕಾರ್ಯಸೂಚಿಯಾಗಿರುತ್ತದೆ' ಎಂದು ಉಮಾ ತಿಳಿಸಿದ್ದಾರೆ.
ಇವನ್ನೂ ಓದಿ