ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಸರ್ಕಾರದ ಲೋಕಪಾಲ ಕರಡು' ಇನ್ನೂ ಸಿದ್ಧವಾಗಿಲ್ಲ: ಮೊಯ್ಲಿ ಸ್ಪಷ್ಟನೆ (Lokpal Bill | Law Minister | Veerappa Moily | Anna Hazare | Corruption)
'ಸರ್ಕಾರದ ಲೋಕಪಾಲ ಕರಡು' ಇನ್ನೂ ಸಿದ್ಧವಾಗಿಲ್ಲ: ಮೊಯ್ಲಿ ಸ್ಪಷ್ಟನೆ
ನವದೆಹಲಿ, ಶನಿವಾರ, 25 ಜೂನ್ 2011( 09:07 IST )
ಸರಕಾರವು ಪ್ರಬಲವಾದ ಲೋಕಪಾಲ ಕಾಯ್ದೆಯನ್ನು ವಿಳಂಬಿಸಲು ಎಲ್ಲ ರೀತಿಯಲ್ಲಿಯೂ ಪ್ರಯತ್ನ ಪಡುತ್ತದೆ ಎಂಬ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮತ್ತು ನೂರು ಕೋಟಿ ಜನತೆಯ ಆತಂಕದ ನಡುವೆಯೇ, ಮಸೂದೆಯಿನ್ನೂ ಸಿದ್ಧವಾಗಿಲ್ಲ ಎಂದು ಕೇಂದ್ರ ಸರಕಾರ ಇಂದು ಸ್ಪಷ್ಟಪಡಿಸಿದೆ.
ಹೌದು, ಸರಕಾರದ ಲೋಕಪಾಲ ಮಸೂದೆಯಿನ್ನೂ ಅಂತಿಮಗೊಂಡಿಲ್ಲ. ನಾವು ಸಿದ್ಧಪಡಿಸಿದ್ದು ಸರಕಾರದ ಪ್ರತಿನಿಧಿಗಳ ಕರಡು ಮಸೂದೆಯಷ್ಟೇ. ಅದನ್ನು ಸರಕಾರದ ಕರಡು ಆಗಿಸುವ ಮೊದಲು ನಾಗರಿಕ ಸಮಾಜದಿಂದ ಬರುವ ಹೊಸತಾದ ಸಲಹೆಗಳನ್ನು ಸೇರಿಸಿಕೊಳ್ಳುವ ನಿಟ್ಟಿನಲ್ಲಿ ನಾವಿನ್ನೂ ಮುಕ್ತವಾಗಿದ್ದೇವೆ ಎಂದು ಜಂಟಿ ಕರಡು ಸಮಿತಿಯ ಸದಸ್ಯರಲ್ಲೊಬ್ಬರಾದ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ಶುಕ್ರವಾರ ತಿಳಿಸಿದ್ದಾರೆ.
ಜೂನ್ 30ರಂದು ಮಸೂದೆ ಸಿದ್ಧವಾಗಬೇಕು ಮತ್ತು ಈ ಬಾರಿಯ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅದು ಮಂಡನೆಯಾಗಿ ಕಾಯ್ದೆ ರೂಪ ಪಡೆಯಬೇಕು. ಆಗಸ್ಟ್ 15ರೊಳಗೆ ಕಾಯ್ದೆ ಜಾರಿಯಾಗುವುದು ಖಚಿತವಿಲ್ಲವಾದುದರಿಂದ ಆಮರಣಾಂತ ಉಪವಾಸ ನಡೆಸುವುದಾಗಿ ಅಣ್ಣಾ ಹಜಾರೆ ಬಳಗವು ಈಗಾಗಲೇ ಘೋಷಿಸಿರುವುದು ಇಲ್ಲಿ ಸ್ಮರಣಾರ್ಹ.
ಹೀಗಾಗಿ, ಲೋಕಪಾಲ ಮಸೂದೆಯ ಕರಡು ಸಿದ್ಧವಾಗಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಿದ್ದ ಮೊಯ್ಲಿ, ಸರಕಾರದ ಪ್ರತಿನಿಧಿಗಳು ಹಾಗೂ ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿ ಸಿದ್ಧಪಡಿಸಿದ ಎರಡೂ ಕರಡುಗಳನ್ನು ಜುಲೈ 3ರಂದು ಕರೆಯಲಾಗಿರುವ ಸರ್ವಪಕ್ಷಗಳ ಸಭೆಯ ಮುಂದಿಡುವ "ಸಾಧ್ಯತೆಗಳಿವೆ" ಎಂದು ಹೇಳಿದ್ದಾರೆ. ಅಂತೆಯೇ, ಎಲ್ಲ ಮುಖ್ಯಮಂತ್ರಿಗಳಿಗೂ ಸರಕಾರವು ಈ ಎರಡೂ ಕರಡುಗಳನ್ನು ಕಳುಹಿಸಿಕೊಡುವ ಸಾಧ್ಯತೆಗಳೂ ಇವೆ ಎಂದೂ ಮೊಯ್ಲಿ ತಿಳಿಸಿದ್ದಾರೆ.