ಬಲಿಷ್ಠವಾದ ಲೋಕಪಾಲ ಕಾನೂನು ಜಾರಿಗೆ ತಂದು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು 74ರ ಹರೆಯದಲ್ಲೂ ಅತ್ತ ಇತ್ತ ಓಡಾಡುತ್ತಾ, ರಾಜಕೀಯ ಪಕ್ಷಗಳ ಮುಖಂಡರನ್ನು ಮನವೊಲಿಸುತ್ತಲೇ ಇರುವ ಅಣ್ಣಾ ಹಜಾರೆ ಶುಕ್ರವಾರ ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ದು, ಶನಿವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಭೇಟಿಗೂ ಅವಕಾಶ ಪಡೆದುಕೊಂಡಿದ್ದಾರೆ.
ಈಗಾಗಲೇ ಹಲವು ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ, ತಮ್ಮ ಜನ ಲೋಕಪಾಲ ಮಸೂದೆಯ ಕರಡು ಪ್ರತಿಯನ್ನು ನೀಡಿ, ಹೇಗಾದರೂ ಮಾಡಿ ಭ್ರಷ್ಟಾಚಾರ ನಿಲ್ಲಿಸಿ ಮತ್ತು ತಡೆಯಲು ಸಹಾಯ ಮಾಡಿ ಎಂದು ಕೋರಿಕೊಂಡಿದ್ದಾರೆ. ಅದರ ಅಂಗವಾಗಿ ಸರಕಾರ ಕರೆದಿರುವ ಸರ್ವ ಪಕ್ಷಗಳ ಸಭೆಗೆ ಮುನ್ನ ಎಲ್ಲ ನಾಯಕರನ್ನೂ ಈ ಇಳಿ ಹರಯದಲ್ಲಿ ಅಣ್ಣಾ ಭೇಟಿಯಾಗುತ್ತಿದ್ದಾರೆ.
ಬಿಜೆಪಿ ಮುಖಂಡರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹಜಾರೆ, ಸರಕಾರದ ಮತ್ತು ತಮ್ಮ ಗುಂಪು ಸಿದ್ಧಪಡಿಸಿದ ಎರಡೂ ಕರಡುಗಳನ್ನು ಬಿಜೆಪಿ ಮುಖಂಡರ ಗಮನಕ್ಕೆ ತಂದು, ಅದರಲ್ಲಿರುವ ಸಾಧ್ಯಾಸಾಧ್ಯತೆಗಳನ್ನೂ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರಲ್ಲದೆ, ಬಿಜೆಪಿಯಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದಿದ್ದಾರೆ.
ಈಗಾಗಲೇ ಸರಕಾರದ ಕೆಂಗಣ್ಣಿಗೆ ಗುರಿಯಾಗಿರುವ ಅಣ್ಣಾ ಹಜಾರೆ ಅವರು ಎಡಪಕ್ಷಗಳು ಸೇರಿದಂತೆ ಪ್ರತಿಪಕ್ಷ ನಾಯಕರನ್ನೂ ಭೇಟಿಯಾಗಿ, ಬಲಿಷ್ಠವಾದ ಕಾಯ್ದೆ ರೂಪಿಸಲು ಹೋರಾಟ ಮುಂದುವರಿಸಿದ್ದಾರೆ.
ಈ ಮಧ್ಯೆ, ಕಾಂಗ್ರೆಸ್ ಅಧ್ಯಕ್ಷೆ ಕೂಡ ತಮ್ಮ ಮನಸ್ಸು ಬದಲಾಯಿಸಿದ್ದು, ಅಣ್ಣಾ ಹಜಾರೆ ಭೇಟಿಗೆ ಶನಿವಾರ ಸಾಯಂಕಾಲ 4 ಗಂಟೆಯ ಸಮಯವನ್ನು ನೀಡಿದ್ದಾರೆ.