ಕಟ್ಟು ನಿಟ್ಟಿನ ಲೋಕಪಾಲ ಕಾಯ್ದೆ ಜಾರಿಗೆ ಬರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿ, ಸರಕಾರ ಪ್ರಸ್ತಾಪಿಸಿರುವ ಕರಡು ಲೋಕಪಾಲ ಮಸೂದೆಯು ಭ್ರಷ್ಟಾಚಾರ ನಿಗ್ರಹಿಸುವ ಬದಲಾಗಿ, ಈ ಪಿಡುಗಿನ ವಿರುದ್ಧ ದೂರು ನೀಡುವವರ ಮೇಲೆಯೇ ಕ್ರಮ ಕೈಗೊಳ್ಳುವ ಉದ್ದೇಶ ಹೊಂದಿದೆ ಎಂದು ಉದಾಹರಣೆಗಳ ಸಹಿತವಾಗಿ ಆರೋಪಿಸಿದೆ.
ಲೋಕಪಾಲ ವ್ಯಾಪ್ತಿಯಿಂದ ಅಧಿಕಾರಶಾಹಿಯ ದೊಡ್ಡ ಗುಂಪನ್ನೇ ಹೊರಗಿಟ್ಟಿರುವ ಮತ್ತು ಕೇಸು ದಾಖಲಿಸುವ ಹಾಗೂ ಚಾರ್ಜ್‌ಶೀಟ್ ಸಲ್ಲಿಸುವ ಮೊದಲು, ಆರೋಪಿಗಳ ಅಭಿಪ್ರಾಯ ಕೇಳಲು ಅನುವು ಮಾಡಿಕೊಡುವ ಸರಕಾರದ ಪ್ರಸ್ತಾಪವು ತೀರಾ ಕ್ಷುಲ್ಲಕ ಎಂದು ಟೀಂ ಅಣ್ಣಾ ಅಭಿಪ್ರಾಯಪಟ್ಟಿದೆ.
ಸರಕಾರೇತರ ಸಂಘಟನೆ (ಎನ್‌ಜಿಒ)ಗಳನ್ನು ಗ್ರಾಮೀಣ ಮಟ್ಟದಿಂದಲೇ ಲೋಕಪಾಲದ ವ್ಯಾಪ್ತಿಗೆ ಸೇರಿಸಲಾಗಿರುವ ಸರಕಾರದ ಕರಡಿನಲ್ಲಿ, ಹೆಚ್ಚಿನ ಜನ ಸೇವಕರನ್ನು (ಜನಪ್ರತಿನಿಧಿಗಳು, ತಳ ಮಟ್ಟದ ಅಧಿಕಾರಿಗಳು) ಸೇರಿಸಿಕೊಳ್ಳದಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿರುವ ಅಣ್ಣಾ ಬಳಗವು, ಲೋಕಪಾಲ ಸಂಸ್ಥೆಯು ರೈತರು, ಕಾರ್ಮಿಕರು, ಬುಡಕಟ್ಟು ಜನಾಂಗದವರು ಅಥವಾ ಭ್ರಷ್ಟಾಚಾರ ವಿರೋಧೀ ಆಂದೋಲನಗಳನ್ನು ಪ್ರತಿನಿಧಿಸುವ ಕಾರ್ಯಕರ್ತರೆಲ್ಲರನ್ನೂ ಹಿಡಿದು ಶಿಕ್ಷಿಸಬಹುದಾಗಿದೆ ಎಂಬ ಬಗ್ಗೆ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಭ್ರಷ್ಟರು ಹಾಗೂ ಭ್ರಷ್ಟಾಚಾರವನ್ನು ಗುರಿಯಾಗಿರಿಸುವ ಬದಲಾಗಿ ಸರಕಾರದ ಲೋಕಪಾಲವು ಭ್ರಷ್ಟಾಚಾರದ ವಿರುದ್ಧ ದೂರು ನೀಡಿದವರನ್ನೇ ಗುರಿಯಾಗಿರಿಸುವಂತಿದೆ ಎಂದು ಅಣ್ಣಾ ಬಳಗದ ವಿಶ್ಲೇಷಣಾತ್ಮಕ ಹೇಳಿಕೆಯು ಗುರುವಾರ ತಿಳಿಸಿದೆ.
ಎಲ್ಲ ಜನ ಸೇವಕರು - 40 ಲಕ್ಷ ಕೇಂದ್ರ ಸರಕಾರಿ ಉದ್ಯೋಗಿಗಳು ಮತ್ತು ಸುಮಾರು 80 ಲಕ್ಷ ರಾಜ್ಯ ಸರಕಾರಿ ನೌಕರರು - ಎಲ್ಲರೂ ಲೋಕಪಾಲ ವ್ಯಾಪ್ತಿಯಡಿಗೆ ಬಂದರೆ, ಲೋಕಪಾಲಕ್ಕೆ ಕೇಸುಗಳ ರಾಶಿಯೇ ಬಂದು ಬೀಳುತ್ತದೆ. ಇದು ಕಷ್ಟದ ಕಾರ್ಯವಾಗಿರುವುದರಿಂದ, ಜಂಟಿ ಕಾರ್ಯದರ್ಶಿಗಿಂತ ಮೇಲ್ಪಟ್ಟ ಸುಮಾರು 65 ಸಾವಿರ ಉದ್ಯೋಗಿಗಳನ್ನು (ಸರಕಾರಿ ನೌಕರರು) ಮಾತ್ರವೇ ಲೋಕಪಾಲ ವ್ಯಾಪ್ತಿಗೆ ತರುತ್ತೇವೆ ಎಂದು ಸರಕಾರ ಹೇಳುತ್ತದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ, ರಾಜ್ಯ ಮಟ್ಟದ, ಗ್ರಾಮ ಮಟ್ಟದ, ಕೇಂದ್ರ ಮಟ್ಟದ್ದೇ ಆಗಿರಲಿ, ಎಲ್ಲ ಎನ್‌ಜಿಒಗಳನ್ನು ಲೋಕಪಾಲ ವ್ಯಾಪ್ತಿಗೆ ಸೇರಿಸಲಾಗಿದೆ. ಇದೆಲ್ಲಿಯ ನ್ಯಾಯ? ಸರಕಾರದಲ್ಲೇ ಭ್ರಷ್ಟಾಚಾರ ಹೆಚ್ಚಿರುವಾಗ ಅದರ ನೌಕರರನ್ನು ಮಾತ್ರ ಹೊರಗಿಡುವುದು ಯಾವ ನ್ಯಾಯ ಎಂಬುದು ಅಣ್ಣಾ ಬಳಗದ ಆಕ್ಷೇಪ.
