ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಿಗ್ವಿಜಯ್‌ಗೆ ಗುದ್ದು: ವಕ್ತಾರರು ಮಾತ್ರ ಮಾತಾಡ್ಲಿ ಎಂದ ಕಾಂಗ್ರೆಸ್ (Spokespersons | Will air | Congress views | Sonia)
ಪಕ್ಷದ ವಕ್ತಾರರು ಮಾತ್ರ ಹೇಳಿಕೆಯನ್ನು ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಶುಕ್ರವಾರ ಹೇಳಿದ್ದಾರೆ. ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಜಿ) ಸಭೆಯಲ್ಲಿ ಅವರು ಈ ಹೇಳಿಕೆ ನೀಡಿರುವುದು ಮನಸೋ ಇಚ್ಚೆ ಹೇಳಿಕೆ ನೀಡಿ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುತ್ತಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್‌ ಅವರ ಬಾಯಿ ಮುಚ್ಚಿಸಲು ಎನ್ನಲಾಗುತ್ತಿದೆ.

'ಪಕ್ಷದ ವಕ್ತಾರರು ಹಾಗೂ ಮಾಧ್ಯಮ ವಿಭಾಗದ ಮುಖ್ಯಸ್ಥ ಜನಾರ್ದನ ದ್ವಿವೇದಿ ಮಾತ್ರ ಪಕ್ಷದ ಚಿಂತನೆಗಳ ಕುರಿತು ಮಾತನಾಡಬಹುದು' ಎಂದು ಸಭೆಯ ಮುಕ್ತಾಯದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಹೇಳಿದ್ದಾರೆ. ಲೋಕಪಾಲ ಕರಡಿನ ಕುರಿತು ಪಕ್ಷದ ಮುಖಂಡರು ಚರ್ಚಿಸುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಮುಕುಲ್‌ ವಾಸ್ನಿಕ್‌, ಪಕ್ಷದಲ್ಲಿರುವ "ಭಿನ್ನ ಧ್ವನಿ"ಗಳ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಸಭೆಯಲ್ಲಿ ಈ ಸೂಚನೆ ಹೊರಬಿದ್ದಿದೆ.

ಈ ಸಭೆಯ ಕೆಲವೇ ಕ್ಷಣಗಳಲ್ಲಿ ಸೋನಿಯಾ ಗಾಂಧಿ ಹಾಗೂ ಮನಮೋಹನ ಸಿಂಗ್‌ ಅವರು ಪ್ರತ್ಯೇಕ ಸಭೆ ನಡೆಸಿದರು. ಸಭೆಯಲ್ಲಿ ಸಂಪುಟ ಪುನಾರಚನೆ ಅಥವಾ ಸರಕಾರ ಮತ್ತು ಪಕ್ಷದಲ್ಲಿರುವ ಭಿನ್ನಾಭಿಪ್ರಾಯಗಳ ಕುರಿತು ಚರ್ಚಿಸಲಾಯಿತೋ ಎಂಬುದರ ಕುರಿತು ತಿಳಿದು ಬಂದಿಲ್ಲ.

ಇತ್ತೀಚೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್‌ ಅವರು ಮನಸೋ ಇಚ್ಚೆ ಹೇಳಿಕೆ ನೀಡುವ ಮೂಲಕ ಸರಕಾರವನ್ನು ಪೇಚಿಗೆ ಸಿಲುಕಿಸಿದ್ದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಗಮನಕ್ಕೆ ಬಂದಿತ್ತು. ರಾಹುಲ್‌ ಗಾಂಧಿ ಪ್ರಧಾನಿಯಾಗುವ ಎಲ್ಲ ಅರ್ಹತೆಗಳನ್ನೂ ಹೊಂದಿದ್ದಾರೆ ಎಂದು ದಿಗ್ವಿಜಯ್‌ ಸಿಂಗ್‌ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಆನಂತರ ತಮ್ಮ ಅಭಿಪ್ರಾಯಗಳನ್ನು ತಪ್ಪಾಗಿ ಗ್ರಹಿಸಲಾಗಿದೆ, ಕೇಂದ್ರದ ನಾಯಕತ್ವದ ಬದಲಾವಣೆ ಕುರಿತು ತಾವು ಏನೂ ಹೇಳಿರಲಿಲ್ಲ ಎಂದಿದ್ದರು ದಿಗ್ವಿಜಯ್‌.

