ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆರಳೆಣಿಕೆಯ ಅಣ್ಣಾ ಬೆಂಬಲಿಗರಿಗೆ ಮಣಿಯಬೇಡಿ: ಯುಪಿಎಗೆ ಕಾಂಗ್ರೆಸ್
(Lokpal, Anna Hazare, Corruption, Congress, UPA, CWC, Manmohan Singh)
ಬೆರಳೆಣಿಕೆಯ ಅಣ್ಣಾ ಬೆಂಬಲಿಗರಿಗೆ ಮಣಿಯಬೇಡಿ: ಯುಪಿಎಗೆ ಕಾಂಗ್ರೆಸ್
ನವದೆಹಲಿ, ಶನಿವಾರ, 25 ಜೂನ್ 2011( 15:21 IST )
ನಾಗರಿಕ ಸಮಿತಿಯ ಬೆರಳೆಣಿಕೆಯಷ್ಟು ಮಂದಿ ಹೋರಾಟಗಾರರ ಒತ್ತಡಕ್ಕೆ ಮಣಿಯಬೇಡಿ ಎಂದು ಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ವಿವಾದಾತ್ಮಕ ಲೋಕಪಾಲ ಮಸೂದೆ ಕುರಿತಾಗಿ ಶುಕ್ರವಾರ ಸಂಜೆ ಸಭೆ ಸೇರಿದ ಕಾಂಗ್ರೆಸ್‌ನ ನೀತಿ ನಿರೂಪಣಾ ಘಟಕವಾದ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ), ಜುಲೈ 3ರಂದು ಸರ್ವ ಪಕ್ಷಗಳ ಸಭೆಯ ಬಳಿಕವಷ್ಟೇ ಸರಕಾರದ ಅಧಿಕೃತ ಕರಡು ಮಸೂದೆ ಸಿದ್ಧವಾಗಲಿದೆ ಎಂದು ಸ್ಪಷ್ಟಪಡಿಸಿದೆ.
ಪ್ರಸ್ತಾಪಿತ ಲೋಕಪಾಲ ಕಾಯ್ದೆಯಡಿ ಪ್ರಧಾನಿ ಹುದ್ದೆಯ ಸೇರ್ಪಡೆ ಕುರಿತು ಪಕ್ಷದಲ್ಲೇ ಕೆಲವೊಂದು ಅಪಸ್ವರಗಳು ಕೇಳಿಬಂದಿರುವುದರಿಂದ, ಸರಕಾರದ ಅಭಿಪ್ರಾಯ ಮತ್ತು ಕಾಂಗ್ರೆಸ್ ಅಭಿಪ್ರಾಯ ಎಂದು ಪ್ರತ್ಯೇಕವಾಗಿ ಬಿಂಬಿಸುವ ಬದಲು, ಜುಲೈ 3ರ ಸಭೆಯ ಬಳಿಕ ಸಹಮತದ ನಿರ್ಧಾರ ಪಾಲಿಸಲು ಸಿಡಬ್ಲ್ಯುಸಿ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಜನಾರ್ದನ ದ್ವಿವೇದಿ, ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಭಾಷಣದಲ್ಲಿ ತಾವು ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಕಾಲದಿಂದ ಕಾಲಕ್ಕೆ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುತ್ತಲೇ ಬಂದಿರುವುದನ್ನು ನೆನಪಿಸಿದರು. ಅಲ್ಲದೆ, ಸರಕಾರವು ಅದರ ನಿಗ್ರಹಕ್ಕೆ ಕೈಗೊಂಡ ಕ್ರಮಗಳ ಬಗೆಗೂ ಬೆಳಕು ಚೆಲ್ಲಿದರು. ಅದೇ ರೀತಿ, ಪ್ರಧಾನಿ ಕೂಡ ತಮ್ಮ ಭಾಷಣದಲ್ಲಿ, ಭ್ರಷ್ಟಾಚಾರ ನಿಗ್ರಹಕ್ಕೆ ಬೇಕು ಬೇಕಾದ ಕ್ರಮಗಳನ್ನೆಲ್ಲಾ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿರುವುದಾಗಿ ಮಾಹಿತಿಯಿತ್ತರು.
ಅದೇ ರೀತಿ, ದಿಗ್ವಿಜಯ್ ಸಿಂಗ್ ಅವರು ತಮ್ಮ ಭಾಷಣ ಸಂದರ್ಭದಲ್ಲಿ, ಅಣ್ಣಾ ಹಜಾರೆ ಮತ್ತು ಬಾಬಾ ರಾಮದೇವ್ ಅವರು ಆರೆಸ್ಸೆಸ್ ಹಾಗೂ ಬಿಜೆಪಿಯ ಮುಖವಾಡ ಎಂಬುದನ್ನು ಪುನರಪಿ ಹೇಳಿದರಲ್ಲದೆ, ಪಕ್ಷವು ಈ ದೊಡ್ಡ ಬೆದರಿಕೆಯನ್ನು ನಿಗ್ರಹಿಸುವ ಅನಿವಾರ್ಯತೆಯಿದೆ ಎಂದರು.