ಪಿಲಿಭಿತ್ ಸಂಸದ ವರುಣ್ ಗಾಂಧಿ ಅವರು ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲೂ ತಮ್ಮ ಹಿರಿಯ ಸಹೋದರ ರಾಹುಲ್ ಗಾಂಧಿಗಿಂತ ಮುಂದಿದ್ದಾರೆ. ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಅವರು ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಶೇ.78ರಷ್ಟು ಅನುದಾನವನ್ನು ಬಳಕೆ ಮಾಡಿಕೊಂಡಿದ್ದು, ಉತ್ತರ ಪ್ರದೇಶದ ಎಲ್ಲ ಸಂಸದರ ಪೈಕಿ ಅತಿ ಹೆಚ್ಚು ಅನುದಾನವನ್ನು ಬಳಕೆ ಮಾಡಿಕೊಂಡ ಸಂಸದ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ, ಕಾಂಗ್ರೆಸ್ ವಂಶದ ಕುಡಿ ರಾಹುಲ್ ಗಾಂಧಿ ಅವರು ತಮ್ಮ ಕ್ಷೇತ್ರವಾದ ಅಮೇಠಿಯಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಬರೇ ಶೇ.6ರಷ್ಟನ್ನು ಮಾತ್ರ ಬಳಸಿಕೊಂಡಿದ್ದಾರೆ.
ವರುಣ್ ಗಾಂಧಿ ಅವರ ತಾಯಿ ಮನೇಕ ಗಾಂಧಿ ಅವರೂ ಸಹ ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲಿ ತಮ್ಮ ವಾರಗಿತ್ತಿ ಸೋನಿಯಾ ಗಾಂಧಿಯನ್ನು ಹಿಂದಿಕ್ಕಿದ್ದಾರೆ. ಮನೇಕಾ ಗಾಂಧಿ ಅವರು ತಮ್ಮ ಕ್ಷೇತ್ರ ಅವೋನ್ಲಾ ಅಭಿವೃದ್ಧಿಗಾಗಿ ಶೇ.71.5ರಷ್ಟು ನಿಧಿಯನ್ನು ಬಳಸಿಕೊಂಡಿದ್ದಾರೆ. ರಾಯ್ ಬರೇಲಿ ಕ್ಷೇತ್ರದ ಸಂಸದೆಯಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶೇ. 41.78ರಷ್ಟು ಅನುದಾನವನ್ನು ಮಾತ್ರ ಬಳಸಿಕೊಂಡಿದ್ದಾರೆ. ಮಂಜೂರಾಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿಯೂ ಉತ್ತರ ಪ್ರದೇಶದ ಸಂಸದರು ನಿರಾಸಕ್ತಿ ಹೊಂದಿದ್ದಾರೆ.
ಉದಾಹರಣೆಗೆ ಅಮೇಠಿಯಲ್ಲಿ, ರಾಹುಲ್ ಗಾಂಧಿ ಅವರು 2009-10 ರಲ್ಲಿ 11 ಯೋಜನೆಗಳಿಗೆ ಶಿಫಾರಸು ಮಾಡಿದ್ದು, ಈ ಪೈಕಿ ಫೆಬ್ರವರಿ 2010ರೊಳಗಾಗಿ ಒಂದೇ ಒಂದು ಯೋಜನೆಯೂ ಪೂರ್ಣವಾಗಿಲ್ಲ. ಇವರಿಗಿಂತ ಬಿಜೆಪಿಯ ವರುಣ್ ಗಾಂಧಿ ಅವರೇ ಸ್ವಲ್ಪ ಉತ್ತಮ. ವರುಣ್ ಗಾಂಧಿ ಪ್ರತಿನಿಧಿಸುತ್ತಿರುವ ಪಿಲಿಭಿತ್ ಕ್ಷೇತ್ರದಲ್ಲಿ ಅವರು ಶಿಫಾರಸು ಮಾಡಿದ 39 ಕಾಮಗಾರಿಗಳ ಪೈಕಿ 33 ಕಾಮಗಾರಿಗಳು ಮಂಜೂರಾಗಿವೆ. ಈ ಪೈಕಿ ಜನವರಿ 2010ರ ಅಂತ್ಯದಲ್ಲಿ ಒಂದು ಯೋಜನೆ ಪೂರ್ಣಗೊಂಡಿದೆ.