ಏನಾದರೂ ಮಾಡಿ ಜನ ಸಂಖ್ಯೆ ಏರಿಕೆಯಾಗದಂತೆ ನೋಡಿಕೊಳ್ಳಿ ಎಂದು ದೇಶದ ಬಗ್ಗೆ ಕಾಳಜಿಯುಳ್ಳವರು ಅಂಗಲಾಚುತ್ತಿದ್ದಾರೆ. ಅದಕ್ಕಾಗಿ ಕೆಲವರಂತೂ ಏನಾದರೂ ಮಾಡಲು ಸಿದ್ಧರಾಗಿದ್ದಾರೆ ಎಂಬುದಕ್ಕೆ ಉದಾಹರಣೆ ಇಲ್ಲಿದೆ. 'ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಿ, ನ್ಯಾನೋ ಕಾರು ಪಡೆಯಿರಿ' ಎಂಬ ಹೊಸ ಕೊಡುಗೆಯಿದು!
ಇಷ್ಟು ಮಾತ್ರವೇ ಅಲ್ಲ ಸ್ವಾಮೀ, ಹೀರೋ ಹೋಂಡಾ ಬೈಕುಗಳು, ಟಿವಿಗಳು, ಮಿಕ್ಸರ್, ಗ್ರೈಂಡರ್‌ಗಳು ಇತ್ಯಾದಿತ್ಯಾದಿಗಳು ನಿಮಗೆ ಕಾದಿವೆ. ಆದರೆ ಇದಕ್ಕೆ ಒಂದು ಅರ್ಹತೆ ಇರಬೇಕಾಗುತ್ತದೆ. ಇಂಥದ್ದೊಂದು ಆಕರ್ಷಕ ಕೊಡುಗೆಯನ್ನು ಪ್ರಕಟಿಸಿರುವುದು ರಾಜಸ್ಥಾನದ ಜುಂಜುನು ಜಿಲ್ಲೆಯ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ. ನೀವು ಅಲ್ಲಿನ ನಿವಾಸಿಗಳಾಗಿರಬೇಕಾಗುತ್ತದೆ!
ಇಲಾಖೆಯು ಇಷ್ಟೊಂದು ಪರಿಶ್ರಮ ಪಡುತ್ತಿರುವುದೇಕೆಂದರೆ, ರಾಜ್ಯದಲ್ಲಿ ಸಂತಾನಹರಣ ಶಸ್ತ್ರಕ್ರಿಯೆಯಲ್ಲಿ ಕೈತಪ್ಪಿಹೋಗಿರುವ ಪ್ರಥಮ ಸ್ಥಾನವನ್ನು ಮರಳಿ ಪಡೆಯುವ ಪ್ರಯತ್ನವಿದು.
2003-04ರಲ್ಲಿ ಜುಂಜುನು ಜಿಲ್ಲೆ ಪ್ರಥಮ ಸ್ಥಾನದಲ್ಲಿತ್ತು. ಆದರೆ 2009-10ರಲ್ಲಿ ಅದರ ಪದಚ್ಯುತಿಯಾಗಿದ್ದು. ಅದು ಕೂಡ ಸಾಮಾನ್ಯವೇನಲ್ಲ, 27 ಸ್ಥಾನ ಕೆಳಗೆ! 2003-04ರಲ್ಲಿ 13,265 ಸಂತಾನಹರಣ ಶಸ್ತ್ರಕ್ರಿಯೆಗಳು ಆ ಜಿಲ್ಲೆಯಲ್ಲಿ ನಡೆದಿದ್ದರೆ, 2009-10ರಲ್ಲಿ ಅದರ ಪ್ರಮಾಣ 10,465.
ಈಗ, "ಗತ ವೈಭವ"ವನ್ನು ಮರಳಿ ಪಡೆಯಲೋಸುಗ ಜುಂಜುನು ಆರೋಗ್ಯ ಇಲಾಖೆಯು ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಸಂತಾನಹರಣ ಶಸ್ತ್ರಕ್ರಿಯೆ ಮಾಡಿಸಿಕೊಂಡವರೆಲ್ಲರಿಗೂ ಒಂದೊಂದು ಕೂಪನ್ ನೀಡಲಾಗುತ್ತದೆ. ಜುಲೈ 1ರಿಂದ ಸೆಪ್ಪೆಂಬರ್ 30ರವರೆಗೆ ಈ ಕೂಪನ್ ಲಭ್ಯವಿದ್ದು, ಬಳಿಕ ಅದನ್ನು ಡ್ರಾ ಮಾಡಲಾಗುತ್ತದೆ. ಲಕ್ಕಿ ಡ್ರಾದಲ್ಲಿ ವಿಜೇತರಿಗೆ ಒಂದು ನ್ಯಾನೋ ಕಾರು ಬಂಪರ್ ಬಹುಮಾನ, ಐದು ಹೀರೋ ಹೋಂಡ ಬೈಕುಗಳು, 21 ಎಲ್‌ಜಿ ಕಲರ್ ಟಿವಿಗಳು, ಏಳು ಮಿಕ್ಸರ್ ಮತ್ತು ಗ್ರೈಂಡರುಗಳು ಹಾಗೂ ಇನ್ನೂ ಒಂದಷ್ಟು ಸಮಾಧಾನಕರ ಬಹುಮಾನಗಳಿವೆ. ಜಿಲ್ಲೆಯಲ್ಲಿ ಸಂತಾನಹರಣ ಶಸ್ತ್ರಕ್ರಿಯೆ ಪ್ರೋತ್ಸಾಹಿಸುವುದಷ್ಟೇ ಇದರ ಉದ್ದೇಶ ಎಂದಿದ್ದಾರೆ ಜುಂಜುನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸೀತಾರಾಮ ಶರ್ಮಾ.
2011ರ ತಾತ್ಕಾಲಿಕ ಜನಗಣತಿಯಲ್ಲಿ ಜುಂಜುನು ಜಿಲ್ಲೆಯ ಜನಸಂಖ್ಯೆ 21.39 ಲಕ್ಷವಾಗಿದ್ದು, ಒಂದು ದಶಕದಲ್ಲಿ ಶೇ.11.8ರಷ್ಟು ಜನಸಂಖ್ಯೆ ಏರಿಕೆಯಾಗಿತ್ತು. ಇದೇನೂ ಕಳವಳಕಾರಿ ಅಂಶವಲ್ಲವಾದರೂ, ಸಂತಾನಹರಣ ಶಸ್ತ್ರಕ್ರಿಯೆಯನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶ ಎಂದಿದ್ದಾರೆ ಆರೋಗ್ಯಾಧಿಕಾರಿ. ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!