ಹೀಗಾಗಿ, ಯಾವುದೋ ಹಳ್ಳಿಯೊಂದರ ಪಂಚಾಯತಿನಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಆರ್‌ಟಿಐ ಉಪಯೋಗಿಸಿ ಒಂದು ಯುವಕರ ತಂಡವು (ಸರಕಾರೇತರ ಸಂಘಟನೆ ಕಟ್ಟಿಕೊಂಡು) ಬಯಲಿಗೆ ತಂದರೆ, ಲೋಕಪಾಲರು ಈ ಯುವಕರನ್ನೇ ಶಿಕ್ಷಿಸಬಹುದಾಗಿದೆ. ಆದರೆ ಪಂಚಾಯತ್ ಅಧ್ಯಕ್ಷ ಅಥವಾ ಬಿಡಿಒ ಅಥವಾ ಅವರ ಭ್ರಷ್ಟಾಚಾರದ ಬಗೆಗೆ ಕ್ರಮ ಕೈಗೊಳ್ಳಲು ಅವಕಾಶವಿರುವುದಿಲ್ಲ ಎಂಬುದು ಅವರ ಆಕ್ಷೇಪದ ಒಳಗಿರುವ ಆತಂಕ.
ಈ ಬಗ್ಗೆ ಉದಾಹರಣೆ ನೀಡುತ್ತಾ ಅವರು, ದೆಹಲಿ ಸರಕಾರಿ ಅಧಿಕಾರಿಗಳ ಮೇಲೆ ಲೋಕಪಾಲರಿಗೆ ಕ್ರಮ ಕೈಗೊಳ್ಳುವ ಅಧಿಕಾರ ಇರುವುದಿಲ್ಲ. ಆದರೆ ರಾಜಧಾನಿಯಲ್ಲಿ ರಾಮಲೀಲೆ ಅಥವಾ ದುರ್ಗಾಪೂಜೆಗೆ ದೇಣಿಗೆ ಸಂಗ್ರಹಿಸುವ ಪುಟ್ಟ ಪುಟ್ಟ ಸಂಘಟನೆಗಳೆಲ್ಲವೂ ಲೋಕಪಾಲದ ಪರಿಧಿಗೆ ಬರುತ್ತವೆ ಎಂದು ಹೇಳಿದ್ದಾರೆ.
ಎನ್‌ಜಿಒಗಳ ಮೇಲೂ ತನಿಖೆ ಮಾಡಬಾರದು ಎಂದರ್ಥವಲ್ಲ. ಸರಕಾರವು ತನ್ನ ನೌಕರರಿಗೆ ಕೇಸನ್ನು ಸಮರ್ಥಿಸಿಕೊಳ್ಳಲು ನೆರವು ನೀಡುತ್ತದೆ. ಆದರೆ ಜನ ಸಾಮಾನ್ಯರು ತಮ್ಮನ್ನು ತಾವೇ ಕೋರ್ಟಿನಲ್ಲಿ ಸಮರ್ಥಿಸಿಕೊಳ್ಳಬೇಕಾಗುತ್ತದೆ. ಆಗ ದೂರು ನೀಡಿದವರಿಗೆ ಭ್ರಷ್ಟ ಸರಕಾರಿ ನೌಕರರಿಗಿಂತಲೂ ಕಠಿಣವಾದ ಶಿಕ್ಷೆ ದೊರೆಯುವ ಸಾಧ್ಯತೆಗಳು ಹೆಚ್ಚು. ಒಂದು ವೇಳೆ, ವಿಶೇಷ ನ್ಯಾಯಾಲಯವು ಆರೋಪವು ಸುಳ್ಳು ಎಂದು ಸಾರಿದರೆ, ನಾಗರಿಕನಿಗೆ ಕನಿಷ್ಠ 2 ವರ್ಷ ಶಿಕ್ಷೆ ದೊರೆಯುತ್ತದೆ. ಆದರೆ, ಸರಕಾರಿ ನೌಕರನ ಮೇಲೆ ಭ್ರಷ್ಟಾಚಾರ ಆರೋಪವು ಸಾಬೀತಾದರೆ, ಅವರಿಗೆ ಕನಿಷ್ಠ 6 ತಿಂಗಳು ಮಾತ್ರ ಶಿಕ್ಷೆ ಇರುತ್ತದೆ ಎಂದು ಅಣ್ಣಾ ಬಳಗ ಹೇಳಿದೆ.