ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಪವಾಸ ಮಾಡಿದ್ರೆ ನಿಮಗೂ ಬಾಬಾ ಗತಿ: ಅಣ್ಣಾಗೆ ದಿಗ್ವಿಜಯ್ ಧಮ್ಕಿ
(Anna Hazare | Indefinite Fast | Lokpal Bill | Digvijay Singh)
ಭ್ರಷ್ಟಾಚಾರದ ವಿರುದ್ಧ ಮತ್ತು ಪ್ರಬಲವಾದ ಲೋಕಪಾಲ ಮಸೂದೆ ಅಂಗೀಕಾರಕ್ಕೆ ಒತ್ತಾಯಿಸಿ ಮತ್ತೊಮ್ಮೆ ಉಪವಾಸ ಮಾಡಿದರೆ, ಯೋಗ ಗುರು ಬಾಬಾ ರಾಮದೇವ್ ಅವರಿಗೆ ರಾಮಲೀಲಾ ಮೈದಾನದಲ್ಲಿ ನೀಡಿದ 'ಟ್ರೀಟ್‌ಮೆಂಟನ್ನೇ' ನೀಡಬೇಕಾದೀತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಎಚ್ಚರಿಸಿದ್ದಾರೆ.
ದೇಶದಲ್ಲಿ ಸಾಂವಿಧಾನಿಕ ವ್ಯವಸ್ಥೆಯೇ ಪರಮೋಚ್ಚವಾಗಿದೆ ಮತ್ತು ದೇಶದ ಜನತೆಗೆ ಉತ್ತರದಾಯಿಯೂ ಆಗಿದೆ. ಆದರೆ ಅಣ್ಣಾ ಹಜಾರೆ ಬಳಗದ ನಾಲ್ವರು ಸದಸ್ಯರು ಈ ದೇಶದ ಜನರಿಗೆ ಉತ್ತರದಾಯಿಯೇನಲ್ಲ ಎಂದು ಟೀಕಿಸಿದ ದಿಗ್ವಿಜಯ್, ಆಗಸ್ಟ್ 16ರಿಂದ ಉಪವಾಸ ಮಾಡದಂತೆ ಅಣ್ಣಾ ಹಜಾರೆಯನ್ನು ಆಗ್ರಹಿಸಿದ್ದಾರೆ. "ನಾನು ಉಪವಾಸ ಕೂರುತ್ತೇನೆ ಎಂದು ಅಣ್ಣಾ ಸಾಹೇಬ್ ಹೇಳುತ್ತಾರೆ. ಅವರು ಹಾಗೆ ಮಾಡಿದರೆ, ಬೇರೆಯವರು (ಬಾಬಾ ರಾಮದೇವ್) ಅನುಭವಿಸಿದ ಗತಿಯೇ ಆಗುತ್ತದೆ" ಎಂದು ಎಚ್ಚರಿಸಿದ್ದಾರೆ.
ಜೂನ್ 3-4ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪವಾಸ ನಡೆಸಿ ರಾತ್ರಿ ಮಲಗಿ ನಿದ್ರಿಸುತ್ತಿದ್ದವರ ಮೇಲೆ ಪೊಲೀಸರನ್ನು ಛೂ ಬಿಟ್ಟಿದ್ದ ಕೇಂದ್ರ ಸರಕಾರವು, ಅಲ್ಲಿಂದ ಅವರೆಲ್ಲರನ್ನೂ ಓಡಿಸಿ ಸತ್ಯಾಗ್ರಹವನ್ನು ಬಗ್ಗು ಬಡಿಯುವಲ್ಲಿ ಯಶಸ್ವಿಯಾಗಿತ್ತು. ಬಾಬಾ ರಾಮದೇವ್ ಮತ್ತು ಕೆಲವು ಬೆಂಬಲಿಗರು ಪೊಲೀಸರಿಂದ ತಪ್ಪಿಸಿಕೊಂಡು ಹೋಗಿ, ಭ್ರಷ್ಟಾಚಾರ ಹಾಗೂ ಕಾಳ ಧನದ ವಿರುದ್ಧ ಹರಿದ್ವಾರದಲ್ಲಿ ಉಪವಾಸ ಮುಂದುವರಿಸಿದ್ದರು.
ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ-ವಿರೋಧೀ ಆಂದೋಲನವನ್ನು ಬೆಂಬಲಿಸುತ್ತಿರುವ ಬಿಜೆಪಿ ವಿರುದ್ಧವೂ ಹರಿಹಾಯ್ದ ದಿಗ್ವಿಜಯ್, ಬಿಜೆಪಿ ಆರು ವರ್ಷ ಅಧಿಕಾರದಲ್ಲಿತ್ತು. ಭ್ರಷ್ಟಾಚಾರ ವಿರುದ್ಧ ಒಂದೇ ಒಂದು ಕಾನೂನನ್ನಾದರೂ ಅದು ಜಾರಿಗೊಳಿಸಿದೆಯೇ ಎಂದು ಪ್ರಶ್ನಿಸಿದರು.