ವಿತ್ತ ಸಚಿವ ಪ್ರಣಬ್‌ ಮುಖರ್ಜಿ ಅವರ ಕಚೇರಿಯಲ್ಲಿ ಕಳ್ಳಗಿವಿಗಳು ಇವೆ ಎಂದು ಕೇಳಿಬಂದಿದ್ದ ಆಪಾದನೆಯ ಕುರಿತು ಪ್ರತಿಕ್ರಿಯಿಸಿದ್ದ ದಿಗ್ವಿಜಯ್‌ ಈ ಕುರಿತು ತನಿಖೆಯಾಗಬೇಕು ಎಂದೂ ಹೇಳಿ, ಸರಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದರು. ಆದರೆ ಪ್ರಣಬ್ ಅವರೇ, ಇದೇನೂ ದೊಡ್ಡ ಸುದ್ದಿಯಲ್ಲ, ಕಚೇರಿಯಲ್ಲಿ ಚೂಯಿಂಗ್ ಗಮ್ ಅಂಟಿಸಿರುವುದನ್ನು ಗುಪ್ತಚರ ಮಂಡಳಿ ತನಿಖೆಯ ಮೂಲಕ ಪತ್ತೆ ಹಚ್ಚಿದೆ ಎಂದಿದ್ದರು.

ಈ ಮೊದಲು ಪಕ್ಷದ ಪದಾಧಿಕಾರಿಗಳು ತಮಗೆ ನೀಡಿರುವ ಹೊಣೆಗಾರಿಕೆಯ ಮಿತಿಯನ್ನು ಅರಿಯಬೇಕು ಎಂದು ಕಾಂಗ್ರೆಸ್ ಸುತ್ತೋಲೆ ಹೊರಡಿಸಿ, ದಿಗ್ವಿಜಯ ಸಿಂಗ್‌ ಅವರ ಬಾಯಿಗೆ ಬೀಗ ಹಾಕಲು ಪ್ರಯತ್ನಿಸಿದ್ದರೂ, ಅವರು ವಿವಿಧ ವಿಷಯಗಳ ಕುರಿತು ಹೇಳಿಕೆ ನೀಡುವುದನ್ನು ಮುಂದುವರಿಸಿದ್ದರು. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇದೇ ಮೊದಲ ಬಾರಿಗೆ ಈ ವಿಷಯದ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ರಾಹುಲ್‌ ಗಾಂಧಿ ಯಾವುದೇ ಮಾತನಾಡಲಿಲ್ಲ.

ಇದಕ್ಕೂ ಮೊದಲು, ಸರಕಾರದ ಕ್ರಮಗಳು ಗಾಂಧಿವಾದಿ ಅಣ್ಣಾ ಹಜಾರೆ ಅವರ "ಬೆರಳೆಣಿಕೆಯಷ್ಟು" ಮಂದಿ ಬೆಂಬಲಿಗರ ಒತ್ತಡಕ್ಕೆ ಮಣಿಯುತ್ತಿದೆ ಎಂಬ ಭಾವನೆ ಮೂಡಿದಂತಾಗಿದೆ ಎಂದು ದಿಗ್ವಿಜಯ್ ಸಿಂಗ್ ಸಹಿತ ಹೆಚ್ಚಿನೆಲ್ಲ ಭಾಷಣಕಾರರು ಟೀಕಿಸಿದ್ದರು. ಆಗ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಮನಮೋಹನ್ ಸಿಂಗ್, ಸರಕಾರ ಏನೇ ಮಾಡಿದರೂ ಅದಕ್ಕೆ ತಾನೇ ಹೊಣೆ ಎಂದು ಹೇಳಿಕೊಂಡರೆಂದು ಮೂಲಗಳು ತಿಳಿಸಿವೆ.
ಇವನ್ನೂ ಓದಿ