ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿದ್ದೆಗಣ್ಣಲ್ಲಿ ಆರು ದಿನದ ಹಸುಳೆಯನ್ನು ನೀರಿಗೆಸೆದ ತಾಯಿ! (Woman sleepwalks | 6-day-old son | Tambaram | police | woman)
ನಿದ್ದೆಗಣ್ಣಿನಲ್ಲಿ ನಡೆಯುವ ಅಭ್ಯಾಸವಿದ್ದ 22ರ ಹರೆಯದ ಗೃಹಿಣಿಯೊಬ್ಬಳು ತನ್ನದೇ ಆರು ದಿನದ ಗಂಡು ಮಗುವನ್ನು ನೀರಿನ ಟ್ಯಾಂಕಿಗೆ ಎಸೆದಿರುವ ಘಟನೆ ಇಲ್ಲಿನ ತಾಂಬರಮ್ ಸಮೀಪದ ನೆಡುನ್‌ಕುಂದ್ರಂ ಎಂಬಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ರೇವತಿ ಎಂಬಾಕೆ ನಿದ್ರೆಯಲ್ಲಿ ನಡೆಯುವ ಕಾಯಿಲೆಯಿಂದ ಬಳಲುತ್ತಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಜೂನ್ 28ರಂದು ಮಧ್ಯರಾತ್ರಿ ಹೊತ್ತಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಎಸ್.ದಾನಸೇಖರ್ (21) ಹಾಗೂ ಎಂ.ರೇವತಿ (22) ದಂಪತಿಗೆ ಜೂನ್ 22ರಂದು ಗಂಡು ಮಗು ಹುಟ್ಟಿತ್ತು. ಎರಡು ದಿನಗಳ ಹಿಂದಷ್ಟೇ ತಾಯಿ ಮತ್ತು ಮಗು ಆಸ್ಪತ್ರೆಯಿಂದ ಮನೆಗೆ ವಾಪಸ್ ಆಗಿದ್ದರು. ಸೋಮವಾರ ರಾತ್ರಿ ರೇವತಿ ತನ್ನ ಮಗು ಹಾಗೂ ಅತ್ತೆ ಎಸ್.ರಾಣಿ (45), ನಾದಿನಿ ಎಸ್.ಮೀನಾಂಬಿಕಾ (20) ಜತೆ ಕೋಣೆಯೊಂದರಲ್ಲಿ ಮಲಗಿದ್ದಳು. ಪತಿ ದಾನಸೇಖರ್ ಮತ್ತು ಆತನ ಸಹೋದರ ಎಸ್.ಜ್ಞಾನಸೇಖರನ್ (20) ಮತ್ತೊಂದು ಕೋಣೆಯಲ್ಲಿ ನಿದ್ದೆಗೆ ಶರಣಾಗಿದ್ದರು. ಆಗ ರೇವತಿ ನಿದ್ದೆಯಲ್ಲೇ ಮಗುವನ್ನೆತ್ತಿಕೊಂಡು ಹೊರಹೋಗಿ, ಮನೆಯ ಬಳಿಯಿದ್ದ ನೀರಿನ ಟ್ಯಾಂಕಿಯಲ್ಲಿ ಹಾಕಿಬಂದು ಮಲಗಿದ್ದಳು.

ನಂತರ ಸುಮಾರು 11-30ರ ಹೊತ್ತಿಗೆ ಎಚ್ಚೆತ್ತುಕೊಂಡ ರೇವತಿ ಮಗು ಇಲ್ಲದ್ದನ್ನು ಕಂಡು ಕೂಗಾಡ ತೊಡಗಿದಾಗ, ಉಳಿದವರು ಎಚ್ಚರಗೊಂಡಿದ್ದರು. ಕೂಡಲೇ ಹುಡುಕಾಟ ನಡೆಸಿ, 13 ನಿಮಿಷಗಳ ನಂತರ ಮಗು ಟ್ಯಾಂಕಿಯಲ್ಲಿ ಇರುವುದು ಪತ್ತೆಯಾಗಿತ್ತು. ಆದರೆ ಅಷ್ಟರಲ್ಲಾಗಲೇ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಘಟನೆ ನಂತರ ಮಂಗಳವಾರ ಪತಿ ದಾನಸೇಖರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮಗುವಿನ ಶವ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದರು. ರೇವತಿಯೇ ಮಗುವನ್ನು ಕೊಂದಿರುವುದಾಗಿ ಕುಟುಂಬದ ಸದಸ್ಯರು ಆರೋಪಿಸಿದ್ದರು. ಆಕೆಗೆ ತಾನು ನಿದ್ದೆಗಣ್ಣಿನಲ್ಲಿ ನಡೆಯುವ ಅಭ್ಯಾಸ ಇದೆ ಎಂದು ಗೊತ್ತಿತ್ತು. ತಾನು ತನಗೆ ಅರಿವಿಲ್ಲದೆ ಮಗುವನ್ನು ನೀರಿಗೆ ಟ್ಯಾಂಕ್‌ಗೆ ಹಾಕಿರುವ ಬಗ್ಗೆ ರೇವತಿ ತಪ್ಪೊಪ್ಪಿಕೊಂಡಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಅಂತೂ ಸುಮಾರು ಹತ್ತು ಗಂಟೆಗಳ ಕಾಲ ಆಕೆಯನ್ನು ಕೂಲಂಕಷ ತನಿಖೆಗೆ ಒಳಪಡಿಸಿದ ನಂತರ ಬಂಧಿಸಿದ್ದರು. ಬಳಿಕ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
ಇವನ್ನೂ ಓದಿ