ಉತ್ತರ ಪ್ರದೇಶದ ಮಾಯಾವತಿ ಸರಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ "ಭಾವೀ ಪ್ರಧಾನಿ" ರಾಹುಲ್ ಗಾಂಧಿ ಅವರು ಭಟ್ಟಾ-ಪರ್ಸಾಲ್ ಗ್ರಾಮಗಳಲ್ಲಿ ರೈತ ಚಳವಳಿ ನಡೆಯುತ್ತಿದ್ದಲ್ಲಿಗೆ ಭೇಟಿ ನೀಡಿ, "ಮಹಿಳೆಯರು ಅತ್ಯಾಚಾರಕ್ಕೀಡಾಗುತ್ತಿದ್ದಾರೆ, ಹಲವಾರು ಮಂದಿಯ ಹತ್ಯೆಯಾಗಿದೆ" ಎಂದೆಲ್ಲಾ ಹೇಳಿಕೆ ನೀಡಿದ್ದು ಸುಳ್ಳು ಎಂಬುದು ಮಾನವ ಹಕ್ಕುಗಳ ಆಯೋಗದ ತನಿಖೆಯಿಂದ ಸ್ಪಷ್ಟವಾಗಿದ್ದು, ಕಾಂಗ್ರೆಸ್ ಮತ್ತೆ ಮುಜುಗರಕ್ಕೆ ಸಿಲುಕಿದೆ.
ಭಟ್ಟಾ-ಪರ್ಸಾಲ್‌ನಲ್ಲಿ ರೈತರ ಆಂದೋಲನ ಮತ್ತು ಪೊಲೀಸರ ಕ್ರಮದ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ತನಿಖೆ ನಡೆಸಿ 800 ಪುಟಗಳ ಮಧ್ಯಂತರ ವರದಿಯನ್ನು ಸೋಮವಾರ ಸಲ್ಲಿಸಿದ್ದು, ಅದರಲ್ಲಿ ಲಾಖಿಂಪುರ ಖೇರಿ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅತ್ಯಾಚಾರಗಳು ನಡೆದಿಲ್ಲ ಮತ್ತು ರಾಹುಲ್ ಗಾಂಧಿ ಹೇಳಿದಷ್ಟು ಸಂಖ್ಯೆಯಲ್ಲಿ ರೈತರು ಪ್ರಾಣ ಕಳೆದುಕೊಂಡಿಲ್ಲ ಎಂದೂ ಹೇಳಲಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಯೋಗದ ವರದಿಯು ಮಾಯಾವತಿ ಸರಕಾರಕ್ಕೆ ಕೊಂಚ ನೆಮ್ಮದಿ ತಂದಿದೆ.
ಆದರೆ, ಈ ಪ್ರದೇಶಗಳಲ್ಲಿ ಪೊಲೀಸರು ಸಾಕಷ್ಟು ದೌರ್ಜನ್ಯ ಎಸಗಿದ್ದಾರೆ ಎಂದು ವರದಿ ಆಪಾದಿಸಿದೆ. ಲಾಖಿಂಪುರ ಖೇರಿ ಠಾಣೆಯಲ್ಲಿ ಅಪ್ರಾಪ್ತ ಬಾಲಕಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆಸಿಲ್ಲ ಎಂದು ತನಿಖೆ ಕಂಡುಕೊಂಡಿದೆ. ಅಂತಿಮ ವರದಿಯನ್ನು ಆಯೋಗವು ಈ ವಾರಾಂತ್ಯದಲ್ಲಿ ಸಿದ್ಧಪಡಿಸುವ ಸಾಧ್ಯತೆಗಳಿವೆ.
ಭಟ್ಟಾ-ಪರ್ಸಾಲ್ ಗ್ರಾಮಗಳಲ್ಲಿ ಹೆದ್ದಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿದ್ದು, ಇದಕ್ಕೆ ಕಡಿಮೆ ಬೆಲೆ ನೀಡಲಾಗಿದೆ ಎಂದು ರೈತರು ಪ್ರತಿಭಟಿಸುತ್ತಿದ್ದರು. ಈ ಹಂತದಲ್ಲಿ ಪೊಲೀಸರು ಮತ್ತು ರೈತರ ನಡುವೆ ಸಂಘರ್ಷ ನಡೆದಿತ್ತು. ಆ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, "ಅಲ್ಲಿ ಜನರು ಕೊಲೆಗೀಡಾಗುತ್ತಿದ್ದಾರೆ. ಗ್ರಾಮಗಳೊಳಗೆ 70 ಅಡಿ ಬೂದಿ ರಾಶಿಯಲ್ಲಿ ಹಲವಾರು ಮೃತದೇಹಗಳಿವೆ. ಹಳ್ಳಿಯ ಎಲ್ಲರಿಗೂ ಇದು ಗೊತ್ತು. ಮಹಿಳೆಯರು ಅತ್ಯಾಚಾರಕ್ಕೀಡಾಗುತ್ತಿದ್ದಾರೆ. ಜನರನ್ನು ಮನಸೋಇಚ್ಛೆ ಥಳಿಸಲಾಗುತ್ತಿದೆ ಮತ್ತು ಮನೆಗಳನ್ನು ಧ್ವಂಸ ಮಾಡಲಾಗುತ್ತಿದೆ" ಎಂದೆಲ್ಲಾ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ಕರೆದು ಆರೋಪಿಸಿದ್ದರು.
ಈಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವೇ ತನಿಖೆ ನಡೆಸಿ ಸಲ್ಲಿಸಿರುವ ವರದಿಯು ಕಾಂಗ್ರೆಸ್ ಪಕ್ಷವನ್ನು, ವಿಶೇಷವಾಗಿ ರಾಹುಲ್ ಗಾಂಧಿ ಅವರ ವರ್ಚಸ್ಸನ್ನು ಮುಜುಗರಕ್ಕೆ ಸಿಲುಕಿಸಿದೆ.