ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಬ್ರೇಕಿಂಗ್' ಸುದ್ದಿ: ಮೌನ 'ಬ್ರೇಕ್' ಮಾಡಲಿರುವ ಪ್ರಧಾನಿ (PM Silence | PM to Speak | Manmohan Singh | UPA | Congress)
PTI
ದೇಶದಲ್ಲಿ ಏನೇ ಆದರೂ ನಮ್ಮ ಪ್ರಧಾನ ಮಂತ್ರಿ ಬಾಯಿ ಬಿಡುತ್ತಿಲ್ಲ ಎಂಬ ಟೀಕೆಗಳಿಂದ ಎಚ್ಚೆತ್ತುಕೊಂಡಿರುವ ಮನಮೋಹನ್ ಸಿಂಗ್, ಈಗ ಮಾತನಾಡಲು ತೀರ್ಮಾನಿಸಿದ್ದಾರೆ ಮತ್ತು ಪ್ರತೀ ವಾರವೂ ಅವರು ಮಾತನಾಡುತ್ತಾರೆ. ಇದರ ಆರಂಭಿಕ ಹಂತವಾಗಿ ಬುಧವಾರ ಅವರು ಕೆಲವು ಪತ್ರಿಕೆಗಳ ಆಯ್ದ ಸಂಪಾದಕರೆದುರು ಮಾತನಾಡಲು ಮುಂದಾಗಿದ್ದಾರೆ.

ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರಾದ್ಯಂತ ವಾಹಿನಿಗಳ ಮೂಲಕ ಪ್ರಸಾರವಾದ ಕೇವಲ 3 ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದರು. ಅದರ ಹೊರತಾಗಿ ಭಾರತೀಯ ಮಾಧ್ಯಮಗಳಿಗೆ ಸಂದರ್ಶನ ನೀಡಿದ ಉದಾಹರಣೆಗಳು ಗೋಚರಿಸುತ್ತಿಲ್ಲ. ಕೊನೆಯ ಬಾರಿಗೆ ಅವರು ನಾಲ್ಕು ತಿಂಗಳ ಹಿಂದೆ ಕೆಲವೊಂದು ಆಯ್ದ ಟಿವಿ ಚಾನೆಲ್‌ಗಳ ಸಂಪಾದಕರೊಂದಿಗೆ ಮಾತ್ರ ಮಾತನಾಡಿದ್ದರು.

ಹಣದುಬ್ಬರ, ಭ್ರಷ್ಟಾಚಾರ, ಭಯೋತ್ಪಾದನೆ, ಬೆಲೆ ಏರಿಕೆ ಮುಂತಾದ ಅದೆಷ್ಟೋ ವಿಷಯಗಳು ದೇಶವನ್ನು ಬಾಧಿಸುತ್ತಿರುವಾಗ ಪ್ರಧಾನಿ ಸೊಲ್ಲೆತ್ತುತ್ತಿಲ್ಲ ಎಂದು ವೆಬ್‌ದುನಿಯಾ ಕೂಡ ಇಲ್ಲಿ ಆತಂಕವೊಂದನ್ನು ವ್ಯಕ್ತಪಡಿಸಿತ್ತು. ಪ್ರತಿಪಕ್ಷಗಳು ಈ ಕುರಿತು ಈಗಾಗಲೇ ಗದ್ದಲವೆಬ್ಬಿಸಿವೆ. ಆಗಸ್ಟ್ 1ರಿಂದ ಸಂಸತ್ತಿನ ಮುಂಗಾರು ಅಧಿವೇಶನವು ಕೋಲಾಹಲಭರಿತವಾಗಿರುವ ಎಲ್ಲ ಸಾಧ್ಯತೆಗಳಿರುವುದರಿಂದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಹಾಗೂ ಯುಪಿಎ ಸದಸ್ಯರು ಪ್ರಧಾನಿ ಮಾಧ್ಯಮಗಳೊಂದಿಗೆ ಹೆಚ್ಚು ಹೆಚ್ಚು ಸಂವಹನ ನಡೆಸಬೇಕಾದ ಅಗತ್ಯವಿದೆ ಎಂಬುದನ್ನು ಮನಗಂಡಿದ್ದು, ಅದರ ಫಲವಾಗಿ ಬುಧವಾರದಿಂದ ಆರಂಭಿಸಿ ಪ್ರಧಾನಿ ಮಾಧ್ಯಮಗಳಿಗೆ ಹೇಳಿಕೆ ನೀಡಲಿದ್ದಾರೆ.

ಪ್ರಧಾನಿಯವರು ಅಸಹಜವಾಗಿ ಮೌನ ತಾಳಿದ್ದಾರೆ, ಅವರ ಕೈಗಳನ್ನು ಕಟ್ಟಿ ಹಾಕಲಾಗಿದೆ, ಜನರನ್ನು ಎದುರಿಸಲು ಭಯಪಡುತ್ತಿದ್ದಾರೆ ಎಂಬೆಲ್ಲಾ ಆತಂಕಗಳ ನಡುವೆ, ಅವರ ಸಾಮರ್ಥ್ಯದ ಮೇಲೂ ಪ್ರಶ್ನಾರ್ಥಕ ಚಿಹ್ನೆ ಮೂಡಿರುವುದರಿಂದ ಈ ರೀತಿಯ ಸಂವಹನ ವ್ಯವಸ್ಥೆ ರೂಪಿಸಲಾಗಿದೆ ಎಂದು ತರ್ಕಿಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ 2ಜಿ ಹಗರಣ, ಕಾಮನ್ವೆಲ್ತ್ ಗೇಮ್ಸ್ ಹಗರಣ, ಲೋಕಪಾಲ ಮಸೂದೆ ವಿವಾದ, ರಾಮಲೀಲಾ ಮೈದಾನದಲ್ಲಿ ಬಾಬಾ ರಾಮದೇವ್ ಬಳಗದ ಮೇಲೆ ಲಾಠಿ ಪ್ರಹಾರ... ಇತ್ಯಾದಿ ವಿಷಯಗಳಿಂದಾಗಿ ಯುಪಿಎ ಸರಕಾರದ ವರ್ಚಸ್ಸು ಕುಂದಿದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಇಂಥದ್ದೊಂದು ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಇವನ್ನೂ ಓದಿ